Advertisement

ರೂಪ ಬದಲಾಗುವುದು, ಆತ್ಮ ಉಳಿಯುವುದು

12:59 AM Apr 02, 2021 | Team Udayavani |

ಬೆಟ್ಟದಲ್ಲಿ ಜನಿಸಿದ ಕಿರು ತೊರೆಯೊಂದು ಮೆಲ್ಲ ಮೆಲ್ಲನೆ ಸಮುದ್ರದತ್ತ ಪ್ರಯಾಣ ಹೊರಟಿತ್ತು. ದಾರಿಯಲ್ಲಿ ಅದಕ್ಕೆ ಎಲ್ಲ ವಿಧದ ಪರಿಸರಗಳು, ಪ್ರದೇಶಗಳು ಎದುರಾದವು. ಕೆಲವೆಡೆ ಇಳಿಜಾರಿನಲ್ಲಿ ಜೋರಾಗಿ ಓಡಬೇಕಾಯಿತು, ಕಣಿವೆಗೆ ಧುಮುಕಬೇಕಾಯಿತು, ಕಲ್ಲು ಬಂಡೆಗಳ ಮನವೊಲಿಸಿ ಅವುಗಳ ಸಂಧಿಯಿಂದ ಸುತ್ತಿ ಸುಳಿದು ಸಾಗಬೇಕಾಯಿತು. ಕೆಲವು ಕಡೆಗಳಲ್ಲಿ ಅದಕ್ಕೆ ಸಂಗಾತಿಗಳು ಸೇರಿಕೊಂಡರು. ಕಾಡು, ಬಯಲು, ಹುಲ್ಲುಗಾವಲುಗಳನ್ನು ಉತ್ತರಿಸಿ ತೊರೆಯು ಹೊಳೆಯಾಗಿ ಒಂದು ಮರು ಭೂಮಿಯ ಎದುರಿಗೆ ಬಂದು ನಿಂತಿತು.

Advertisement

ಈ ಹಿಂದೆ ಎದುರಾದ ಅಡೆತಡೆಗಳಿಗಿಂತ ಭಿನ್ನ ವಾಗಿತ್ತು ಈಗಿನ ಪರಿಸ್ಥಿತಿ. ಹೊಳೆ ಮರುಭೂಮಿ ಯಲ್ಲಿ ಸ್ವಲ್ಪ ದೂರ ಹರಿದುನೋಡಿತು. ಊಹುØಂ, ಮರಳು ನೀರನ್ನು ಮುಂದೆ ಹೋಗಲು ಬಿಡ ಲೊಲ್ಲದು. ಹರಿದ ನೀರು ಎಲ್ಲಿ ಹೋಯಿತು ಎಂಬ ಸುಳಿವೇ ಇಲ್ಲ, ನೀರು ಮಂಗಮಾಯ!

ಸಮುದ್ರ ಸೇರಲು ಈ ಮರು ಭೂಮಿಯನ್ನಂತೂ ದಾಟಲೇ ಬೇಕು ಎಂಬುದು ಹೊಳೆಗೆ ಖಚಿತವಾಗಿ ಗೊತ್ತಿತ್ತು. ಆದರೆ ಹೇಗೆ ದಾಟುವುದು ಎಂಬುದೇ ಯಕ್ಷಪ್ರಶ್ನೆ.

ಹೀಗೆ ಹೊಳೆ ಚಿಂತಾಕ್ರಾಂತವಾಗಿ ಯೋಚಿಸುತ್ತಿರಬೇಕಾದರೆ ಮರಳಿನ ಆಳದಿಂದ ಗಂಭೀರ ಧ್ವನಿಯೊಂದು ಕೇಳಿಸಿತು, “ಗಾಳಿ ಮರುಭೂಮಿಯನ್ನು ದಾಟುತ್ತದೆ. ನೀನು ಕೂಡ ಅದೇ ಮಾರ್ಗವನ್ನು ಅನುಸರಿಸು.’

ಹೊಳೆ ಮರಳಿಗೆ ಅಲೆಯಾಗಿ ಅಪ್ಪಳಿಸಿ ಪ್ರತಿರೋಧ ವ್ಯಕ್ತಪಡಿಸಿತು. ಆದರೆ ವಿರೋಧಕ್ಕೆ ಬೆಲೆಯಿರಲಿಲ್ಲ, ಅಪ್ಪಳಿಸಿದ ನೀರು ಇಂಗಿಹೋಯಿತು. “ಗಾಳಿಗೆ ಹಾರುವ ಸಾಮರ್ಥ್ಯ ಇದೆ, ಹಾಗಾಗಿ ಅದು ದಾಟಬಲ್ಲುದು. ನಾನು ಭಾರವಾಗಿದ್ದೇನೆ, ಹೇಗೆ ಹಾರಲು ಸಾಧ್ಯ?’ ಎಂದು ಹೊಳೆ ಪ್ರಶ್ನಿಸಿತು.

