Advertisement
ಈ ಚಿತ್ರ 50 ವರ್ಷ ಪೂರೈಸಿದ ಸಂದರ್ಭದಲ್ಲಿ ಇದೇ ತಿಂಗಳ 25ರಂದು ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ “ದೊರೆ-ಭಗವಾನ್ 50′ ಎಂಬ ಸಮಾರಂಭವನ್ನು ಕಲಾನಮನ ತಂಡವು ಆಯೋಜಿಸಿದೆ. ಈ ಜೋಡಿ ನಿರ್ದೇಶಿಸಿದ ಚಿತ್ರಗಳಿಂದ ಆಯ್ದ 25 ಗೀತೆಗಳ ಗಾಯನ ಇರುತ್ತದೆ.
Related Articles
Advertisement
ಅದಕ್ಕೂ ಮುನ್ನ ನಾನು ಮತ್ತು ದೊರೆ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. “ಸಂಧ್ಯಾರಾಗ’, “ರಾಜದುರ್ಗದ ರಹಸ್ಯ’, “ಮಂತ್ರಾಲಯ ಮಹಾತೆ¾’ ಹೀಗೆ ಕೆಲವು ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ, ಒಟ್ಟಿಗೆ ನಿರ್ದೇಶನ ಮಾಡಿರಲಿಲ್ಲ. ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಒಮ್ಮೆ “ಡಾಕ್ಟರ್ ನೋ’ ಎಂಬ ಚಿತ್ರ ಬಿಡುಗಡೆಯಾಗಿತ್ತು. ನನಗೆ ಮುಂಚಿನಿಂದಲೂ ಪತ್ತೇದಾರಿ ಮತ್ತು ಸ್ಪೈ ಕಾದಂಬರಿಗಳನ್ನು ಓದುವ ಗೀಳು.
“ಡಾಕ್ಟರ್ ನೋ’ ಜೇಮ್ಸ್ ಬಾಂಡ್ ಸರಣಿಯ ಮೊದಲ ಚಿತ್ರ. ಬಿಡುವಿದ್ದಾಗಲೆಲ್ಲಾ ನಾನು, ದೊರೆ, ರಾಜಕುಮಾರ್ ಮತ್ತು ವರದಪ್ಪನವರು ಬೇರೆ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದೆವು. ಅದೇ ತರಹ, “ಡಾಕ್ಟರ್ ನೋ’ ಚಿತ್ರವನ್ನು ನೋಡುವುದಕ್ಕೆ ಹೋಗಿದ್ದೆವು …’ ಎಂದು ಫ್ಲಾಶ್‌ಬ್ಯಾಕ್‌ಗೆ ಜಾರುತ್ತಾರೆ ಭಗವಾನ್. “ಚಿತ್ರ ನೋಡಿ, ದೋಸೆ ತಿನ್ನೋದು ಅಭ್ಯಾಸ. ಮದರಾಸ್‌ನಲ್ಲಿ ಡ್ರೈವ್ ಇನ್ ವುಡ್‌ಲ್ಯಾಂಡ್ಸ್ ಹೋಟೆಲ್‌ಗೆ ದೋಸೆ ತಿನ್ನೋದಕ್ಕೆ ಹೋಗಿದ್ದೆವು.
ದೋಸೆ ತಿನ್ನುತ್ತಾ, ಚಿತ್ರದ ಬಗ್ಗೆ ಮಾತಾಡುತ್ತಿದ್ದೆವು. ಎಲ್ಲರಿಗೂ ಚಿತ್ರ ಮೆಚ್ಚುಗೆಯಾಗಿತ್ತು. ಮಾತನಾಡುವ ಭರದಲ್ಲಿ ನಮ್ಮ ದೊರೆ, “ನಾವು ಯಾಕೆ ಇಂಥ ಚಿತ್ರ ಮಾಡಬಾರದು’ ಅಂತ ಕೇಳಿಬಿಟ್ಟರು. ದೋಸೆ ತಿನ್ನುತ್ತಿದ್ದ ರಾಜಕುಮಾರ್ ಅವರಿಗೆ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಗಿ, ಕೆಮ್ಮು ಬಂದು, ನಗೋದಕ್ಕೆ ಶುರು ಮಾಡಿದರು. ಯಾಕೆ ಅಂತ ಕೇಳಿದಾಗ, “ಎಲ್ಲಾದರೂ ಇಂಥ ಚಿತ್ರ ಮಾಡೋಕೆ ಸಾಧ್ಯವಾ?’ ಅಂತ ಕೇಳಿದರು.
ಅದು ನಿಜವಾದ ಮಾತು. ಏಕೆಂದರೆ, ಹಿಂದಿಯೋರೇ ಆ ತರಹದ ಸಿನಿಮಾಗಳನ್ನು ಮಾಡೋದಕ್ಕೆ ಹೆದರುತ್ತಿದ್ದರು. ಹಾಗಾಗಿ ಅವರು ಕೇಳಿದ್ದು ಸರಿಯಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ದೊರೆ, “ನೀವು ಹೂಂ ಅನ್ನಿ, ನಾವು ಮಾಡ್ತೀವಿ’ ಎಂದರು. ಅದಕ್ಕೆ ಸರಿಯಾಗಿ ಡಾ. ರಾಜಕುಮಾರ್ ಅವರು, “ಹೂಂ ಅನ್ನೋದೇನು, ಜಮಾಯಿಸಿಬಿಡಿ’ ಎಂದರು. ಅಲ್ಲಿಂದ ಪ್ರಯತ್ನ ಶುರುವಾಯಿತು.
