ಪ್ರಕೃತಿಯಲ್ಲಿ ಅನೇಕ ವೃತ್ತಗಳಿರುತ್ತವೆ. ಭೂಮಿ ಸಹಿತ ಗ್ರಹಗಳು ವೃತ್ತಾಕಾರವಾಗಿ ಸೂರ್ಯನಿಗೆ ಸುತ್ತುಹಾಕುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಹೊರಟಲ್ಲಿಗೇ ಬಂದು ತಲುಪಬೇಕು – ಇದೂ ಒಂದು ವೃತ್ತ. ಹುಟ್ಟು ಮತ್ತು ಮರಣಗಳ ನಡುವಣ ಜೀವನ ಕೂಡ ಒಂದು ವೃತ್ತವೇ. ಗೂಡಿನಿಂದ ಹೊರಟ ಇರುವೆ ಆಹಾರ ಹೊತ್ತುಕೊಂಡು ಮತ್ತೆ ಗೂಡಿಗೆ ಬರುತ್ತದೆ. ಇವೆಲ್ಲವೂ ನೈಸರ್ಗಿಕ. ಈ ವೃತ್ತಗಳನ್ನು ರಚಿಸುವುದಕ್ಕೆ ಕೈವಾರ ಬೇಕಾಗಿಲ್ಲ. ನೂಲು ಹಿಡಿದು ಅಳೆಯ ಬೇಕಾಗಿಲ್ಲ. ಇವೆಲ್ಲವೂ ತನ್ನಷ್ಟಕ್ಕೆ ತಾನು ಆಗುವಂಥದ್ದು. ಜೇನು ಗೂಡಿನಿಂದ ಮೈಲು ಗಟ್ಟಲೆ ದೂರ ಮಕರಂದ ಹುಡುಕಿ ಹಾರುವ ಜೇನ್ನೊಣಕ್ಕೆ ಗೂಗಲ್ ಮ್ಯಾಪ್ ಕೊಟ್ಟರೆ ಅನರ್ಥವಾದೀತು. ಅದು ಎಷ್ಟೇ ದೂರ ಹೋದರೂ ತನ್ನ ದಾರಿ ಹಿಡಿದು ಗೂಡಿಗೆ ಮರಳುತ್ತದೆ. ದೂರದ ಸೈಬೀರಿಯಾದಿಂದ ಪ್ರತೀ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಹಕ್ಕಿಗಳಿಗೆ ಯಾರೂ ದಾರಿ ತೋರಿಸಿ ಕೊಡುವುದಿಲ್ಲ. ಅವುಗಳ ದೇಹದಲ್ಲಿಯೇ ವಲಸೆಯ ಕಾಲ, ದಾರಿ, ಹಾರಬೇಕಾದ ದೂರ ಎಲ್ಲವೂ ಪೂರ್ವನಿಶ್ಚಿತ.
ನಾವು ಕೂಡ ಹೀಗೆಯೇ ನಿಸರ್ಗದ ಕರೆಗೆ ಓಗೊಟ್ಟು ಬದುಕಿದರೆ ಹೆಚ್ಚು ಸುಂದರವಾದ ಜೀವನವನ್ನು ನಡೆಸು ವುದು ಸಾಧ್ಯವಾಗಬಲ್ಲುದು.
ನೀವು ಸಹಸ್ರಪದಿಯನ್ನು ಕಂಡೇ ಇರುತ್ತೀರಿ. ಸಹಸ್ರಪದಿಗೆ ಕನಿಷ್ಠ ನೂರಾ ದರೂ ಕಾಲುಗಳಿರಬಹುದು. ಆ ಕಾಲುಗಳು ಲಯಬದ್ಧವಾಗಿ ಒಂದರ ಹಿಂದೊಂದು ಚಲಿಸುತ್ತ ಸಹಸ್ರಪದಿ ಮುಂದುಮುಂದಕ್ಕೆ ಹೋಗುತ್ತದೆ. ಅದರ ನಡಿಗೆಯನ್ನು ಗಮನಿಸಿದರೆ ಆ ಕಾಲುಗಳು ನೀರಿನ ಅಲೆಯ ಹಾಗೆ ಚಲಿಸುವುದನ್ನು ಕಾಣಬಹುದು.
ಒಮ್ಮೆ ಒಂದು ಕಪ್ಪೆ ಕೊಳದ ಬದಿ ಯಲ್ಲಿ ಕುಳಿತಿತ್ತು. ಅದು ಸಾಮಾನ್ಯ ಕಪ್ಪೆಯಲ್ಲ, ಬಲು ದೊಡ್ಡ ತಣ್ತೀಜ್ಞಾನಿ. ಅದು ಯಾವುದೋ ವಿಚಾರವಾಗಿ ಗಹನ ಚಿಂತನೆ ನಡೆಸುತ್ತಿರುವಾಗ ಒಂದು ಸಹಸ್ರಪದಿ ಮೆಲ್ಲಮೆಲ್ಲನೆ ನಡೆಯುತ್ತ ಬರುವುದು ಅದಕ್ಕೆ ಕಾಣಿಸಿತು.
