Advertisement

ಜೆಇ “ಆವಟೆ’ಬ್ರಹ್ಮಾಂಡ ಆಸ್ತಿ ಬಯಲು; 2.78 ಕೋಟಿ ರೂ. ಮೌಲ್ಯದ ಚರ-ಸ್ಥಿರಾಸ್ತಿ ಪತ್ತೆ

03:47 PM Feb 03, 2021 | Team Udayavani |

ಕಲಬುರಗಿ: ಸದ್ಯ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಚನ್ನಬಸಪ್ಪ ಆವಟೆ ನಿವಾಸ ಸೇರಿದಂತೆ ಮೂರು ಕಡೆಗಳಲ್ಲಿ ಮಂಗಳವಾರ ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, 2.78 ಕೋಟಿ ರೂ. ಮೌಲ್ಯದ ಆಸ್ತಿ, ಚಿನ್ನಾಭರಣ ಪತ್ತೆ ಹಚ್ಚಿದ್ದಾರೆ.

Advertisement

ಅಕ್ರಮ ಆಸ್ತಿ ಸಂಪಾದನೆ ದೂರು ಮೇರೆಗೆ ಇಲ್ಲಿನ ಹಳೆ ಜೇವರ್ಗಿ ರಸ್ತೆಯಲ್ಲಿರುವ ಚನ್ನಬಸಪ್ಪ ಅವರಿಗೆ ಸೇರಿದ ಓಂ ರೆಸಿಡೆನ್ಸಿ ಮತ್ತು ಇದೇ ರೆಸಿಡೆನ್ಸಿಯಲ್ಲಿರುವ ಗೋಕುಲ್‌ ಸೂಪರ್‌ ಮಾರ್ಟ್‌, ಚಿಂಚೋಳಿ ತಾಲೂಕಿನ ಫಾರ್ಮ್ ಹೌಸ್‌ಗಳಲ್ಲಿ ಎಸಿಬಿ ಎಸ್‌ಪಿ ಮಹೇಶ ಮೇಘಣ್ಣವರ್‌, ಡಿಎಸ್‌ಪಿ ವೀರೇಶ ಕರಡಿಗುಡ್ಡ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು. 40 ಅಧಿಕಾರಿಗಳು ಸೇರಿ ಭ್ರಷ್ಟ ಅಧಿಕಾರಿಯ ಜನ್ಮ ಜಾಲಾಡಿದರು.

ಓಂ ರೆಸಿಡೆನ್ಸಿಯಲ್ಲಿ ಎಂಟು ಫ್ಲಾಟ್‌ಗಳನ್ನು ಚನ್ನಬಸಪ್ಪ ಹೊಂದಿದ್ದು, ಹಿರಿಯ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸಿದರು. ದಾಳಿ ವೇಳೆ ಹತ್ತು ಚಿನ್ನದ ಸರಗಳು, ಹತ್ತಾರು ಉಂಗುರಗಳು, ಅರ್ಧ ಕೆಜಿ ಚಿನ್ನಾಭರಣ, ಒಂದು ಕೆಜಿಗೂ ಅಧಿಕ ಬೆಳ್ಳಿ ವಸ್ತುಗಳು, ನಾಲ್ಕು ಗ್ರಾಂ ಪ್ಲಾಟಿನಂ ಪತ್ತೆಯಾಗಿವೆ. ಅಲ್ಲದೇ, ಕರುಣೇಶ್ವರ ನಗರದಲ್ಲಿ 44 ಫ್ಲಾಟ್‌ಗಳನ್ನು ಖುಷಿ ಡೆವಲಪರ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಹೊಂದಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಚನ್ನಬಸಪ್ಪ ಮಗ ಪಾಲುದಾರಿಕೆ ಹೊಂದಿರುವ ಸಾಧ್ಯತೆ ಇದ್ದು, ಎಸ್‌ಪಿ ಮಹೇಶ ಮೇಘಣ್ಣವರ್‌ ಮತ್ತು ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಚಿಂಚೋಳಿ ತಾಲೂಕಿನ ಮೊಗದಮ್‌ಪುರದಲ್ಲಿ ಚನ್ನಬಸಪ್ಪ ಅವರಿಗೆ ಸೇರಿದ ಫಾರ್ಮ್ ಹೌಸ್‌ ಇದ್ದು, ಸುಮಾರು 23 ಎಕರೆ ಕೃಷಿ ಜಮೀನು, ಟ್ರಾಕ್ಟರ್‌ ಸೇರಿ ಅಪಾರ ಆಸ್ತಿ ಹೊಂದಿದ್ದಾರೆ. ಅಲ್ಲದೇ, ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ವಡ್ಡಣಕೇರಿಯಲ್ಲಿ ಮೂರು ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಎರಡು ಐಷಾರಾಮಿ ಕಾರು, ಎರಡು ಬೈಕ್‌ ಹೊಂದಿರುವುದು ಪತ್ತೆಯಾಗಿದೆ. ಇಷ್ಟೇ ಅಲ್ಲದೇ, ಪಕ್ಕದ ತೆಲಂಗಾಣದಲ್ಲೂ ಚನ್ನಬಸಪ್ಪ ಅವಟೆ ಆಸ್ತಿ ಹೊಂದಿದ್ದು, ಹೈದರಾಬಾದ್‌ ಸಮೀಪ ಸಂಗಾರೆಡ್ಡಿಯಲ್ಲಿ ಒಂದು ಖಾಲಿ ನಿವೇಶನ ಹೊಂದಿರುವ ಕುರಿತು ದಾಖಲೆಗಳು ಪತ್ತೆಯಾಗಿವೆ.

