ವೃಷಭ ದೇವನ ಸಮೃದ್ಧಿಯ ಆಡಳಿತ, ಮಕ್ಕಳ ನಾಮಕರಣ, ಬಾಲ ಲೀಲೋತ್ಸವ, ಸ್ತ್ರೀ ಶಿಕ್ಷಣದ ಮೂಲಕ ಬ್ರಾಹ್ಮಿ-ಸುಂದರಿ ಸಹಿತ ಮಕ್ಕಳಿಗೆ ಶಿಕ್ಷಣ, ಬಳಿಕ ಜೀವನದಲ್ಲಿ ವೈರಾಗ್ಯ ಬಂದು ವೃಷಭ ದೇವರು ಭರತ-ಬಾಹುಬಲಿಗೆ ರಾಜ್ಯದ ಅಧಿಕಾರ ನೀಡಿ ಭೋಗಜೀವನದಿಂದ ತ್ಯಾಗದೆಡೆಗೆ ಸಾಗುವ ದೃಶ್ಯವನ್ನು ಅಳವಡಿಸಿಕೊಳ್ಳಲಾಗಿದೆ.
ಧರ್ಮಸ್ಥಳದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದಂಗವಾಗಿ ಈ ಬಾರಿ ವಿಶೇಷವಾಗಿ ಅಯೋಧ್ಯೆ ಮತ್ತು ಪೌದನಾಪುರ ನಗರದ ವೈಭವಪೂರ್ಣ ವೇದಿಕೆಯಲ್ಲಿ ಐದು ದಿನಗಳ ಕಾಲ ಬಾಹುಬಲಿಯ ಜೀವನ ಚಿತ್ರಣವನ್ನು ಬಿಂಬಿಸುವ ಪಂಚಮಹಾವೈಭವವು ಅನಾವರಣಗೊಂಡಿತು. ಎಲ್ಲ ಮಸ್ತಕಾಭಿಷೇಕಗಳಲ್ಲಿ ಪಂಚಕಲ್ಯಾಣ ಮಹೋತ್ಸವದ ದೃಶ್ಯಕಾವ್ಯ ಅನಾವರಣಗೊಂಡರೆ ಈ ಬಾರಿ ರಂಗ ನಿರ್ದೇಶಕ, ಕಲಾವಿದ ಜೀವನ್‌ರಾಂ ಸುಳ್ಯ ಪಂಚಮಹಾ ವೈಭವದ ವಿಶೇಷ ದೃಶ್ಯಕಾವ್ಯವನ್ನು ಸಾದೃಶವಾಗಿ ಕಟ್ಟಿಕೊಟ್ಟರು.
ಆದಿನಾಥ ಮಹಾರಾಜರ ನವಯುಗ ಆರಂಭದ ಮೂಲಕ ಪ್ರಾರಂಭಗೊಂಡ ಪಂಚಮಹಾವೈಭವದ ದೃಶ್ಯಾವಳಿಗಳು ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗುವ ವರೆಗಿನ ಐತಿಹಾಸಿಕ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿವೆ. ವೃಷಭ ದೇವನ ಸಮೃದ್ಧಿಯ ಆಡಳಿತ, ಮಕ್ಕಳ ನಾಮಕರಣ, ಬಾಲ ಲೀಲೋತ್ಸವ, ಸ್ತ್ರೀ ಶಿಕ್ಷಣದ ಮೂಲಕ ಬ್ರಾಹ್ಮಿ-ಸುಂದರಿ ಸಹಿತ ಮಕ್ಕಳಿಗೆ ಶಿಕ್ಷಣ, ಬಳಿಕ ಜೀವನದಲ್ಲಿ ವೈರಾಗ್ಯ ಬಂದು ವೃಷಭ ದೇವರು ಭರತ-ಬಾಹುಬಲಿಗೆ ರಾಜ್ಯದ ಅಧಿಕಾರ ನೀಡಿ ಭೋಗಜೀವನದಿಂದ ತ್ಯಾಗದೆಡೆಗೆ ಸಾಗುವ ದೃಶ್ಯವನ್ನು ಅಳವಡಿಸಿಕೊಳ್ಳಲಾಗಿದೆ.