ಸಹಸ್ರಪದಿಯನ್ನು ಕಂಡು ಕಪ್ಪೆಗೆ ಬಹಳ ಚಿಂತೆಯಾಯಿತು. ನಾಲ್ಕು ಕಾಲು ಗಳಲ್ಲಿ ಚಲಿಸುವುದು ಕೆಲವೊಮ್ಮೆ ಬಹಳ ಕಷ್ಟದ ಕೆಲಸ. ಆದರೆ ಈ ಜೀವಿಗೆ ನೂರಾರು ಕಾಲುಗಳಿವೆ! ಅಷ್ಟು ಕಾಲು ಗಳಲ್ಲಿ ನಡೆಯುವುದು ಪವಾಡವೇ ಸರಿ. ಯಾವ ಕಾಲನ್ನು ಮೊದಲು, ಯಾವು ದನ್ನು ಆ ಬಳಿಕ, ಅನಂತರ ಯಾವುದು ಎಂದು ನಿರ್ಧರಿಸುವುದು ಹೇಗೆ! ಅಷ್ಟು ಕಾಲುಗಳನ್ನು ಒಂದರ ಅನಂತರ ಒಂದು ಸತತವಾಗಿ ಚಲಿಸುತ್ತ ಮುನ್ನಡೆಯು ವುದು ಪವಾಡಕ್ಕಿಂತ ಏನೇನೂ ಕಡಿಮೆಯಲ್ಲ ಎಂದು ಕೊಂಡಿತು ತಣ್ತೀಜ್ಞಾನಿ ಕಪ್ಪೆ. ಹಾಗಾಗಿ ಅದು ಸಹಸ್ರ ಪದಿಯನ್ನು ತಡೆದು ಪ್ರಶ್ನಿಸಿತು.
“ಓ ಮಹಾನುಭಾವ, ಯಾವ ಕಾಲು ಮೊದಲು, ಯಾವ ಕಾಲು ಅನಂತರ, ಆ ಬಳಿಕ ಎಂಬುದನ್ನು ಹೇಗೆ ನಿರ್ಧರಿಸಿ ನಡೆಯುತ್ತೀ?’
ಸಹಸ್ರಪದಿಗೆ ಇದು ಜೀವಮಾನ ದಲ್ಲಿಯೇ ಹೊಸ ಪ್ರಶ್ನೆ. “ನಾನು ಹುಟ್ಟಿದ ಬಳಿಕ ಹೀಗೆ ನಡೆಯುತ್ತಲೇ ಇದ್ದೇನೆ. ನೋಡೋಣ, ಈಗ ಆ ಬಗ್ಗೆ ನಾನು ಆಲೋಚನೆ ಮಾಡಿ ಹೇಳುತ್ತೇನೆ’.
ಈಗ ಹೊಸ ವಿಚಾರ ಸಹಸ್ರಪದಿಯ ಅಂತಃಪ್ರಜ್ಞೆಯನ್ನು ಹೊಕ್ಕಿತ್ತು. ಯಾವ ಕಾಲು ಮೊದಲು, ಯಾವ ಕಾಲು ಅನಂತರ ಎಂದು ಆಲೋಚಿಸುತ್ತ ಸಹಸ್ರಪದಿ ನಿಂತಲ್ಲೇ ನಿಂತಿತು. ಅದಕ್ಕೆ ಒಂದು ಹೆಜ್ಜೆ ಕೂಡ ಮುಂದಿಡಲಿಕ್ಕೆ ಆಗಲಿಲ್ಲ. ಆ ಕಾಲು, ಈ ಕಾಲು ಎಂದು ಒದ್ದಾಡಿ ಅದು ಧಡಕ್ಕನೆ ಮಗುಚಿತು.
ಬಳಿಕ ಅದು ಕಪ್ಪೆಯನ್ನು ನೋಡಿ ಕೈಮುಗಿದು, “ಓ ತಣ್ತೀಜ್ಞಾನಿ ಕಪ್ಪೆ ರಾಯರೇ, ದಯವಿಟ್ಟು ಈ ಪ್ರಶ್ನೆಯನ್ನು ಇನ್ನೊಂದು ಸಹಸ್ರಪದಿಗೆ ಕೇಳಬೇಡಿರಿ. ನಾನು ಹುಟ್ಟಿದಾರಭ್ಯ ನನ್ನಷ್ಟಕ್ಕೆ ನಾನು ನಡೆಯುತ್ತಿದ್ದೆ. ಈಗ ನೀವು ಒಂದು ಪ್ರಶ್ನೆ ಕೇಳಿ ನನ್ನನ್ನು ಕೊಂದುಬಿಟ್ಟಿರಿ. ಈಗ ಮುಂದಕ್ಕೆ ಹೋಗಬೇಕು ಎಂದಾಕ್ಷಣ ನೂರಾರು ಕಾಲುಗಳಿವೆ, ಯಾವುದು ಮೊದಲು, ಯಾವುದು ಅನಂತರ ಎಂಬುದೇ ತಲೆಗೆ ಬರುತ್ತದೆ…’
ನಾವು ಕೂಡ ಹಾಗೆಯೇ. ಬದುಕು ತಾನಾಗಿ ತೆರೆದುಕೊಳ್ಳಲಿ. ಹೆಚ್ಚು ತಲೆ ಕೆಡಿಸಿಕೊಂಡರೆ ಒಂದು ಹೆಜ್ಜೆ ಕೂಡ ಮುಂದಿಡುವುದಕ್ಕೆ ಆಗುವುದಿಲ್ಲ.
(ಸಾರ ಸಂಗ್ರಹ)