Advertisement

ಜೆಡಿಎಸ್‌ನ ಅ.ದೇವೇಗೌಡ ಬಿಜೆಪಿಗೆ ಸೇರ್ಪಡೆ

12:51 PM Nov 12, 2017 | |

ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅ.ದೇವೇಗೌಡ ಶನಿವಾರ ಬಿಜೆಪಿಗೆ ಸೇರಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಸೋಮಣ್ಣ ಸಮ್ಮುಖದಲ್ಲಿ
ದೇವೇಗೌಡ ಪಕ್ಷ ಸೇರ್ಪಡೆಯಾದರು.

ಆದರೆ, ಅ. ದೇವೇಗೌಡ ಸೇರ್ಪಡೆಗೆ ಬಿಜೆಪಿ ವಲಯದಲ್ಲೇ ಅಸಮಾಧಾನ ಉಂಟಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿ ರಾಜ್ಯದ ನಾಯಕರು ಪರಿವರ್ತನಾ ಯಾತ್ರೆಯಲ್ಲಿದ್ದಾಗ ಇತ್ತ ತರಾತುರಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಿಢೀರ್‌ ಸೇರ್ಪಡೆ: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಷ್ಟೇ ಅ.ದೇವೇಗೌಡ
ಹೆಸರು ಪ್ರಸ್ತಾಪವಾಗಿತ್ತು. ಆಗ, ಖುದ್ದು ಯಡಿಯೂರಪ್ಪ “ಅವರಿನ್ನೂ ಪಕ್ಷಕ್ಕೆ ಸೇರ್ಪಡೆಯಾಗಿಲ್ಲವಲ್ಲ’ ಎಂದು
ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ಶನಿವಾರ ದಿಢೀರ್‌ ಅ.ದೇವೇಗೌಡ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಸಂಬಂಧ
ಅಧಿಕೃತ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ಆದರೆ ಮಧ್ಯಾಹ್ನ 1 ಗಂಟೆಗೆ ಪಕ್ಷದ ಪ್ರಮುಖ ರಾಜ್ಯ ನಾಯಕರ
ಅನುಪಸ್ಥಿತಿಯಲ್ಲಿ ದಿಢೀರ್‌ ಸೇರ್ಪಡೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ವಿಧಾನ ಪರಿಷತ್‌ಗೆ ಬೆಂಗಳೂರು
ಪದವೀಧರ ಕ್ಷೇತ್ರದ ಚುನಾವಣೆ ಹೊಸ್ತಿಲಲ್ಲೇ ಅ.ದೇವೇಗೌಡ ಸೇರ್ಪಡೆ ಆಗಿರುವುದು ಪಕ್ಷದ ಇತರೆ ಟಿಕೆಟ್‌ ಆಕಾಂಕ್ಷಿಗಳಿಗೆ ತಡೆಯೊಡ್ಡುವ ತಂತ್ರ ಎನ್ನಲಾಗಿದೆ.

ಬೆಂಗಳೂರು ಪದವೀಧರ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿದ್ದ ರಾಮಚಂದ್ರೇಗೌಡರಿಂದ ತೆರವಾದ ಸ್ಥಾನಕ್ಕೆ
ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಪಕ್ಷದ ಮುಖಂಡರಾದ ಎಚ್‌.ಆನಂದ್‌, ಜೈಶಂಕರ್‌ ಪ್ರಬಲ ಟಿಕೆಟ್‌
ಆಕಾಂಕ್ಷಿಯಾಗಿದ್ದರು. ಪ್ರಬಲ ಟಿಕೆಟ್‌ ಆಕಾಂಕ್ಷಿ ಆನಂದ್‌ರ ಪ್ರಯತ್ನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲೇ ಅ.ದೇವೇಗೌಡ ಪಕ್ಷ ಸೇರ್ಪಡೆ ತರಾತುರಿಯಲ್ಲಿ ನಡೆದಿದೆ ಎನ್ನಲಾಗಿದೆ. ಏಕೆಂದರೆ ಆನಂದ್‌, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ಗೆ ಆಪ್ತರಾಗಿದ್ದಾರೆ. ಹೀಗಾಗಿ, ಅವರಿಗೆ ಟಿಕೆಟ್‌ ತಪ್ಪಿಸುವ ಸಲುವಾಗಿ ಅ.ದೇವೇಗೌಡರನ್ನು ಪಕ್ಷಕ್ಕೆ ಕರೆತರಲಾಗಿದೆ. ಈ ಪ್ರಕ್ರಿಯೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ತೆರೆಮರೆಯಲ್ಲೇ ಮಹತ್ವದ ಪಾತ್ರ ವಹಿಸಿದ್ದಾರೆಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

Advertisement

ಇಷ್ಟಾದರೂ ಅಭ್ಯರ್ಥಿ ಆಯ್ಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ಧಾರಕ್ಕೆ
ಬಿಟ್ಟಿರುವುದರಿಂದ ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next