ಮಣ್ಣನ್ನು ಕೊಳಕು ಎಂದು ಅಂದುಕೊಳ್ಳುವುದು ಆಧುನಿಕರ ರೂಢಿ. ಕೊಳಕು ಎಂದರೆ ತ್ಯಾಜ್ಯ – ಯಾವುದು ಬಳಕೆಗೆ ಯೋಗ್ಯವಲ್ಲಧ್ದೋ ಅದು, ಉಪಯೋಗ ಮುಗಿದುಹೋದದ್ದು, ಎಸೆಯಬೇಕಾದ್ದು, ದೂರ ಇರಿಸಬೇಕಾದ್ದು.
ಹೌದೇ ಇದು?
ನಾವು ಯಾವುದನ್ನು ನಮ್ಮ ದೇಹ ಎಂದು ಹೇಳುತ್ತೇವೆಯೋ ಅದು ಈ ಭೂಮಿಯ ಒಂದು ಭಾಗ. ನಾವು ಸೇವಿಸಿದ ಆಹಾರದ ಸಂಸ್ಕರಿತ, ಪರಿಷ್ಕೃತ ಸಂಗ್ರಹ ರೂಪವೇ ಈ ದೇಹ. ಈ ಭೂ ಗ್ರಹದಿಂದ ಪುಟಿದೆದ್ದು ನಾಲ್ಕು ದಿನ ಕೈಕಾಲಾಡಿ ಸುವವರು ನಾವು. ಕೆಲವು ವರ್ಷಗಳ ಬಳಿಕ ಮತ್ತೆ ಅದೇ ಭೂಮಿಯಲ್ಲಿ ಒಂದು ಗುಪ್ಪೆಯಾಗಿ ಬಿಡುತ್ತೇವೆ. ಅಂದರೆ “ಕೊಳಕಿ’ಗೆ ಕಚ್ಚಾ ವಸ್ತುವಾಗುತ್ತೇವೆ.
ನಮ್ಮ ದೇಶದಲ್ಲಿ ತಾಯ್ನಾಡು, ತವರು ನೆಲ, ಭೂಮಿ ತಾಯಿ ಎಂದೆಲ್ಲ ಕರೆಯುವ ಕ್ರಮವಿದೆ. ಎಲ್ಲವನ್ನೂ ಸಜೀವವಾಗಿ, ಬದುಕಿನ ಭಾಗವಾಗಿ ಕಾಣುವ ಸಂಸ್ಕೃತಿ ನಮ್ಮದು. ಆಹಾರ, ನೀರು, ನೆಲ, ಆಕಾಶ, ಸೂರ್ಯ, ಚಂದ್ರ, ಕಲ್ಲು, ಮರ – ಎಲ್ಲದಕ್ಕೂ ನಾವು ಶಿರಬಾಗಿ ನಮಿಸುವುದು ಇದೇ ಕಾರಣಕ್ಕೆ. ಯಾವುದನ್ನೂ ಉಪಯೋಗಿಸಿ ಎಸೆಯಬಹುದಾದದ್ದು ಎಂದು ನಾವು ಭಾವಿಸುವುದಿಲ್ಲ. ಸೃಷ್ಟಿಯಲ್ಲಿ ಯಾವುದನ್ನೂ ಬಳಸಿ ದೂರ ಸರಿಸಲಾಗದು. ಪ್ರತಿಯೊಂದು ಕೂಡ ಬದುಕಿನ ಯಾವುದೋ ಕಾಲಘಟ್ಟದಲ್ಲಿ ನಮ್ಮ ಮೂಲಕ ಹಾದು ಹೋಗುತ್ತದೆ. ಸ್ವಲ್ಪ ಕಾಲ ನಮ್ಮೊಳಗಿದ್ದು, ಆ ಬಳಿಕ ಮತ್ತೇನೋ ಆಗುತ್ತದೆ.
