Advertisement

ವರ್ತಮಾನವನ್ನು ಚೆನ್ನಾಗಿ ನಿರ್ವಹಿಸಿ, ಉಜ್ವಲ ಭವಿಷ್ಯ ತಾನಾಗಿ ಅರಳುತ್ತದೆ

03:38 AM Sep 02, 2020 | Hari Prasad |

ಒಮ್ಮೆ ಹುಡುಗನೊಬ್ಬ ಸದ್ಗುರು ಅವರನ್ನು ಪ್ರಶ್ನಿಸಿದ: ನಾನು ಹತ್ತನೆಯ ತರಗತಿಯಲ್ಲಿದ್ದೇನೆ. ಇಷ್ಟು ಹೊತ್ತಿಗೆ ಭವಿಷ್ಯದಲ್ಲಿ ನಾನು ಏನಾಗಬೇಕು, ಯಾವ ಸಾಧನೆ ಮಾಡಬೇಕು ಎಂಬ ಸ್ಥೂಲ ಚಿತ್ರಣ ನನ್ನಲ್ಲಿ ಇರಬೇಕು ಎನ್ನುತ್ತಾರೆ ಕೆಲವರು.

Advertisement

ಮುಂದೆ ಏನಾಗಬೇಕು ಎಂಬುದೇ ಗೊತ್ತಿಲ್ಲದೆ ಇದ್ದರೆ ಹೇಗೆ ಎಂಬುದು ಅವರ ಮಾತು. ಆದರೆ ಇದು ಸರಿಯಲ್ಲ ಎಂಬುದು ನನ್ನ ಭಾವನೆ. ಈ ಬಗ್ಗೆ ಬೆಳಕು ಬೀರುವಿರಾ?

ಸದ್ಗುರು ಅವರ ಉತ್ತರ ಮಿಂಚಿನಂತಿತ್ತು, “ನೀನು ನಿನ್ನ ವರ್ತಮಾನವನ್ನು ಚೆನ್ನಾಗಿ ನಿರ್ವಹಿಸು; ಒಳ್ಳೆಯ ಭವಿಷ್ಯ ತಾನಾಗಿ ಉಂಟಾಗುತ್ತದೆ!’

ಸದಾ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ, ಆಲೋಚಿಸುತ್ತ ಇರುವವರು ಅದರಲ್ಲೇ ಕಳೆದುಹೋಗುತ್ತಾರೆ ಎನ್ನುತ್ತಾರೆ ಸದ್ಗುರು. ಅದನ್ನೇ ಮಾಡುತ್ತಾ ಇದ್ದರೆ ಭವಿಷ್ಯ ಮುಂದು ಮುಂದಕ್ಕೆ ಹೋಗುತ್ತಾ ಇರುತ್ತದೆ, ನಾವೆಂದೂ ಅದನ್ನು ತಲುಪುವುದಿಲ್ಲ.

ಭವಿಷ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ವರ್ತಮಾನದಲ್ಲಿ ಚೆನ್ನಾಗಿ ಕೆಲಸ ಮಾಡಬೇಕು, ಶ್ರಮಿಸಬೇಕು. ಹತ್ತು ಅಥವಾ ಹನ್ನೆರಡನೆಯ ತರಗತಿಯ ವಯ ಸ್ಸಿನಲ್ಲಿ ಮಕ್ಕಳು ಸೀಮಿತ ಅನುಭವ, ಎಕ್ಸ್‌ಪೋಶರ್‌ ಹೊಂದಿರುತ್ತಾರೆ. ಆ ಸಮಯದಲ್ಲಿ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಮಾಗಿರುವುದಿಲ್ಲ.

Advertisement

ಆಗ ಮಕ್ಕಳ ಮುಖ್ಯ ಕೆಲಸ ಎಂದರೆ ತಯಾರಾಗುವುದು – ದೇಹವನ್ನು ಯೋಗ್ಯವಾಗಿ, ಆರೋಗ್ಯಕರವಾಗಿ ಬೆಳೆಸುವುದು, ಮೆದುಳು ಮತ್ತು ಬುದ್ಧಿಗೆ ಒಳ್ಳೊಳ್ಳೆಯ ವಿಚಾರಗಳನ್ನು, ಆಲೋಚನೆಗಳನ್ನು ಉಣಿಸುವುದು, ಸುತ್ತಮುತ್ತಲ ಸಂಗತಿಗಳನ್ನು ನಿಜಾರ್ಥದಲ್ಲಿ ಅರ್ಥ ಮಾಡಿಕೊಳ್ಳುವ ಶಕ್ತಿಗಳನ್ನು ಹರಿತಗೊಳಿಸಿಕೊಳ್ಳುವುದು, ಕೌಶಲಗಳನ್ನು ಸಿದ್ಧಿಸಿಕೊಳ್ಳುವುದು. ಭವಿಷ್ಯದಲ್ಲಿ ನಮ್ಮೆದುರಿಗೆ ಏನು ಒದಗಲಿದೆ ಎಂಬುದು ನಮಗೆ ಗೊತ್ತಿಲ್ಲ. ಯಾವುದೂ ಒದಗಬೇಕಾಗಿಯೂ ಇಲ್ಲ. ಈಗಿನ ನಮ್ಮ ತಯಾರಿ ಚೆನ್ನಾಗಿ ಆದರೆ ಇದುವರೆಗೆ ಯಾರಿಗೂ ಸಾಧ್ಯವಾಗದ ವಿಶಿಷ್ಟ ಭವಿಷ್ಯವನ್ನು ಸಾಧ್ಯ ಮಾಡಿಕೊಳ್ಳಬಹುದು.

