ಪಾಟ್ನಾ: ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆಗೆ ಮಹಿಳಾ ನಾಯಕಿಯೊಬ್ಬರ ಪ್ರವೇಶವಾಗಿದೆ. ಜೆಡಿಯು ನಾಯಕ ಬಿನೋದ್ ಚೌಧರಿ ಅವರ ಪುತ್ರಿ ಪುಷ್ಪಂ ಪ್ರಿಯಾ ಚೌಧರಿ “ನಾನೇ ಮುಖ್ಯಮಂತ್ರಿ’ ಎಂದು ಘೋಷಿಸಿಕೊಂಡಿದ್ದಾರೆ. ಜತೆಗೆ “ಪೂರಲ್ಸ್’ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅವರು ಬಿಹಾರದ ಪ್ರಮುಖ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತು ನೀಡಿದ್ದಾರೆ. ಅದರಲ್ಲಿ ಉಲ್ಲೇಖಗೊಂಡಿರುವ ಮಾಹಿತಿ ಪ್ರಕಾರ ಹೊಸ ಪಕ್ಷ “ಎಲ್ಲರೂ ಆಡಳಿತ ನಡೆಸುತ್ತಾರೆ’ ಎಂಬ ವಾಕ್ಯವನ್ನು ಹೊಂದಿದೆ. “ಬಿಹಾರಕ್ಕೆ ಬದಲಾವಣೆ, ಶಾಂತಿ ಬೇಕಾಗಿದೆ. ಅದಕ್ಕಾಗಿ ನಮ್ಮ ಪಕ್ಷವನ್ನು ಸೇರಿಕೊಳ್ಳಿ. ಬಿಜೆಪಿ-ಎಲ್‌ಜೆಪಿ-ಜೆಡಿಯುನಿಂದ ರಾಜ್ಯವನ್ನು ಬಿಡಿಸಲು ಬೆಂಬಲ ಕೊಡಿ’ ಎಂದು ಹೇಳಿಕೊಳ್ಳಲಾಗಿದೆ. 2025ರೊಳಗೆ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ವಾಗ್ಧಾನ ಮಾಡಲಾಗಿದೆ. ಪುತ್ರಿಯ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿನೋದ್ ಚೌಧರಿ “ಜೆಡಿಯು ಅವರಿಗೆ ಬೆಂಬಲ ನೀಡುವುದಿಲ್ಲ. ಪುತ್ರಿಯ ನಿರ್ಧಾರದ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವರು ಪಕ್ಷದ ನಾಯಕತ್ವಕ್ಕೆ ಸವಾಲು ಹಾಕುತ್ತಿದ್ದಾಳೆ’ ಎಂದಿದ್ದಾರೆ.