ಈಗ ನಾವು ಧರಿಸಿರುವ ಈ ದೇಹ ಈ ಹಿಂದೆ ಕೋಟ್ಯಂತರ ದೇಹಗಳಾಗಿದ್ದವು. ಹಿಂದೆ ಯಾವುದೋ ಒಂದು ಕೀಟ, ಪ್ರಾಣಿ, ಪಕ್ಷಿ, ಮರ, ಕಲ್ಲು ಆಗಿದ್ದದ್ದೇ ರೂಪಾಂತರಗೊಂಡು ಈಗ ನಮ್ಮ ದೇಹದ ಕಣಕಣಗಳಲ್ಲಿ ಅಡಗಿದೆ. ಇಲ್ಲಿ ಹುಟ್ಟಿದ್ದೆಲ್ಲವೂ ಅಳಿದು ಇದೇ ಮಣ್ಣು, ನೀರು, ಗಾಳಿಯೊಂದಿಗೆ ಸೇರಿಹೋಗ ಬೇಕು, ಬೆರೆತು ಒಂದಾಗಬೇಕು. ಅಂದರೆ ಬದುಕಿನ ಒಂದೊಂದು ರೂಪದಲ್ಲಿಯೂ ಅಡಗಿರುವುದು ಗಾಳಿ, ಮಣ್ಣು, ನೀರು ಇವೇ. ಹಾಗಾಗಿ ಈ ನೆಲ, ಮಣ್ಣು ಒಂದು ಸಾಮಗ್ರಿಯಲ್ಲ, ಬಳಸಿ ಎಸೆಯುವಂತಹ ವಸ್ತುವಲ್ಲ. ಈ ಮಣ್ಣು ನಮಗಿಂತ ಎಷ್ಟೋ ಹಿರಿಯ, ಎಷ್ಟೋ ಪಟ್ಟು ಬುದ್ದಿಶಾಲಿ, ಸಾಮರ್ಥ್ಯಶಾಲಿ. ನಾವು ಹುಟ್ಟಿ ಒಬ್ಬ ವ್ಯಕ್ತಿಯಾಗಿ ಬೆಳೆಯು ವುದಕ್ಕಿಂತ ಘನವೂ ದೀರ್ಘವೂ ಆದ ಪ್ರಕ್ರಿಯೆ ಈ ಮಣ್ಣು ರೂಪುಗೊಂಡದ್ದು. ಈ ಸೃಷ್ಟಿಯಲ್ಲಿ ಒಟ್ಟಾರೆ ಯಾಗಿ ನಡೆಯುತ್ತಿರುವ ಆಟದಲ್ಲಿ ನಾವೊಂದು ತೃಣ ಸಮಾನ ಪಾತ್ರ ಅಷ್ಟೇ. ಆಟೋಟ ಸ್ಪರ್ಧೆಯಲ್ಲಿ ರಿಲೇ ಓಟಗಾರ ಇದ್ದ ಹಾಗೆ ನಾವು. ಈಗ ದಂಡ ನಮ್ಮ ಕೈಯಲ್ಲಿದೆ, ಮುಂದೆ ಇನ್ಯಾರಿಗೋ ಅದನ್ನು ಹಸ್ತಾಂತರಿಸಬೇಕಿದೆ.
ನಾವು ಮೆಟ್ಟಿ ನಡೆಯುತ್ತಿರುವ ಈ ಮಣ್ಣು ಬುದ್ಧಿಮತ್ತೆ ಮತ್ತು ಸ್ಮರಣಶಕ್ತಿಯನ್ನು ಹೊಂದಿದೆ. ಹೀಗಾಗಿ ನಾವು ಕಾಂಕ್ರೀಟ್ ಕಾಡಿನಲ್ಲೇ ಇದ್ದರೂ ಮಣ್ಣಿನ ಜತೆಗೆ ಸಂಪರ್ಕ ಇರಿಸಿ ಕೊಳ್ಳುವುದು ಬಹಳ ಮುಖ್ಯ. ನಮ್ಮ ಬದುಕು ಚೆನ್ನಾಗಿರಬೇಕಾದರೆ ಮಣ್ಣಿಗೆ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ, ಉಣ್ಣುವ ಆಹಾರಕ್ಕೆ ಕೃತಜ್ಞರಾಗಿ ರಬೇಕು. ದಿನದ ಒಂದಷ್ಟು ಹೊತ್ತು ಬರಿ ಗಾಲಿನಲ್ಲಿ ಅಂಗಳ, ಹಿತ್ತಿಲಿನಲ್ಲಿ ಅಡ್ಡಾಡೋಣ. ಬರಿಗೈಯಿಂದ ಗಿಡ, ಮರ, ಹುಲ್ಲು, ಮಣ್ಣುಗಳನ್ನು ಸ್ಪರ್ಶಿಸ ಬೇಕು. ಪಾದ, ಅಂಗೈ ಮಣ್ಣಾಗಲಿ. ಆಗ ಈ ದೇಹವು ನಾವು ಬದುಕಿರುವ ತೊಟ್ಟಿಲಾದ ನೆಲದ ಜತೆಗೆ ಸಾಮರಸ್ಯ ಹೊಂದುತ್ತದೆ. ಪ್ರತಿದಿನವೂ ಇದು ನಡೆದರೆ ನಮ್ಮ ದೇಹ ವ್ಯವಸ್ಥೆಯೊಳಗಿನ ಕಾರ್ಯ ಚಟುವಟಿಕೆಗಳು ಸಮರಸ ದಲ್ಲಿ ರುತ್ತವೆ. ತಾಯ್ನೆಲದ ಜತೆಗೆ ಸಂಪರ್ಕ ದಲ್ಲಿರುವ ಸರಳ ಪ್ರಕ್ರಿಯೆ ಇದು.
ಬರಿಗಾಲಿನಲ್ಲಿ ನಡೆದಾಡಿ, ಚಕ್ಕಳ ಮಕ್ಕಳ ಹಾಕಿ ಬರಿನೆಲದಲ್ಲಿ ಕುಳಿತು ಕೊಳ್ಳಿ, ಪ್ರತೀ ಉಸಿರಾಟವನ್ನೂ ಶ್ರದ್ಧೆಯಿಂದ ನಡೆಸಿ. ಬದುಕು ಹಿತವಾಗುತ್ತದೆ.( ಸಾರ ಸಂಗ್ರಹ)