Advertisement

“ನೀನು ನಿನ್ನ ಈಗಿನ ಸ್ಥಿತಿಗೆ ಅಂಟಿಕೊಂಡರೆ ನನ್ನನ್ನು ದಾಟುವುದು ಎಂದಿಗೂ ಸಾಧ್ಯವಿಲ್ಲ. ಒಂದೋ ನೀನು ಇಂಗಿಹೋಗುತ್ತೀ ಅಥವಾ ಜೌಗು ಆಗುತ್ತೀ. ನಿನ್ನ ಗುರಿಯನ್ನು ತಲುಪ ಬೇಕಾದರೆ ಗಾಳಿ ನಿನ್ನನ್ನು ಕೊಂಡೊಯ್ಯ ಬಲ್ಲ ಸ್ವರೂಪಕ್ಕೆ ಬದಲಾಗಬೇಕು’ ಎಂದಿತು ಮರಳಿನಾಳದ ಗಂಭೀರ ಧ್ವನಿ.

ಹೊಳೆಗೆ ಇದು ಒಂಚೂರೂ ಇಷ್ಟವಿಲ್ಲ. ಅದಕ್ಕೆ ತನ್ನ ರೂಪ ಬದಲಾ ಗುವುದು ಬೇಕಿಲ್ಲ. ಒಮ್ಮೆ ಬೇರೆ ಸ್ಥಿತಿಗೆ ಹೋಗಿಬಿಟ್ಟರೆ ಮತ್ತೆ ಹಳೆಯ ಸ್ಥಿತಿಗೆ ಮರಳು ವುದು ಹೇಗೆ?

ಮರಳು ಹೇಳಿತು, “ನೀನು ಆವಿಯಾಗು. ಗಾಳಿ ನಿನ್ನನ್ನು ಮರು ಭೂಮಿ ದಾಟಿಸಿ ಅತ್ತ ಕಡೆ ಮಳೆಯಾಗಿ ಇಳಿಸು ತ್ತದೆ. ಮಳೆನೀರು ಮತ್ತೆ ತೊರೆಯಾಗು ತ್ತದೆ…’

“ಇದು ನಿಜ ಎಂದು ಹೇಗೆ ನಂಬಲಿ’ ಎಂದು ಪ್ರಶ್ನಿಸಿತು ಹೊಳೆ.

“ನಿನಗೆ ನಿನ್ನ ಪೂರ್ವಸ್ವರೂಪದ ನೆನಪಿಲ್ಲ ಅಷ್ಟೇ. ನೀನು ಆರಂಭದಲ್ಲಿ ಒಂದು ತೊರೆಯಾಗಿದ್ದೆ. ಅದಕ್ಕೂ ಹಿಂದೆ ಇನ್ನೆಲ್ಲಿಂದಲೋ ಗಾಳಿಯೊಡನೆ ತೇಲಿಬಂದ ನೀರಾವಿಯೇ ಆಗಿದ್ದೆ. ಈಗಲೂ ಹಾಗೆ ಆಗುವುದೊಂದೇ ದಾರಿ…’ ಎಂದಿತು ಮರಳು.

ಮತ್ತೆ ಹೊಳೆಯ ಪ್ರಶ್ನೆ, “ಹಾಗಾದರೆ ನಾನು ಈಗ ಇರುವಂತೆಯೇ ಇರುವುದಿಲ್ಲವೇ?’

“ಇಲ್ಲ. ಆದರೆ ನಿನ್ನ ಆತ್ಮವು ಇಲ್ಲಿಂದ ಅಲ್ಲಿಗೆ ಹೋಗುತ್ತದೆ. ಅಲ್ಲಿ ನೀರಾಗಿ ಬದಲಾಗುತ್ತದೆ ಮತ್ತು ಇನ್ನೊಂದು ತೊರೆ, ಹೊಳೆಯಾಗುತ್ತದೆ’ ಎಂದಿತು ಮರಳು.

ಇಷ್ಟನ್ನು ಕೇಳುವಷ್ಟರಲ್ಲಿ ಹೊಳೆಗೆ ತನ್ನ ಪೂರ್ವಜನ್ಮದ ಸ್ಮರಣೆಗಳು ತೇಲಿಬರಲಾರಂಭಿಸಿದವು. ಈಗ ಅದು ಸಂತೋಷದಿಂದ ಗಾಳಿಯ ತೆಕ್ಕೆಗೆ ತನ್ನನ್ನು ಅರ್ಪಿಸಿಕೊಂಡಿತು. ಗಾಳಿ ಹಾಯಾಗಿ ಬೀಸಿ ಮರುಭೂಮಿಯನ್ನು ದಾಟಿಸಿ ಅತ್ತ ಕಡೆಯ ಎತ್ತರದ ಬೆಟ್ಟದ ತಪ್ಪಲಿನಲ್ಲಿ ಮಳೆಹನಿಗಳಾಗಿ ಅದನ್ನು ನೆಲಕ್ಕಿಳಿಸಿತು. ಅಲ್ಲಿಂದ ಸಮುದ್ರದತ್ತ ಯಾನ ಮುಂದುವರಿಯಿತು.

ಮನುಷ್ಯ ಜೀವನವೂ ಹೀಗೆಯೇ ಅಲ್ಲವೆ!

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next