Advertisement

ಸ್ವರ್ಗದತ್ತ ಉತ್ಥಾನ, ನರಕದತ್ತ ಅಧಃಪತನ

01:43 AM Jan 11, 2021 | Team Udayavani |

ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಪ್ರಖ್ಯಾತ ಚಿತ್ರಕಾರ ನಿದ್ದ. ಒಂದು ಬಾರಿ ಅವನಿಗೆ ಅತ್ಯುತ್ಕೃಷ್ಟ ಭಾವಚಿತ್ರವೊಂದನ್ನು ಚಿತ್ರಿಸುವ ಬಯಕೆಯಾಯಿತು. ಆತ ಆರಿಸಿಕೊಂಡ ವಿಷಯ: ಮುಖದಲ್ಲಿ ದೇವರಂತಹ ಮಂದಹಾಸ, ಶಾಂತಿ, ಜೀವನೋತ್ಸಾಹವನ್ನು ಹೊರಸೂಸುವ ಒಬ್ಬ ವ್ಯಕ್ತಿಯ ಮುಖ. ಅದಕ್ಕಾಗಿ ಆತ ಯೋಗ್ಯ ರೂಪದರ್ಶಿ ಯೊಬ್ಬನನ್ನು ಹುಡುಕಿ ಹೊರಟ.

Advertisement

ಕಲಾವಿದ ಹಳ್ಳಿ ಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಊರಿನಿಂದ ಊರಿಗೆ ಅಲೆದಾಡಿದ. ವರ್ಷ ವಿಡೀ ಹುಡುಕಾಡಿದ ಬಳಿಕ ದೂರದ ಹಳ್ಳಿ ಯೊಂದರಲ್ಲಿ ತಾನು ಬಯಸಿದ್ದಂಥ ಮುಖ ಹೊಂದಿದ ಒಬ್ಬ ಯುವಕ ಕಲಾವಿದನ ಕಣ್ಣಿಗೆ ಬಿದ್ದ. ಆತನೊಬ್ಬ ಕುರಿಗಾಹಿ. ಅವನ ಮುಖ ಅಪೂರ್ವ ತೇಜಸ್ಸಿನಿಂದ ಕಂಗೊಳಿಸುತ್ತಿತ್ತು. ಅವನೊಳಗೆ ದೇವರೇ ನೆಲೆಸಿದ್ದಾನೆ ಎಂಬುದನ್ನು ನೋಟ ಮಾತ್ರದಿಂದ ಕಂಡುಕೊಳ್ಳ ಬಹುದಿತ್ತು.

ಚಿತ್ರಕಾರ ಆ ಯುವಕನಿದ್ದ ಹಳ್ಳಿ ಯಲ್ಲಿಯೇ ಚಿತ್ರಶಾಲೆಯನ್ನು ಸ್ಥಾಪಿಸಿ, ಅವನನ್ನು ಎದುರು ಕುಳ್ಳಿರಿಸಿಕೊಂಡು ನೂರಕ್ಕೆ ನೂರು ನೈಜವಾದ ಭಾವಚಿತ್ರ ವನ್ನು ರಚಿಸಿದ.

ಆ ಅಪೂರ್ವ ಚಿತ್ರ ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ವಾಯಿತು. ಅಷ್ಟು ಮಾತ್ರ ಅಲ್ಲ; ಅದರ ನಕಲುಗಳನ್ನು ಕೂಡ ರಚಿಸುವುದಕ್ಕೆ ಬೇಡಿಕೆ ಬಂತು. ನೂರಾರು ಮನೆಗಳು, ಸಂಗ್ರಹಾಲಯಗಳಲ್ಲಿ ಆ ಅಪೂರ್ವ ಚಿತ್ರ ಸ್ಥಾನ ಪಡೆಯಿತು.

ಸರಿಸುಮಾರು 20 ವರ್ಷಗಳು ಕಳೆದವು. ಚಿತ್ರಕಾರನಿಗೆ ವಯಸ್ಸಾ ಯಿತು. ಹೀಗೆಯೇ ಒಂದು ದಿನ ಆತನಿಗೆ ಹಿಂದೆ ತಾನೊಮ್ಮೆ ದೇವ ರಂತಹ ಮುಖವುಳ್ಳ ಯುವಕನ ಭಾವ ಚಿತ್ರ ರಚಿಸಿದ್ದು ಸ್ಮರಣೆಯಾಯಿತು. ಹಾಗೆಯೇ ಈ ಬಾರಿ ಮುಖದಲ್ಲಿ ಸೈತಾನನೇ ನೆಲೆಸಿದ್ದಂತಹ, ಕ್ರೂರ ಮುಖವುಳ್ಳವನೊಬ್ಬನ ಭಾವಚಿತ್ರ ರಚಿಸುವ ಸು#ರಣೆಯಾಯಿತು.