ಸೀದಾ ಒಂದು ಪುಸ್ತಕದಂಗಡಿಗೆ ಹೋಗಿ, ಜೇಮ್ಸ್ ಬಾಂಡ್ ಸರಣಿಯ 11 ಪುಸ್ತಕ ತಂದೆ. ನಾನು ಮತ್ತು ದೊರೆ ಕೂತು ಚಿತ್ರಕಥೆ ಮಾಡಿದೆವು. ಅಷ್ಟರಲ್ಲಾಗಲೇ ಕಾದಂಬರಿಯನ್ನು ಚಿತ್ರ ಮಾಡುವ ಕಲೆ ಸಿದ್ದಿಸಿತ್ತು. ಹಾಗಾಗಿ ಕೂತು ಚಿತ್ರಕಥೆ ಮಾಡಿ ಚಿತ್ರ ಶುರು ಮಾಡಿಯೇಬಿಟ್ಟೆವು …’. “ಆ ಚಿತ್ರಕ್ಕೆ ನಮಗೆ ಆ ಕಾಲಕ್ಕೆ ಆದ ಬಜೆಟ್ ಎರಡೂ ಮುಕ್ಕಾಲು ಲಕ್ಷ. ಚಿತ್ರವೆಲ್ಲಾ ಮುಗಿದು, ಚಿತ್ರದ ದಿನಾಂಕ ಸಹ ನಿಗದಿಯಾಗಿತ್ತು.
ಅಷ್ಟರಲ್ಲಿ ಸ್ವಲ್ಪ ದುಡ್ಡಿನ ಸಮಸ್ಯೆ ಆಗಿತ್ತು. 50 ಸಾವಿರ ಕೊಡದೇ, ನೆಗೆಟಿವ್ ಸಿಗುವಂತಿರಲಿಲ್ಲ. ಆ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದವರು ಪಾರ್ವತಮ್ಮ ರಾಜಕುಮಾರ್. ಹಿಂದಿನ ರಾತ್ರಿ ಹೇಗೋ ದುಡ್ಡು ಕೊಟ್ಟು, ಮೂರು ಅಂಬಾಸಿಡರ್ ಕಾರ್‌ಗಳಲ್ಲಿ ನೆಗೆಟಿವ್ ಡಬ್ಬಗಳನ್ನು ಬೆಂಗಳೂರಿಗೆ ಸಾಗಿಸುವಷ್ಟರಲ್ಲಿ ಸುಸ್ತಾಗಿ ಹೋಯ್ತು. ಮೇನಕಾದಲ್ಲಿ ಚಿತ್ರ ಬಿಡುಗಡೆ. ಸಾಮಾನ್ಯವಾಗಿ ನೆಗೆಟಿವ್‌ಗಳನ್ನು ವಿತರಕರ ಕಚೇರಿಗೆ ತಂದು, ಅಲ್ಲಿ ಪೂಜೆ ಮಾಡಿಸಿ, ಚಿತ್ರಮಂದಿರಕ್ಕೆ ಸಾಗಿಸೋದು ವಾಡಿಕೆ.
ಆದರೆ, ತಡವಾಗಿ ಬಿಟ್ಟಿದೆ. ಜನ ಚಿತ್ರಮಂದಿರದೆದುರು ಕಾಯುತ್ತಿದ್ದಾರೆ. ಸುಮಾರು 2 ಸಾವಿರ ಜನ ಚಿತ್ರಮಂದಿರದ ಎದುರು ನಿಂತಿದ್ದಾರೆ. ಅಲ್ಲಿ ಗಲಾಟೆಗಳಾಗುತ್ತಿವೆ. ನಾವು ವಿತರಕರ ಕಚೇರಿಗೆ ಪ್ರಿಂಟ್ ತೆಗೆದುಕೊಂಡು ಹೋಗುತ್ತಿದ್ದಂತೆಯೇ, ಪೂಜೆ ಇಲ್ಲದೆ ಚಿತ್ರಮಂದಿರಕ್ಕೆ ತೆಗೆದುಕೊಂಡು ಹೋಗಬೇಕಾಯಿತು. ಕೊನೆಗೆ 11 ಗಂಟೆಗೆ ಚಿತ್ರದ ಪ್ರದರ್ಶನ ಶುರುವಾಯಿತು. ಜನ ಜಾಸ್ತಿಯಾಗಿ, ಕಾಲು¤ಳಿತವಾಗಿ, ಒಬ್ಬರು ಪ್ರಾಣ ಕಳೆದುಕೊಳ್ಳಬೇಕಾಯಿತು.
ಆದರೆ, ಚಿತ್ರ ಮುಗಿಯುವಷ್ಟರಲ್ಲಿ ಚಿತ್ರ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದವು. ಚಿತ್ರ ಒಂಥರಾ ಮಜಾ ಇದೆ ಎಂಬ ಅಭಿಪ್ರಾಯ ಎಲ್ಲ ಕಡೆ ಬಂತು. ಚಿತ್ರ ಮೇನಕಾದಲ್ಲಿ ಏಳು ವಾರಗಳ ಕಾಲ ಹೌಸ್‌ಫುಲ್ ಪ್ರದರ್ಶನ ಕಂಡಿತು. ಚಿತ್ರ ಹಿಟ್ ಆಗಿದ್ದಷ್ಟೇ ಅಲ್ಲ, ಒಂದು ಟ್ರೆಂಡ್ ಸೆಟರ್ ಸಹ ಆಯಿತು. ಬರೀ ಡಬ್ಬಿಂಗ್‌ನಿಂದಲೇ ನಮಗೆ ಆ ಕಾಲಕ್ಕೆ 2 ಲಕ್ಷ ಬಂದಿತ್ತು. ಆಮೇಲೆ ಒಂದರ ಹಿಂದೊಂದು ಮೂರು ಬಾಂಡ್ ಚಿತ್ರಗಳನ್ನು ಮಾಡಿದೆವು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಭಗವಾನ್.