Advertisement

ಬೀಜ ಬಿತ್ತಿ ಬೆಳೆಯಲು ಕಲಿಸುವ ಬದುಕು

02:44 AM Sep 30, 2020 | Hari Prasad |

ಹಸಿದವನಿಗೆ ಆಹಾರ ನೀಡುವ ದಾನ ಒಂದು ಶ್ರೇಷ್ಠ ಕಾರ್ಯ ನಿಜ.

Advertisement

ಅದರ ಜತೆಗೆ ಅವನಿಗೆ ಬೀಜವನ್ನು ಒದಗಿಸಿ, ಗದ್ದೆ ಉತ್ತು ಬಿತ್ತಿ ಬೆಳೆಯುವುದನ್ನು ಹೇಳಿಕೊಟ್ಟರೆ ಬದುಕುವ ಕಲೆಯನ್ನು ಕಲಿಸಿದಂತಾಗುತ್ತದೆ.

ಒಂದು ಹೊತ್ತಿನ ಊಟ ಒದಗಿಸುವುದು ಆ ದಿನದ ತುರ್ತನ್ನಷ್ಟೇ ನೀಗಿಸೀತು.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ನಮ್ಮಲ್ಲಿ ಬೀಜ ಇದ್ದರೆ ಸಾಲದು, ಅದನ್ನು ಚೆನ್ನಾಗಿ ಬಿತ್ತಿ ಬೆಳೆಯುವ ಕಲೆಯೂ ಗೊತ್ತಿರಬೇಕು. ಅದಕ್ಕಿಂತ ಮುಖ್ಯವಾದದ್ದು ಬೀಜವನ್ನು ಏನು ಮಾಡಬೇಕು, ಏನು ಮಾಡಲು ಸಾಧ್ಯ ಎಂಬುದನ್ನು ತಿಳಿದುಕೊಂಡಿರುವುದು.

ತರಕಾರಿ ಬೆಳೆಗಾರರು ಆಯಾ ವರ್ಷ ಬಿತ್ತಿ ಬೆಳೆದ ಎಲ್ಲವನ್ನೂ ಮಾರಾಟ ಮಾಡುವುದಿಲ್ಲ ಅಥವಾ ಅಡುಗೆಗೆ ಉಪಯೋಗಿಸಿ ಮುಗಿಸುವುದಿಲ್ಲ. ಒಂದಷ್ಟನ್ನು ಬೀಜವಾಗಿ ಮುಂದಿನ ವರ್ಷಕ್ಕೆ ಉಳಿಸಿಕೊಂಡಿರುತ್ತಾರೆ. ಭತ್ತ ಅಥವಾ ಯಾವುದೇ ಆಹಾರ ಧಾನ್ಯವೂ ಹೀಗೆಯೇ. ಸ್ವಲ್ಪ ಮುಂದಿನ ವರ್ಷಕ್ಕೆ ಬೀಜವಾಗಿ ಬೇಕಾಗುತ್ತದೆ.
ಇದರ ಮೂರನೆಯ ಆಯಾಮ ಎಂದರೆ ನಾವು ಉಳಿಸಿಕೊಂಡಿರುವ ಬೀಜದಲ್ಲಿ ಸ್ವಲ್ಪವನ್ನು ಇತರರಿಗೂ ಹಂಚಿ ಎಲ್ಲರೂ ಬೆಳೆದು ಉಣ್ಣುವಂತೆ ಮಾಡುವುದು.

Advertisement

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲೊಂದು ಪುಟ್ಟ ಕತೆಯಿದೆ. ಅದು ಹಲವನ್ನು ಹೇಳುತ್ತದೆ. ಒಂದು ದೇಶದಲ್ಲಿ ನಾಲ್ಕು ಪಟ್ಟಣಗಳಿದ್ದವಂತೆ. ಎಲ್ಲ ಕಡೆಗಳಲ್ಲೂ ಜನರು ಹಸಿವಿನಿಂದ ಬಳಲುತ್ತಿದ್ದರು. ಎಲ್ಲ ಪಟ್ಟಣಗಳಲ್ಲಿಯೂ ಧಾನ್ಯಗಳಿಂದ ತುಂಬಿದ ತಲಾ ಒಂದು ಚೀಲಗಳಿದ್ದವು.