ಅಯೋದ್ಯೆಯಲ್ಲಿ ಭರತನ ಆಳ್ವಿಕೆ ಸಮೃದ್ಧಿಯಿಂದ ಕೂಡಿರಲು ವಿಶೇಷವಾಗಿ ಚಕ್ರರತ್ನದ ಉದಯ, ವೃಷಭ ದೇವರಿಗೆ ಕೇವಲಜ್ಞಾನ ಪ್ರಾಪ್ತಿ ಹಾಗೂ ಪುತ್ರರತ್ನದ ಯೋಗ ಲಭಿಸುತ್ತದೆ. ಚಕ್ರರತ್ನದ ಮೂಲಕ ಷಡVಂಡಗಳನ್ನು ಗೆಲ್ಲುತ್ತಾನೆ. ಬಾಹುಬಲಿಯನ್ನು ಗೆಲ್ಲದೆ ಚಕ್ರವರ್ತಿಯಾಗಲು ಅಸಾಧ್ಯವೆಂದರಿತು ಯುದ್ಧ ನಡೆದು ಬಾಹುಬಲಿ ತ್ಯಾಗದ ಕಡೆಗೆ ಸಾಗುತ್ತಾನೆ. ಭಗವಾನ್ ಆದಿನಾಥ ತೀರ್ಥಂಕರರ ಸಮವಸರಣ ದರ್ಶನದೊಂದಿಗೆ ಭರತಾಗಮನದ ಶಂಕೆ ನಿವಾರಣೆಯಾಗುವುದು ಹಾಗೂ ಬಾಹುಬಲಿ ಸ್ವಾಮಿಗೆ ಕೇವಲ ಜ್ಞಾನವಾದ ಹಿನ್ನೆಲೆಯಲ್ಲಿ ಸ್ವಾಮಿಗೆ ಮಹಾಮಜ್ಜನ ಹಾಗೂ ಪಂಚಾಮೃತಗಳಿಂದ ಮಹಾಮಸ್ತಕಾಭಿಷೇಕವಾಗುವ ದೃಶ್ಯಗಳನ್ನು ಪಂಚಮಹಾ ವೈಭವದಲ್ಲಿ ಸಾಕ್ಷೀಕರಿಸಿ ಇತಿಹಾಸದ ಪುಟಗಳನ್ನು ಮತ್ತೂಮ್ಮೆ ಕಣ್ಣೆದುರು ತೆರೆದಿರಿಸಿದ್ದಾರೆ. ಪಂಚಮಹಾವೈಭವ ಹೊಸ ಇತಿಹಾಸವನ್ನೇ ಸೃಷ್ಟಿಸಿದೆಯೆಂದು ಆಚಾರ್ಯ ಶ್ರೀ ಸಿದ್ದಸೇವಾ ಸಾಗರ್ ಶ್ರೀ ಮುನಿರಾಜ್ ಉಲ್ಲೇಖೀಸಿದ್ದಾರೆ.
ಬೆಂಗಳೂರಿನ ಅಶೋಕ ಕುಮಾರ್ ಜೈನ್ ಹಾಗೂ ತಂಡದವರ ಅಭಿನಯ, ಜೀವನ್‌ರಾಂ ಸುಳ್ಯ ಅವರ ಪರಿಪಕ್ವ ನಿರ್ದೇಶನ ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದೆ. ಹೆಗ್ಗಡೆ ಕುಟುಂಬದ ಯುವ ಪೀಳಿಗೆ ದೃಶ್ಯ ರೂಪಕದಲ್ಲಿ ಪಾತ್ರ ನಿರ್ವಹಿಸಿ ವಿಶೇಷ ಮೆರುಗು ನೀಡಿದ್ದಾರೆ. ಫೆ. 13 ರಂದು ಧರ್ಮಸ್ಥಳದಿಂದ ಶಾಂತಿವನದವರೆಗೆ ಸಾಗಿ ಮರಳಿದ ಭರತನ ದಿಗ್ವಿಜಯ ಯಾತ್ರೆಯ ವೈಭವಪೂರ್ಣ ಮೆರವಣಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದು ಎಂದೆಂದೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಚಿರಸ್ಥಾಯಿಯಾಗಿ ಉಳಿಯುವ ದೃಶ್ಯಕಾವ್ಯ ಬರೆದಿದೆ. ವಿವಿಧ ಕಲಾತಂಡಗಳು ದಿಗ್ವಿಜಯ ಯಾತ್ರೆಗೆ ವಿಶೇಷ ಮೆರಗು ನೀಡಿದ್ದಾರೆ. ನೂರಾರು ಕಲಾವಿದರ ಪರಿಕ್ರಮ ಸಾರ್ಥಕ್ಯ ಕಂಡಿದೆ.
ಸಾಂತೂರು ಶ್ರೀನಿವಾಸ ತಂತ್ರಿ