ನೆಲ್ಯಾಡಿ: ಗುಂಡ್ಯ ಸಮೀಪ ಬೆಟ್ಟದ ಹಾದಿಯಲ್ಲಿ ಮಂಗಳವಾರದಂದು ಮಧ್ಯಾಹ್ನದ ವೇಳೆಗೆ ಸಾಗುತ್ತಿದ್ದ ಪಿಕಪ್ ವಾಹನವು ಪ್ರಪಾತಕ್ಕೆ ಉರುಳಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಪಶ್ಚಿಮ ಬಂಗಾಲ ರಾಜ್ಯದ ನ್ಯೂ ಅಲಿಪುರ ಜಿಲ್ಲೆಯ ಕಾರ್ಮಿಕರು ಮೃತಪಟ್ಟವರು.
ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗದಲ್ಲಿ ಸಿಗುವ ಶಿರಿಬಾಗಿಲು-ಎಡಕುಮೇರಿ ರೈಲು ಹಳಿಗೆ ತೆರಳುವ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ.
ಗುಂಡ್ಯದಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದ ಸರ್ವೇ ಕಾರ್ಯಕ್ಕೆ ಜೈಕೋ ಕಂಪೆನಿಗೆ ಗುತ್ತಿಗೆ ದೊರೆತಿದ್ದು ಈ ಬಗ್ಗೆ ಸರ್ವೇ ಕಾರ್ಯ ನಡೆಯುತ್ತಿತ್ತು. ಸರ್ವೇ ಕಾರ್ಯಕ್ಕೆ ನಿಯೋಜಿತ ಕಂಪೆನಿಯ ಕೆಲಸದಾಳುಗಳನ್ನು ಹಾಗೂ ಸರ್ವೇಗೆ ಬಳಸುವ ಸಾಮಗ್ರಿಗಳನ್ನು ಹೇರಿಕೊಂಡು ಬರುತ್ತಿದ್ದ ವೇಳೆ ಕಡಿದಾದ ಏರಿನಲ್ಲಿ ಪಿಕಪ್ ವಾಹನದ ಆ್ಯಕ್ಸಿಲ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿಬಿತ್ತು ಎನ್ನಲಾಗಿದೆ.
ಪಿಕಪ್‌ನಲ್ಲಿದ್ದ ಪಶ್ಚಿಮ ಬಂಗಾಲ ಮೂಲದ ವಿಕಾಸ್ (26), ಆಶಿಕ್ (25) ಸ್ಥಳದಲ್ಲೇ ಸಾವನ್ನಪ್ಪಿದರು. ಸಹಕಾರ್ಮಿಕರಾದ ಬಿಜೇಂದ್ರ ಹತ್ವಾಲ್ (42), ಶಂಭು (28), ರಾಜನ್ (25), ಬಿಜಯ್ (25) ತೀವ್ರ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಭಾಸ್ಕರ್, ಉಪ್ಪಿನಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿ, ಪುತ್ತೂರು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ರತನ್ ಕುಮಾರ್ ಹಾಗೂ ನೆಲ್ಯಾಡಿ ಪೊಲೀಸ್ ಠಾಣಾ ಸಿಬಂದಿ ಭೇಟಿ ನೀಡಿ ಕ್ರಮ ಕೈಗೊಂಡರು. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.