ಒಂದನೆಯ ಪಟ್ಟಣದಲ್ಲಿ ಧಾನ್ಯಗಳನ್ನು ಬೀಜವಾಗಿ ಉಪಯೋಗಿಸಬಹುದು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದ್ದರಿಂದ ಕೆಲವೇ ಮಂದಿ ಒಂದಷ್ಟು ದಿನ ರೊಟ್ಟಿ ಮಾಡಿ ತಿಂದರು. ಆ ಬಳಿಕ ಎಲ್ಲರೂ ಹಸಿವಿನಿಂದ ಕಂಗೆಟ್ಟರು.
ಎರಡನೆಯ ಪಟ್ಟಣದಲ್ಲಿ ಒಬ್ಬನಿಗೆ ಮಾತ್ರ ಧಾನ್ಯಗಳನ್ನು ಬೀಜವಾಗಿಯೂ ಉಪಯೋಗಿಸಬಹುದು ಎಂದು ತಿಳಿದಿತ್ತು. ಆತ ಬೀಜ ಬಿತ್ತಿದ. ಆದರೆ ಆ ಬಳಿಕ ಏನೂ ಮಾಡಲಿಲ್ಲ. ಎಲ್ಲರೂ ಹಸಿವಿನಿಂದ ಬಳಲಿದರು.

ಮೂರನೆಯ ಪಟ್ಟಣದಲ್ಲಿಯೂ ಧಾನ್ಯವನ್ನು ಬೀಜವಾಗಿ ಉಪಯೋಗಿಸುವ ಬಗ್ಗೆ ತಿಳಿದಿದ್ದ ಒಬ್ಬನಿದ್ದ. ಆತ ಎಲ್ಲರಿಗೂ ವ್ಯವಸಾಯ ಮಾಡುವುದು ಹೇಗೆ ಎಂದು ಹೇಳಿಕೊಟ್ಟ. ಆದರೆ ಅದಕ್ಕೆ ಪ್ರತಿಯಾಗಿ ತಾನೇ ರಾಜನಾಗಬೇಕು ಎಂದ. ಎಲ್ಲರೂ ಬೇಸಾಯ ಮಾಡಿ ಆಹಾರ ಬೆಳೆದರು, ಆದರೆ ಆತನ ಆಳುಗಳಾದರು.

ನಾಲ್ಕನೆಯ ಪಟ್ಟಣದಲ್ಲಿಯೂ ವ್ಯವಸಾಯದ ಬಗ್ಗೆ ತಿಳಿದಿದ್ದ ಒಬ್ಬನಿದ್ದ. ಆತ ಎಲ್ಲರಿಗೂ ಬೀಜ ಹಂಚಿದ, ವ್ಯವಸಾಯ ತಿಳಿಸಿಕೊಟ್ಟ. ಎಲ್ಲರೂ ಧಾನ್ಯ ಬೆಳೆದರು, ಉಂಡು ಸುಖವಾಗಿದ್ದರು. ನಮ್ಮಲ್ಲಿ ಇರುವ ವಿದ್ಯೆ, ವಸ್ತು, ವಿಚಾರ, ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬ ವಿಚಾರವನ್ನು ಇದು ಹೇಳುತ್ತದೆ.

ನಾವು ಚೆನ್ನಾಗಿರುವುದು ಒಂದು ರೀತಿಯ ಬದುಕು. ನಮ್ಮೊಂದಿಗೆ ಎಲ್ಲರೂ ಚೆನ್ನಾಗಿರಬೇಕು ಎಂದು ಬಯಸಿ, ಅದಕ್ಕಾಗಿ ಶ್ರಮಿಸುತ್ತ ಬದುಕುವುದು ಇನ್ನೊಂದು. ಎರಡನೆಯ ದಾರಿ ಶ್ರೇಷ್ಠ ಅನ್ನಿಸಿಕೊಳ್ಳುತ್ತದೆ. ಅದು ಬದುಕಿಗೊಂದು ಅರ್ಥವನ್ನು ಕೊಡುತ್ತದೆ. ಮನುಷ್ಯ ಸಮೂಹಜೀವಿ ಎನ್ನುವುದು ಅಕ್ಷರಾರ್ಥದಲ್ಲಿ ನಿಜವಾಗುವುದು ಆಗಲೇ.

ಎಲ್ಲರ ಒಳಿತಿಗಾಗಿ ಬದುಕುವುದರಿಂದ ನಮ್ಮ ಜೀವನ ಕೂಡ ಸಕಾರಾತ್ಮಕ ನೆಲೆಗಟ್ಟಿನಲ್ಲಿ ಹೊಳೆಯುತ್ತದೆ. ಇರುವ ಧಾನ್ಯವನ್ನು ಆಹಾರಕ್ಕಿಂತ ಭಿನ್ನವಾಗಿ ಬಳಸುವ ಕಲೆ ತಿಳಿದಿರುವುದು, ಅದನ್ನು ತನ್ನ ಗಳಿಕೆಗಾಗಿ ಉಪಯೋಗಿಸುವುದು ಮತ್ತು ಎಲ್ಲರ ಕಲ್ಯಾಣಕ್ಕಾಗಿ ಬಳಕೆ – ಈ ಮೂರೂ ಭಿನ್ನ. ಕೊನೆಯ ಮಾರ್ಗವೇ ನಮ್ಮ ಬದುಕು ಸುಖವಾಗಿರಲು ಕಾರಣವಾಗುತ್ತದೆ.

(ಕಥೆಯೊಂದರ ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next