Advertisement

ಬದುಕು ಎಷ್ಟೊಂದು ಸುಂದರ!

01:38 AM Aug 27, 2020 | Hari Prasad |

ಪ್ರೇಮದಿಂದ ವಿಕಸನ, ಸ್ವಾರ್ಥದಿಂದ ಸಂಕುಚನ ಎನ್ನುತ್ತಾರೆ ತರುಣ ಸನ್ಯಾಸಿ ಸ್ವಾಮಿ ವಿವೇಕಾನಂದರು.

Advertisement

ಎಲ್ಲವೂ ಪ್ರೇಮದಿಂದಲೇ ವಿಕಾಸಗೊಳ್ಳುವುದಾದ್ದ ರಿಂದ ಬದುಕಿನ ಏಕಮಾತ್ರ ನಿಯಮವೆಂದರೆ ಅದು ಪ್ರೀತಿ.

ಯಾವನು ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುತ್ತಾನೆಯೋ ಅವನು ಬಾಳುತ್ತಾನೆ, ಸ್ವಾರ್ಥಿಗಳಾದವರು ಕುಗ್ಗುತ್ತ ಕುಗ್ಗುತ್ತ ನಶಿಸಿ ಹೋಗುತ್ತಾರೆ. ನಮ್ಮ ಉಸಿರಾಟದಂತೆ ನಿರ್ವ್ಯಾಜ ಪ್ರೇಮವು ಜೀವನದ ಅವಿಭಾಜ್ಯ ಅಂಗ – ಇದು ಸ್ವಾಮಿ ವಿವೇಕಾನಂದರು ಬೋಧಿಸಿದಂಥದ್ದು.

ಜಗತ್ತು ಎಷ್ಟು ಮತ್ತು ಹೇಗೆ ನಮ್ಮ ಗ್ರಹಿಕೆಗೆ ನಿಲುಕುತ್ತದೆ ಎಂಬುದು ನಾವು ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನಾವು ಹೇಗೆ ನೋಡುತ್ತೇವೆ ಎಂಬುದನ್ನು ಆಧರಿಸಿ ಜಗತ್ತು ಕೆಟ್ಟದಾಗಿ ಅಥವಾ ಸುಂದರವಾಗಿ ಕಾಣಿಸುತ್ತದೆ. ಆದ್ದರಿಂದಲೇ ಪ್ರತ್ಯಕ್ಷವಾಗಿ ಕಂಡರೂ ಪರಾಂಬರಿಸಿ ನೋಡು ಎಂಬ ನಾಣ್ನುಡಿ ಹುಟ್ಟಿಕೊಂಡಿರುವುದು. ಎಲ್ಲವೂ ನಾವು ಹೇಗೆ ಕಾಣುತ್ತೇವೆ ಎಂಬುದನ್ನು ಆಧರಿಸಿದೆ. ಎಲ್ಲವನ್ನೂ ಸರಿಯಾದ ಬೆಳಕಿನಲ್ಲಿ ಕಂಡರೆ ಬದುಕು ಸುಂದರವಾಗುತ್ತದೆ. ಅದನ್ನು ನಾವು ಕಲಿಯಬೇಕು.

ಪ್ರತಿಯೊಬ್ಬನಲ್ಲೂ ದೇವರಿದ್ದಾನೆ ಎಂಬುದನ್ನು ಆಚರಣೆಯಲ್ಲಿ ತರೋಣ. ಮನುಷ್ಯ ದೇಹವೇ ಒಂದು ದೇವಾಲಯ, ಅದರೊಳಗೆ ದೇವರಿದ್ದಾನೆ ಎಂಬುದು ನಮ್ಮ ನಡೆನುಡಿಗಳಲ್ಲಿ ನೆಲೆಯಾದರೆ ಎಲ್ಲರನ್ನೂ ಪ್ರೀತಿ ಗೌರವಗಳಿಂದ ಕಾಣುವುದು ಸಹಜವಾಗಿ ಸಾಧ್ಯವಾಗುತ್ತದೆ.