ಭವಿಷ್ಯದಲ್ಲಿ ಏನು ಮಾಡಬೇಕು, ಏನಾಗಬೇಕು ಎಂದು ಆಲೋಚಿಸಿದರೆ ಈಗಾಗಲೇ ಆಗಿಹೋದ ಸಾಧನೆಗಳೇ ಉದಾಹರಣೆಯಾಗಿ ನಿಲುಕುತ್ತವೆ. ಸಚಿನ್‌ನಂತಹ ಬ್ಯಾಟ್ಸ್‌ಮನ್‌, ಬಿಲ್‌ ಗೇಟ್ಸ್‌ ನಂತಹ ಉದ್ಯಮಿ, ಐನ್ನ್ ಸ್ಟೀ‌ನಂತಹ ವಿಜ್ಞಾನಿ, ಕಲ್ಪನಾ ಚಾವ್ಲಾಳಂತಹ ಗಗನಯಾತ್ರಿ… ಹೀಗೆ. ಭವಿಷ್ಯದ ಬಗ್ಗೆ ಚಿಂತಿಸದೆ ವರ್ತಮಾನದಲ್ಲಿ ಹೆಚ್ಚು ಶ್ರಮ ವಹಿಸಿದರೆ ಇದುವರೆಗೆ ಯಾರೂ ತುಳಿಯದ ವಿಶಿಷ್ಟ ಸಾಧನೆ ನಮ್ಮದಾಗಬಲ್ಲುದು. ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾವಿಶೇಷಗಳಿಗೆ ಹೆಚ್ಚು ಬೆಲೆಯಿಲ್ಲ.

ಶಿಕ್ಷಕ- ಶಿಕ್ಷಕಿಯರು ಹೇಳಿದ್ದನ್ನಷ್ಟೇ ಮಾಡಬೇಕು. ಅದಕ್ಕಿಂತ ಹೆಚ್ಚಿನದ್ದನ್ನು ಮಾಡಿದರೆ, ಹೊಸತನ್ನು ಬರೆದರೆ, ಹೇಳಿದರೆ ಅದು ಸರಿಯಲ್ಲ ಎಂಬ ವಾತಾವರಣವಿದೆ. ಈ ಭೂಮಿಯ ಮೇಲೆ ಜನಿಸಿ ಅತ್ಯದ್ಭುತ ಸಾಧನೆಗಳನ್ನು ಮಾಡಿದ ಅನೇಕ ಮಂದಿ ಶಾಲಾ ಶಿಕ್ಷಣದಿಂದ ಹೊರನೂಕಲ್ಪಟ್ಟವರಾಗಿದ್ದರು. ಆಲ್ಬರ್ಟ್‌ ಐನ್ ಸ್ಟೀನ್‌ನನ್ನೇ ತೆಗೆದುಕೊಳ್ಳಿ. ಆತ ಶಾಲೆಯಲ್ಲಿ ಅನುತ್ತೀರ್ಣನಾಗಿದ್ದ. ಇದರರ್ಥ ಐನ್‌ ಸ್ಟೀನ್‌ಗೆ ಕಲಿಕೆ – ಶಾಲೆಯೆಂದರೆ ತಿರಸ್ಕಾರವಿತ್ತು ಎಂದರ್ಥವಲ್ಲ. ಶಿಕ್ಷಣ ವ್ಯವಸ್ಥೆಗೆ ಐನ್ ಸ್ಟೀನ್‌ನಂತಹ ಜೀನಿಯಸ್‌ನ ಬಗ್ಗೆ ತಿರಸ್ಕಾರ ಇತ್ತು!
ಭವಿಷ್ಯದ ಬಗ್ಗೆ ಚಿಂತೆ ಮಾಡುವುದನ್ನು, ಆಲೋಚಿಸುವುದನ್ನು ಬಿಟ್ಟುಬಿಡಿ. ಕೈಯಲ್ಲಿರುವ ವರ್ತಮಾನವನ್ನು ಚೆನ್ನಾಗಿ ನಿರ್ವಹಿಸಿ; ಉಜ್ವಲ ಭವಿಷ್ಯ ತನ್ನಷ್ಟಕ್ಕೆ ತಾನಾಗಿ ಅರಳುತ್ತದೆ.

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next