Advertisement

ಚನ್ನಬಸಪ್ಪ ಪತ್ನಿ ಕವಿತಾ ಮತ್ತು ಪುತ್ರ
ಶ್ರೀಕಾಂತ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಲಾಗಿದೆ. ಚಿನ್ನಾಭರಣಗಳನ್ನು ಮಗಳಿಗಾಗಿ ಮಾಡಿಸಿದ್ದಾಗಿವೆ. ಅಲ್ಲದೇ, ಪತ್ನಿ ತಮ್ಮನ ಹೆಸರಲ್ಲೂ ಆಸ್ತಿ ದಾಖಲಾತಿಗಳು ಸಿಕ್ಕಿವೆ ಎನ್ನಲಾಗುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ನಗದು ಹಣ ಪತ್ತೆಯಾಗಿದೆ. ಬೆಳಗ್ಗೆಯಿಂದ ರಾತ್ರಿ 8 ಗಂಟೆಯವರೆಗೂ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಸಂಪೂರ್ಣ ದಾಖಲೆಗಳ ಪರಿಶೀಲನೆ ನಡೆದ ಬಳಿಕ ಆಸ್ತಿ ಮೌಲ್ಯದ ನಿಖರ ಮಾಹಿತಿ ಲಭ್ಯವಾಗಲಿದೆ
ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. ದಾಳಿಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ರಾಘ ವೇಂದ್ರ, ಮೊಹಮ್ಮದ್‌ ಇಸ್ಮಾಯಿಲ್‌ ಹಾಗೂ ಬೀದರ್‌, ಯಾದಗಿರಿ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮೂರು ತಿಂಗಳಿಂದ ರಜ
ಸದ್ಯ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಪಿಡಬ್ಲ್ಯುಡಿ ಕಿರಿಯ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ 54 ವರ್ಷದ ಚನ್ನಬಸಪ್ಪ ಆವಟೆ, ಇದಕ್ಕೂ ಮುನ್ನ ಆಳಂದದಲ್ಲಿ ಜಿಲ್ಲಾ ಪಂಚಾಯಿತಿ ಇಂಜಿಯರಿಂಗ್‌ ವಿಭಾಗದಲ್ಲಿ ಇದ್ದರು. ಮೂರು ತಿಂಗಳ ಹಿಂದೆ ಇಲ್ಲಿಂದ ವರ್ಗಾವಣೆಗೊಂಡ ನಂತರ ಮಾಗಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಬಳಿಕ ಸತತ ಮೂರು ತಿಂಗಳಿಂದಲೂ ರಜೆ ಮೇಲೆ ಇದ್ದು, ಮಂಗಳವಾರ ದಾಳಿ ಸಮಯದಲ್ಲಿ ಮನೆಯಲ್ಲೇ ಚನ್ನಬಸಪ್ಪ ಆವಟೆ ಇದ್ದರು. ಅಲ್ಲದೇ, ಈ ಹಿಂದೆ ಯಾದಗಿರಿಯಲ್ಲೂ ಕರ್ತವ್ಯ ವಹಿಸಿದ್ದರು.

ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್‌ ಚನ್ನಬಸಪ್ಪ ಆವಟೆ ಅವರು ಹೊಂದಿರುವ ಆಸ್ತಿಪಾಸ್ತಿ ಮೇಲೆ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಚಿಂಳಿ ತಾಲೂಕಿನಲ್ಲಿ ಫಾರ್ಮ್ ಹೌಸ್‌ ಸೇರಿ ಹಲವೆಡೆ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.
*ಮಹೇಶ ಮೇಘಣ್ಣವರ್‌, ಎಸಿಬಿ ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next