Advertisement

ಚಿಕ್ಕಬಳ್ಳಾಪುರದಲ್ಲಿ ಅತಿದೊಡ್ಡ ರೈತ ಉತ್ಪಾದಕರ ಸಂಸ್ಥೆ

10:50 PM Dec 05, 2022 | Team Udayavani |

ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ಈಶ ಪ್ರತಿಷ್ಠಾನ “ಕಾವೇರಿ ಕೂಗು’ ಹಾಗೂ “ಮಣ್ಣು ಉಳಿಸಿ’ ಅಭಿಯಾನದ ಬಳಿಕ ಈಗ ದೇಶಕ್ಕೆ ಮಾದರಿಯಾದ ಅತಿದೊಡ್ಡ ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದೆ.

Advertisement

ಚಿಕ್ಕಬಳ್ಳಾಪುರದ ಆಸುಪಾಸು ಅಥವಾ ಬೆಂಗಳೂರು- ಮೈಸೂರು ಮಾರ್ಗದಲ್ಲಿ ಈ ರೈತ ಉತ್ಪಾದಕರ ಸಂಸ್ಥೆ (ಎಫ್ಪಿಒ) ಅಸ್ತಿತ್ವಕ್ಕೆ ಬರಲಿದೆ. ಮಣ್ಣಿನ ಪುನರುಜ್ಜೀವಗೊಳಿಸುತ್ತಿರುವಂತೆಯೇ ಇದು “ಸಹಕಾರ ಕೃಷಿ’ಗೆ ಪುನರುಜ್ಜೀವ ಸಿಗಲಿದೆ. ಅಲ್ಲದೆ ಆ ಭಾಗದ ರೈತರ ಜೀವನಮಟ್ಟದಲ್ಲಿ ಗಮನಾರ್ಹ ಬದಲಾವಣೆಗೂ ಕಾರಣವಾಗಲಿದೆ ಎಂದು ಈಶ ಪ್ರತಿಷ್ಠಾನದ ಸದ್ಗುರು ಜಗ್ಗಿವಾಸುದೇವ ಹೇಳಿದ್ದಾರೆ.

ಸೋಮವಾರ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ನಗರದಲ್ಲಿ ಮಣ್ಣು ಉಳಿಸಿ ಅಭಿಯಾನದ ರ್ಯಾಲಿಯಲ್ಲಿ ಭಾಗವಹಿಸಿದ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದ್ದು, ಎಂಟು ತಿಂಗಳು ಪೂರೈಸಿದ ಮಣ್ಣು ಉಳಿಸಿ ಅಭಿಯಾನ ಸಾಗಿಬಂದ ಹಾದಿ, ಭವಿಷ್ಯದ ಯೋಜನೆಗಳ ಕುರಿತು ಹಂಚಿಕೊಂಡರು.

ಪ್ರತಿಷ್ಠಾನವು ಸುಮಾರು 23 ಎಫ್ಪಿಒಗಳನ್ನು ರಚಿಸಿದೆ. ಈ ಪೈಕಿ ತಮಿಳುನಾಡಿನ ಕೊಯಮತ್ತೂರಿನಲ್ಲಿ 1,500 ರೈತರನ್ನು ಒಳಗೊಂಡ ಸ್ವತಃ ಪ್ರತಿಷ್ಠಾನದ ಎಫ್ಪಿಒ ದೇಶದಲ್ಲಿ ಎರಡನೇ ಸ್ಥಾನ ಪಡೆದಿದ್ದು, ಕಳೆದ ವರ್ಷ ಆ ಸಂಸ್ಥೆಯ ರೈತರು ಶೇ. 73ರಷ್ಟು ಹೆಚ್ಚು ಆದಾಯ ಗಳಿಸಿದ್ದಾರೆ ಎಂದರು.

ರಾಜ್ಯದ ಚಿಕ್ಕಬಳ್ಳಾಪುರ ಅಥವಾ ಬೆಂಗಳೂರು- ಮೈಸೂರು ನಡುವೆ ಸುಮಾರು 25 ಸಾವಿರ ರೈತರನ್ನು ಒಳಗೊಂಡ ಎಫ್ಪಿಒ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಸ್ಥೆಯನ್ನು ಸಂಪೂರ್ಣವಾಗಿ ರೈತರೇ ಮುನ್ನಡೆ ಸಲಿದ್ದಾರೆ. ಆ ಭಾಗದಲ್ಲಿ ಏನು ಬೆಳೆಯಬೇಕು ಎನ್ನುವುದರಿಂದ ಹಿಡಿದು ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ರೂಪಿಸಲಾಗುವುದು. ಇದು ದೇಶಕ್ಕೆ ಮಾದರಿಯನ್ನಾಗಿ ಮಾಡುವ ಗುರಿ ಇದ್ದು, ಆ ಭಾಗದ ರೈತರ ಜೀವನಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕೂಡ ಆಗಲಿದೆ ಎಂದು ಹೇಳಿದರು.

