ಭದ್ರಾವತಿ: ದೇಶವನ್ನು ಕಾಯುವ ಭಾರತದ ಯೋಧರ ಪಡೆ ದೇಶದ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುತ್ತಿದ್ದರೆ, ದೇಶದ ಒಳಗೆ ಸೈನಿಕರಂತೆ ದುಡಿಯುವ ಯುವ ಪಡೆ ನಿರ್ಮಾಣ ಮಾಡುವ ನಿಟ್ಟಿಯಲ್ಲಿ ಸಂಯುಕ್ತ ಜನತಾದಳ ಮುಂದಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಹೇಳಿದರು.
ಭಾನುವಾರ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಂಯುಕ್ತ ಜನತಾದಳ ಪದಗ್ರಹಣ, ಸಿದ್ಧಗಂಗಾ ಮಠಾಧಿಧೀಶ, ನಡೆದಾಡುವ ದೇವರು ಡಾ| ಶ್ರೀ ಶಿವಕುಮಾರ ಸ್ವಾಮಿಗಳಿಗೆ ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಕಾಯುವ ಯೋಧರ ಸೇವೆ ಅನನ್ಯವಾಗಿದ್ದು ಸೈನಿಕರು ಕೇವಲ ಯುದ್ಧಕ್ಕಾಗಿ ತಮ್ಮ ಕಾರ್ಯವನ್ನು ಮೀಸಲಿಡದೆ ದೇಶದ ಅಭಿವೃದ್ಧಿಗೆ ಸಹ ದುಡಿಯುತ್ತಿದ್ದಾರೆ. ಅವರ ಸೇವೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದರು.
ಪಕ್ಷ ಯುವ ಸಮುದಾಯದ ಕಡೆ ಹೆಚ್ಚಿನ ಗಮನ ನೀಡಿದೆ. ಯುವಕರನ್ನು ಹೆಚ್ಚಾಗಿ ಸಂಘಟಿಸುವ ಅಗತ್ಯವಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ನಗರದ ಎರಡು ಕಣ್ಣುಗಳಾಗಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅಭಿವೃದ್ಧಿಗೊಳ್ಳಬೇಕಾಗಿದೆ. ಪಕ್ಷದ ಯುವ ಪಡೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆದಾರರು ನಡೆಸುತ್ತಿರುವ ಹೋರಾಟಕ್ಕೆ ಪಕ್ಷ ಬೆಂಬಲ ನೀಡಲಿದ್ದು, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಡುವ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಬದಲಿಗೆ ಅವರ ಹೋರಾಟದಲ್ಲಿ ನಾವುಗಳು ಸಹ ಭಾಗಿಯಾಗುತ್ತಿದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷರಾಗಿ ಶಶಿಕುಮಾರ್ ಎಸ್. ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಾಬು ದೀಪಕ್ ಕುಮಾರ್ ಪದಗ್ರಹಣ ಸ್ವೀಕರಿಸಿದರು. ಉಳಿದಂತೆ ಬಹುತೇಕ ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು.
ನಿವೃತ್ತ ಯೋಧರಾದ ಚಂದ್ರಕುಮಾರ್, ಜಗದೀಶ್‌ಕುಮಾರ್, ಶ್ರೀಧರ್, ಆನಂದ್ ಮತ್ತು ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಕೆ.ವಿ ಶಿವರಾಮ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಎನ್ ರಾಜು, ಸತ್ಯನಾರಾಯಣ ಘೋರ್ಪಡೆ, ತಾತೋಜಿರಾವ್, ಉಪನ್ಯಾಸಕ ಡಾ| ಕೆ.ಎನ್. ಗಿರೀಶ್, ಎಸ್. ಕೃಷ್ಣ, ಗೀತಾಂಜಲಿ ಮತ್ತಿತರರು ಇದ್ದರು.