ಉಪ್ಪಿನಂಗಡಿ/ನೆಲ್ಯಾಡಿ: ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಬರುತ್ತಿದ್ದ ಜೀಪಿಗೆ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರೊಂದು ಢಿಕ್ಕಿ ಹೊಡೆದು ಎಂಟು ಮಂದಿ ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಇಚ್ಲಂಪಾಡಿಯ ಹೊಸಮನೆಯ ಪ್ರಗತಿಪರ ಕೃಷಿಕ ಮಾಯಿಲಪ್ಪ ಶೆಟ್ಟಿ ಹಾಗೂ ಅವರ ಸಂಬಂಧಿಗಳಾದ ಆನಂದ ಶೆಟ್ಟಿ, ಸುಶೀಲಾ, ಇಂದ್ರಾವತಿ, ಶುಭಾವತಿ, ಆಶಾ, ಸಮನ್ವಿ ಹಾಗೂ ಜೀಪು ಚಾಲಕ ಮರ್ದಾಳ ಮೈಕಾಜೆ ನಿವಾಸಿ ಶಿವರಾಮ ರೈ ಗಾಯಗೊಂಡವರು.
ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಜೀಪು ಆರ್ಲದಲ್ಲಿ ಕೆಎಸ್ಸಾರ್ಟಿಸಿ ಬಸ್ ಅನ್ನು ಓವರ್‌ಟೇಕ್ ಮಾಡುವ ಯತ್ನದಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಮುಖಾಮುಖೀ ಢಿಕ್ಕಿ ಹೊಡೆಯಿತು. ಕಾರಿನಲ್ಲಿ ಮಂಗಳೂರಿನ ಕದ್ರಿ ನಿವಾಸಿ ಹೃಷಿಕೇಶ್ ಅವರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಶಸ್ತಿಯೊಂದಿಗೆ ಹಿಂದಿರುಗುತ್ತಿದ್ದರು: ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಬಂಟ ಕೃಷಿಕರೋರ್ವರಿಗೆ ನೀಡಲಾಗುವ ಕಡಮಜಲು ಸುಭಾಷ್ ರೈ ದತ್ತಿನಿಧಿ ಪ್ರಾಯೋಜಿತ ಕೃಷಿ ಪ್ರಶಸ್ತಿಗೆ ಈ ಬಾರಿ ಇಚ್ಲಂಪಾಡಿಯ ಮಾಯಿಲಪ್ಪ ಶೆಟ್ಟಿ ಆಯ್ಕೆಯಾಗಿದ್ದರು.ರವಿವಾರ ಪುತ್ತೂರಿನ ಬಂಟರ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಸಂಬಂಧಿಕರ ಸಹಿತ ಮಾಯಿಲಪ್ಪ ಶೆಟ್ಟಿ ಜೀಪಿನಲ್ಲಿ ತೆರಳಿದ್ದರು. ಹಿಂದಿರುವಾಗ ಈಘಟನೆ ಸಂಭವಿಸಿದೆ.