Advertisement

“ಜೆ.ಎಚ್‌.ಪಟೇಲರು ಗುರುಗಳು, ರಾಮಕೃಷ್ಣ ಹೆಗಡೆ ರೋಲ್‌ ಮಾಡಲ್‌’

03:45 AM Mar 24, 2017 | Team Udayavani |

ವಿಧಾನಸಭೆ: “ಟ್ರಯಲ್‌ ನೋಡೋಣ ಎಂದು ಮದುವೆಯಾದೆ. ನಂತರ ನನ್ನ ಹೆಂಡ್ತಿ ಮತ್ತು ತಾಯಿ ಹೊಂದಿಕೊಂಡು ಹೋಗುವಂತೆ ಹೇಗೋ ಮ್ಯಾನೇಜ್‌ ಮಾಡಿದೆ, ಈಗಲೂ ಮಾಡುತ್ತಿದ್ದೇನೆ’

Advertisement

ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಹೇಳಿದ ಈ ಮಾತು ಸದನದಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.ಅಂತರ್‌-ವಿಷಯ ಮತ್ತು ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ವಿಶ್ವವಿದ್ಯಾಲಯವಾಗಿ ರೂಪಿಸುವ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಸ್ತುತ ವಿಶ್ವವಿದ್ಯಾಲಯಗಳು ಯಾವ ರೀತಿ ಕೆಲಸ ನಿರ್ವಹಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಅಂತರ್‌-ವಿಷಯ ಮತ್ತು ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ವಿಶ್ವವಿದ್ಯಾಲಯವನ್ನಾಗಿ ಪರಿಗಣಿಸುವ ಮೂಲಕ ಅದು ಕೂಡ ಹಾಳಾಗಲು ಅವಕಾಶ ಮಾಡಿಕೊಡಬೇಡಿ ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ್‌ಕುಮಾರ್‌, ನಾನು 27ನೇ ವಯಸ್ಸಿಗೇ ಮದುವೆ ಮಾಡಿಕೊಂಡೆ. ಆ ಸಂದರ್ಭದಲ್ಲಿ ನನ್ನ ಗೆಳೆಯರೆಲ್ಲಾ ಮದುವೆ ನಿನ್ನ ನಡವಳಿಕೆಗೆ ಒಪ್ಪುವುದಿಲ್ಲ ಎಂದು ಎಚ್ಚರಿಸಿದರು. ಹೀಗಾಗಿ ಮದುವೆಯಾದರೆ ಹೆಂಡತಿ ನನ್ನ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಾಳೆ, ಕುಟುಂಬದೊಂದಿಗೆ ಹೊಂದಿಕೊಳ್ಳುತ್ತಾಳೆಯೇ ಎಂಬ ಆತಂಕ ಉಂಟಾಯಿತು. ಆದರೂ ಟ್ರಯಲ್‌ ನೋಡೋಣ ಎಂದು ಮದುವೆ ಮಾಡಿಕೊಂಡೆ. ನಂತರ ನನ್ನ ಹೆಂಡ್ತಿ ಮತ್ತು ತಾಯಿ ಹೊಂದಿಕೊಂಡು ಹೋಗುವಂತೆ ಹೇಗೋ ಮ್ಯಾನೇಜ್‌ ಮಾಡಿದೆ. ಈಗಲೂ ಮಾಡುತ್ತಿದ್ದೇನೆ ಎಂದರು.

ಅಷ್ಟರಲ್ಲಿ ಸಚಿವರ ಕಾಲೆಳೆದ ಬಿಜೆಪಿಯ ಸುರೇಶ್‌ಕುಮಾರ್‌, ಟ್ರಯಲ್‌ ನೋಡುವುದಕ್ಕಾಗಿ ಮದುವೆ ಮಾಡಿಕೊಂಡೆ ಎಂದಿರಿ. ಅದರ ಅರ್ಥವೇನು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌, ನಾನು ನಿಮ್ಮಷ್ಟು ಇನ್ನೋಸೆಂಟ್‌ ವ್ಯಕ್ತಿಯೇನೂ ಅಲ್ಲ. ಯುವಕನಾಗಿದ್ದಾಗ ಸಾಕಷ್ಟು ಕಿಲಾಡಿಯಾಗಿದ್ದೆ. ಜೆ.ಎಚ್‌.ಪಟೇಲರು ನನ್ನ ಗುರುಗಳು, ರಾಮಕೃಷ್ಣ ಹೆಗಡೆ ರೋಲ್‌ ಮಾಡಲ್‌, ಈಗ ನಿಮ್ಮೊಂದಿಗೆ (ಬಿಜೆಪಿ) ಸೇರಿಕೊಂಡಿದ್ದಾರಲ್ಲಾ ಎಸ್‌.ಎಂ.ಕೃಷ್ಣ ಅವರ ಬಗ್ಗೆ ಅಮಿತವಾದ ಅಭಿಮಾನ ಹೊಂದಿದವನು. ಇನ್ನೇನಾದರೂ ಹೇಳಬೇಕೇ ಎಂದು ಪ್ರಶ್ನಿಸಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next