ಹೊಸದಿಲ್ಲಿ: 16 ದಿನಗಳ ಪರೀಕ್ಷೆ, 12 ಭಾಷೆಗಳಲ್ಲಿ 384 ಪ್ರಶ್ನೆ ಪತ್ರಿಕೆ, 4.14 ಲಕ್ಷ ಪ್ರಶ್ನೆಗಳು! ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಜೆಇಇ (ಮೇನ್) ಪರೀಕ್ಷೆ 2021ರ ಫೆಬ್ರವರಿಯಿಂದ 4 ಸುತ್ತುಗಳಲ್ಲಿ ನಡೆಯಲಿದೆ. ಫೆ.22ರಿಂದ ನಡೆಯುವ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಡಿ.15ರಿಂದ ಅವಕಾಶ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಫೆಬ್ರವರಿಯಿಂದ ಮೇವರೆಗೆ ಪ್ರತೀ ತಿಂಗಳೂ ಒಂದೊಂದು ಸುತ್ತು ಪರೀಕ್ಷೆ ನಡೆಯಲಿದೆ. ಪ್ರತೀ ಪರೀಕ್ಷೆಯ 4-5 ದಿನಗಳೊಳಗೆ ಫಲಿತಾಂಶಗಳನ್ನು ಪ್ರಕಟಿಸಲು ಇಲಾಖೆ ನಿರ್ಧರಿಸಿದೆ.
“ರಾಜ್ಯಗಳು ತಮ್ಮದೇ ಆದ ಶಿಕ್ಷಣ ಮಂಡಳಿ ಹೊಂದಿದ್ದು, ಅವುಗಳ ಪರೀಕ್ಷೆಯನ್ನು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಸುತ್ತವೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಬೋರ್ಡ್‌ಗಳು ಮರು ವೇಳಾಪಟ್ಟಿ ರಚಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಅಪಾರ ಅವಕಾಶಗಳನ್ನು ಮಾಡಿಕೊಡಲಿವೆ. ಸ್ಯಾಟ್, ಜಿಆರ್‌ಇ ಪರೀಕ್ಷೆಗಳನ್ನು ಬೇರೆ ಬೇರೆ ಅವಧಿಗಳಲ್ಲಿ ನಡೆಸಲಿವೆ. ಪ್ರಸ್ತುತ ಸಿದ್ಧಪಡಿಸಿರುವ ಜೆಇಇ ವೇಳಾಪಟ್ಟಿ ಅಂತಾರಾಷ್ಟ್ರೀಯ ಪರೀಕ್ಷಾ ಕ್ರಮಕ್ಕೆ ಹೊಂದಿಕೆ ಆಗುವಂತಿದೆ’ ಎಂದು ಶಿಕ್ಷಣ ಸಚಿವಾಲಯ ಕಾರ್ಯದರ್ಶಿ ಅಮಿತ್ ಖೇರ್ ಸ್ಪಷ್ಟಪಡಿಸಿದ್ದಾರೆ.
ಜೆಇಇ-2021 ಹೈಲೈಟ್ಸ್
ಫೆಬ್ರವರಿ, ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರೀಕ್ಷೆ.
ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಲಿ, ಗುಜರಾತಿ, ಮರಾಠಿ, ಒಡಿಯಾ, ತಮಿಳು, ತೆಲುಗು, ಪಂಜಾಬಿ ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ.
ಪ್ರತಿ ಪತ್ರಿಕೆಗಳಲ್ಲಿ 90 ಪ್ರಶ್ನೆಗಳಿದ್ದು, 75ಕ್ಕೆ ಉತ್ತರಿಸುವುದು ಕಡ್ಡಾಯ.
ಪ್ರತಿ ಪರೀಕ್ಷೆಗಳ ಬಳಿಕ 5 ದಿನಗಳೊಳಗೆ ಫಲಿತಾಂಶ ಪ್ರಕಟ.
ಫೆಬ್ರವರಿ ಸುತ್ತಿನ ಪರೀಕ್ಷೆಗೆ ಈ ವಾರದಿಂದಲೇ ನೋಂದಣಿ ಶುರು.