Advertisement

ಮಣ್ಣು ಉಳಿಸಿ ಅಭಿಯಾನ ಕಳೆದ ಎಂಟು ತಿಂಗಳಲ್ಲಿ 93 ದೇಶಗಳನ್ನು ತಲುಪಿದ್ದು, 81 ದೇಶಗಳಿಂದ ಪೂರಕ ಸ್ಪಂದನೆ ದೊರಕಿದೆ. ಅಲ್ಲಿ ಮಣ್ಣು ನೀತಿ ರೂಪಿಸಲು ಉತ್ಸುಕರಾಗಿದ್ದಾರೆ. ಎಂದು ಪ್ರಶ್ನೆಯೊಂದಕ್ಕೆ ಸದ್ಗುರು ಪ್ರತಿಕ್ರಿಯಿಸಿದರು.

5 ಸೆಕೆಂಡಿಗೊಂದು ಫ‌ುಟ್ಬಾಲ್‌ನಷ್ಟು ಮಣ್ಣು ಮರುಭೂಮಿ!
“ಪ್ರತಿ 5 ಸೆಕೆಂಡಿಗೆ ಒಂದು ಫ‌ುಟ್ಬಾಲ್‌ನಷ್ಟು ಜಾಗದ ಮಣ್ಣನ್ನು ನಾವು ಕಳೆದುಕೊಳ್ಳುತ್ತಿದ್ದೇವೆ’ ಎಂದು ಸದ್ಗುರು ಕಳವಳ ವ್ಯಕ್ತಪಡಿಸಿದರು. ಸೋಮವಾರ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಈಶ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಮಣ್ಣಿನ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರ‍್ಯಾಲಿಯು ನಗರದ ಹೆಬ್ಟಾಳ ಫ್ಲೈಓವರ್‌, ಅರಮನೆ ಮೈದಾನ, ವಿಂಡ್ಸರ್‌ ಮ್ಯಾನರ್‌ ಸೇತುವೆ, ರೇಸ್‌ಕೋರ್ಸ್‌ ರಸ್ತೆ, ಶೇಷಾದ್ರಿಪುರ ರಸ್ತೆ, ಸ್ವಾತಂತ್ರ್ಯ ಉದ್ಯಾನ, ವಿಧಾನಸೌಧದ ಮೂಲಕ ಹಾದು ವಿಠಲ್‌ ಮಲ್ಯರಸ್ತೆಯ ಜೆ.ಡಬ್ಲ್ಯು. ಮೇರಿಯಟ್‌ ಹೊಟೇಲ್‌ನಲ್ಲಿ ಅಂತ್ಯಗೊಂಡಿತು. ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಜ. 15ಕ್ಕೆ ಆದಿಯೋಗಿ ಪ್ರತಿಮೆ ಅನಾವರಣ
ಬರುವ ಸಂಕ್ರಾಂತಿಗೆ ಚಿಕ್ಕಬಳ್ಳಾಪುರದಲ್ಲಿ ಈಶ ಪ್ರತಿಷ್ಠಾನದ ಯೋಗ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಆದಿಯೋಗಿಯ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು ಸದ್ಗುರು ಜಗ್ಗಿ ವಾಸುದೇವ ತಿಳಿಸಿದರು.

112 ಅಡಿ ಎತ್ತರದ ಈ ಪ್ರತಿಮೆಯನ್ನು 2023ರ ಜ. 15ರಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅನಾವರಣಗೊಳಿಸಲಿದ್ದಾರೆ. ಉದ್ದೇಶಿತ ಯೋಗ ಕೇಂದ್ರವು ಎಲ್ಲ ಪ್ರಕಾರದ ಯೋಗಾಭ್ಯಾಸದ ಪರಿಕಲ್ಪನೆಯನ್ನು ಹೊಂದಿರಲಿದ್ದು, ಮನುಷ್ಯನ ದೇಹದ ಆವಶ್ಯಕತೆಗೆ ಅನುಗುಣವಾದ ಯೋಗಾಭ್ಯಾಸ ಇಲ್ಲಿ ದೊರೆಯಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next