ಹುಣಸೂರು: ಹುಣಸೂರಿನಲ್ಲಿ ಜೆಡಿಎಸ್ ಗೆದ್ದರೆ ಸಾಲದು ರಾಜ್ಯಾದ್ಯಂತ ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಪ್ರವಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ತಿಳಿಸಿದರು.
ತಾಲೂಕಿನ ಗಾವಡಗೆರೆ ಹೋಬಳಿ ಹಿರೀಕ್ಯಾತಹಳ್ಳಿ ಗ್ರಾಪಂ ವ್ಯಾಪ್ತಿಯ ಶೀರೇನಹಳ್ಳಿ, ಮರೂರು, ಕೆರಗಾಲಕೊಪ್ಪಲು, ಮರೂರುಕಾವಲ್, ಕಟ್ಟೆಮಳಲವಾಡಿ ಗ್ರಾಮಗಳಲ್ಲಿ ಕಾರ್ಯಕರ್ತರು, ಮತದಾರರ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹುಣಸೂರು ಕ್ಷೇತ್ರ ಮಾತ್ರ ಗೆದ್ದರೆ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ತಾವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ಸಂಘಟನೆ ಮಾಡಬೇಕು ಅದರಲ್ಲೂ ಉತ್ತರ ಭಾಗದಲ್ಲಿ ವಿಶೇಷವಾಗಿ ಹೈದರಾಬಾದ್ ಕರ್ನಾಟಕದ ಕ್ಷೇತ್ರಗಳನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಪ್ರವಾಸ ಮಾಡುತ್ತಿದ್ದೇನೆಂದರು.
ಸೇವೆ ಅನನ್ಯ: ತಾಲೂಕಿನಲ್ಲಿ ಹಿಂದಿನ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಎಚ್.ಚಿಕ್ಕಮಾದು ಅವರ ಕಾರ್ಯಕರ್ತರ ಸಂಘಟನೆ ಹಾಗೂ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಾದೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಸ್ವಾಮಿ ಗ್ರಾಮಾಂತರ ಉಪಾಧ್ಯಕ್ಷ ನಾಗೇಶ್, ಮಹಿಳಾ ಅಧ್ಯಕ್ಷೆ ವಸಂತಮ್ಮ, ಮುಖಂಡರಾದ ಸತೀಶ್, ಕೆಂಪೇಗೌಡ, ಬಾಲಕೃಷ್ಣೇಗೌಡ, ಹೊನ್ನಪ್ಪರಾವ್ ಕಾಳಿಂಗೆ, ಹರೀಶ್, ನಾಗರಾಜು, ಪ್ರಕಾಶ್, ಈರೇಗೌಡ, ಪಾಪೇಗೌಡ, ಪುಟ್ಟಮಾದಯ್ಯ, ಶ್ರೀಧರ್, ಸ್ವಾಮಿಗೌಡ, ಬಸವರಾಜು, ಶಿವಪ್ಪ ಇದ್ದರು.
ಪಕ್ಷ ಸೇರ್ಪಡೆ: ಇದೇ ವೇಳೆ ಹಿರೀಕ್ಯಾತನಹಳ್ಳಿ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಪ್ರಕಾಶ್, ದಲಿತ ಮುಖಂಡರಾದ ರವಿ, ಪುಟ್ಟರಾಜು, ಜೆಡಿಎಸ್ ಸೇರ್ಪಡೆಯಾದರು.