Advertisement

ಹಾಗೆಯೇ ನಮಗೆ ಸಾಧ್ಯವಿದ್ದರೆ ಯಾರಿಗಾದರೂ ಸಹಾಯ ಮಾಡೋಣ. ಆದರೆ ಯಾರನ್ನೂ ದೂರುವುದು, ದ್ವೇಷಿಸುವುದು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವುದು ಬೇಡ. ಪಾಪ ಎಂಬುದು ಇದ್ದರೆ ಅದು ಒಂದೇ – ಸ್ವತಃ ನಮ್ಮನ್ನು ಅಥವಾ ಇನ್ನೊಬ್ಬರನ್ನು ದುರ್ಬಲರು, ಕೆಟ್ಟವರು, ಅಸಮರ್ಥರು ಎಂದು ಭಾವಿಸುವುದು. ಹಾಗೆಯೇ, ನಮ್ಮಲ್ಲಿ ಅಥವಾ ಯಾರಲ್ಲೇ ಆಗಲಿ; ಇರುವ ಹಣದಿಂದ ಯಾರಿಗಾದರೂ ಉಪಕಾರ ಮಾಡಲು ಸಾಧ್ಯವಿದ್ದರೆ ಮಾತ್ರ ಅದಕ್ಕೆ ಅರ್ಥ ಮತ್ತು ಬೆಲೆ ಬರುವುದು; ಇಲ್ಲವಾದರೆ ಅದು ಕಾಗದದ ತುಣುಕುಗಳ ಅಥವಾ ಲೋಹದ ತುಂಡುಗಳ ರಾಶಿಯಷ್ಟೇ.

ನಾವು ವಿಕಸನ ಹೊಂದಬೇಕಾದರೆ ಬೆಳವಣಿಗೆ ನಮ್ಮೊಳಗಿನಿಂದ ನಡೆಯಬೇಕು. ಆ ವಿಕಸನ ಹೊಂದುವ ಬಗೆಯನ್ನು ಯಾರೂ ಕಲಿಸಿಕೊಡುವುದಕ್ಕೆ ಸಾಧ್ಯವಿಲ್ಲ. ಸಾಧನೆ ಮತ್ತು ವೈರಾಗ್ಯ, ಬ್ರಹ್ಮಚರ್ಯ ಗಳಿಂದ ನಾವೇ ಪರಿವರ್ತನೆಗೆ ತಯಾರಾಗಬೇಕು, ನಮ್ಮೊಳಗಿರುವ ಆತ್ಮನೇ ಅತೀ ದೊಡ್ಡ ಗುರು. ನಮ್ಮ ಆತ್ಮಸಾಕ್ಷಿಗೆ ನಿಷ್ಠವಾಗಿ ಬದುಕುವುದೇ ಅತೀ ದೊಡ್ಡ ಧರ್ಮಾಚರಣೆ.

ಬದುಕು ಅತ್ಯಂತ ಸುಂದರವಾಗಿದೆ ಎಂಬ ಭಾವನೆ ಮತ್ತು ಗಾಢ ನಂಬಿಕೆಯನ್ನು ಇರಿಸಿಕೊಂಡೇ ನಾವು ಬಾಳಬೇಕು. ಈ ಜಗತ್ತಿನಲ್ಲಿರುವ ಪ್ರತಿಯೊಂದಕ್ಕೂ ಒಂದು ಅರ್ಥವಿದೆ, ಎಲ್ಲವೂ ಸುಂದರವಾಗಿವೆ, ಪ್ರತಿಯೊಂದೂ ಅತ್ಯಂತ ಪವಿತ್ರ ಎಂಬ ನಂಬಿಕೆಯು ನಮ್ಮ ಬಾಳುವೆಯನ್ನು ಸುಂದರವಾಗಿಸುತ್ತದೆ. ಯಾವುದೋ ಒಂದು ಚೆನ್ನಾಗಿಲ್ಲ ಎಂಬುದಾಗಿ ನಮಗೆ ಅನ್ನಿಸಿದರೆ ಅದರರ್ಥ ಅದನ್ನು ಸರಿಯಾಗಿ ನೋಡಲು ನಮಗೆ ಗೊತ್ತಿಲ್ಲ ಎಂದೇ. ನಮ್ಮ ಆಲೋಚನೆಗಳಂತೆ ನಮ್ಮ ವ್ಯಕ್ತಿತ್ವ ಎನ್ನುವುದು ಇದೇ ಕಾರಣಕ್ಕಾಗಿ. ಎಲ್ಲರಿಗೂ ಒಳಿತನ್ನು ಬಯಸುವ ಸರ್ವೇಜನಾಃ ಸುಖೀನೋ ಭವಂತು ಎಂಬ ಉಕ್ತಿ ಹುಟ್ಟಿಕೊಂಡಿರುವುದು ಇದೇ ನೆಲೆಯಲ್ಲಿ.

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next