Advertisement

ಸರಿ, ಹಿಂದಿನಂತೆಯೇ ಹುಡುಕಾಟ. ಕೊನೆಗೆ ಅತ್ಯಂತ ವಿಕೃತ ಮನಸ್ಸಿನ, ಕಡು ಕ್ರೂರಿ ಅಪರಾಧಿಗಳನ್ನು ಬಂಧಿಸಿ ಇರಿಸಿದ ತುರಂಗದಲ್ಲಿ ಅಂಥ ಒಬ್ಬ ದುಷ್ಟನ ಭೇಟಿ ಅವನಿಗಾಯಿತು. ಆ ಕ್ರೂರಿ ಹತ್ತು ಕೊಲೆಗಳನ್ನು ನಡೆಸಿದ್ದ, ಅದೆಷ್ಟೋ ಮನೆಗಳ ದರೋಡೆ ಮಾಡಿದ್ದ. ಅವನ ಕಣ್ಣುಗಳಿಂದ ದ್ವೇಷ ಹೊಗೆಯಾಡುತ್ತಿತ್ತು.

ಚಿತ್ರಕಾರ ಸೆರೆ ಮನೆಯ ಹೊರಗೆ ನಿಂತು ಅವನ ಚಿತ್ರ ಬಿಡಿ ಸಲು ಆರಂಭಿಸಿದ. ಚಿತ್ರ ಕೊನೆಯಾದ ಬಳಿಕ ಮೊದಲನೆಯ ಚಿತ್ರ ದೊಂದಿಗೆ ಹೋಲಿಸು ವುದಕ್ಕಾಗಿ ಅದನ್ನೂ ತಂದು ಅಕ್ಕಪಕ್ಕ ನಿಲ್ಲಿಸಿ ವೀಕ್ಷಿಸಲಾರಂಭಿಸಿದ. ಅಷ್ಟರಲ್ಲಿ ಸೆರೆ ಕೋಣೆಯ ಒಳಗಿನಿಂದ ಗದ್ಗದಿತ ಧ್ವನಿ ಕೇಳಿಸಿತು.

ತಿರುಗಿ ನೋಡಿದರೆ, ಕೇಡಿಯ ಕಣ್ಣುಗಳಲ್ಲಿ ದುಃಖಾಶ್ರುಗಳು!ಸೆರೆಯಾಳು ಹೇಳಿದ, “ಸ್ವಾಮಿ, ನೀವು ನನ್ನನ್ನು ಗುರುತು ಹಿಡಿಯಲಿಲ್ಲ. ಆದರೆ ನೀವು ಬಂದ ದಿನವೇ ನನಗೆ ನಿಮ್ಮ ಪರಿಚಯವಾಯಿತು. ಇಪ್ಪತ್ತು ವರ್ಷಗಳ ಹಿಂದೆ ನೀವು ಚಿತ್ರಿಸಿದ ದೇವರಂತಹ ಮುಖದ ಯುವಕನೇ ಇಂದಿನ ಈ ಕೇಡಿ. ಎರಡೂ ಚಿತ್ರಗಳು ನನ್ನವೇ. ಈ ಇಪ್ಪತ್ತು ವರ್ಷಗಳಲ್ಲಿ ನಾನು ಸ್ವರ್ಗದಿಂದ ನರಕಕ್ಕೆ ಕುಸಿದಿ ದ್ದೇನೆ. ಅಳುತ್ತಿರುವುದು ದೇವರಂತಿದ್ದ ನಾನು ಸೈತಾನನಂತೆ ಆಗಿರುವುದಕ್ಕೆ’.

ನಮ್ಮೆಲ್ಲರಿಗೂ ಈ ಮಾತು ಅನ್ವಯ ವಾಗುತ್ತದೆ. ನಮ್ಮೆಲ್ಲರಿಗೂ ಎರಡು ಆಯಾಮಗಳಿರುತ್ತವೆ. ನಮ್ಮೆಲ್ಲರದೂ ಹೀಗೆಯೇ ಎರಡೂ ರೀತಿಯ ಭಾವ ಚಿತ್ರ ರಚನೆಯಾಗುವುದು ಸಾಧ್ಯ. ಪ್ರತಿಯೊಬ್ಬರಲ್ಲಿಯೂ ಸ್ವರ್ಗವಾಗುವ; ಹಾಗೆಯೇ ನರಕವಾಗುವ ಸಾಧ್ಯತೆಗಳೆರಡೂ ಇರುತ್ತವೆ. ನಾವು ಯಾವ ದಾರಿಯನ್ನು ಆರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ನಮ್ಮೊಳಗೆ ಮಧುರ ಕಂಪಿನ, ಸುವಾಸನೆಯ ಹೂದೋಟ ಅರಳಬೇಕು ಎಂದು ನಾವು ಬಯಸಿ ಅದನ್ನು ಸಾಧ್ಯವಾಗಿಸಬೇಕು.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next