ಬೆಳಗಾವಿ: ಬಿಜೆಪಿ ನಡೆಸಬಹುದಾದ ಆಪರೇಷನ್ ಕಮಲಕ್ಕೆ ಪ್ರತ್ಯಸ್ತ್ರ ಹೂಡಲು ಜೆಡಿಎಸ್ ಈಗಲೇ ಸಜ್ಜಾಗುತ್ತಿರುವಂತಿದೆ. ಆ ಕಾರಣಕ್ಕಾಗಿಯೇ, ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೂ ಜೆಡಿಎಸ್ ತನ್ನ ಕೋಟಾದ ಎರಡು ಸ್ಥಾನ ಹಾಗೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.
ಒಂದೊಮ್ಮೆ ಆಪರೇಷನ್ ಕಮಲ ಕಾರ್ಯಾಚರಣೆ ನಡೆದರೆ ಬಿಜೆಪಿ ಶಾಸಕರನ್ನು ಸೆಳೆಯಲು ಎರಡು ಸಚಿವ ಸ್ಥಾನ ಇಟ್ಟುಕೊಳ್ಳುವುದು ಸೂಕ್ತ. ಈಗ ಭರ್ತಿ ಮಾಡಿದರೆ ಮತ್ತೆ ಯಾರನ್ನೂ ರಾಜೀನಾಮೆ ಕೊಡಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ, ಸಂಪುಟ ವಿಸ್ತರಣೆಯಾದರೂ ಜೆಡಿಎಸ್ ಕೋಟಾ ಭರ್ತಿ ಆಗುವುದು ಅನುಮಾನ ಎಂದು ಹೇಳಲಾಗಿದೆ.
ಜೆಡಿಎಸ್ ಕೋಟಾದಡಿ ಎರಡು ಸ್ಥಾನಗಳಲ್ಲಿ ಒಂದು ಮುಸ್ಲಿಂ, ಮತ್ತೂಂದು ಪರಿಶಿಷ್ಟ ಜಾತಿ ಶಾಸಕರಿಗೆ ಅವಕಾಶ ಕಲ್ಪಿಸಿಕೊಡಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಯಸಿದ್ದರು. ಬಿ.ಎಂ.ಫರೂಕ್, ಎಚ್.ಕೆ.ಕುಮಾರಸ್ವಾಮಿ ಅವರ ಹೆಸರು ಪರಿಶೀಲನೆಯಲ್ಲಿತ್ತು. ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಜೆಡಿಎಸ್‌ಗೆ ಸಚಿವ ಸ್ಥಾನ ತುಂಬಲೇಬೇಕಾದ ಅನಿವಾರ್ಯತೆ ಇಲ್ಲ. ಜತೆಗೆ ಒತ್ತಡ ಅಥವಾ ಅಸಮಾಧಾನ ಸ್ಫೋಟದ ಆತಂಕವೂ ಇಲ್ಲ. ಹೀಗಿರುವಾಗ ಖಾಲಿ ಇಟ್ಟುಕೊಳ್ಳಬಹುದಲ್ಲವೇ ಎಂದು ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಜೆಡಿಎಸ್‌ಗೆ ಸಂಪುಟ ವಿಸ್ತರಣೆ ಬಗ್ಗೆ ನಿರಾಸಕ್ತಿಯಿದ್ದು, ಕಾಂಗ್ರೆಸ್‌ನವರು ಬೇಕಾದರೆ ಅವರ ಕೋಟಾದ ಸಚಿವಗಿರಿ ಭರ್ತಿ ಮಾಡಿಕೊಳ್ಳಲಿ ಎಂಬ ಮನಸ್ಥಿತಿಯಲ್ಲಿದೆ. ಒಂದೊಮ್ಮೆ ಮಾಜಿ ಪ್ರಧಾನಿ ದೇವೇಗೌಡರು ಪಟ್ಟು ಹಿಡಿದರೆ ತೀರ್ಮಾನ ಬದಲಾಗಬಹುದು ಎಂದು ತಿಳಿದು ಬಂದಿದೆ. ಸಂಪುಟ ಕೋಟಾ ಭರ್ತಿ ಮಾಡಿಕೊಳ್ಳದಿದ್ದರೂ ನಿಗಮ-ಮಂಡಳಿ ಅಧ್ಯಕ್ಷರ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಿ ಹಲವು ಶಾಸಕರಿಗೆ ಅಧಿಕಾರ ಕೊಡಲು ನಿರ್ಧರಿಸಲಾಗಿದೆ. ಗುರುವಾರ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಕುರಿತು ಚರ್ಚೆಯಾಗಿತ್ತು.
ಸಭೆಗೆ ಕಾದು ತೆರಳಿದ ಜೆಡಿಎಸ್ ಅಧ್ಯಕ್ಷ!:
ಬೆಳಗಾವಿ- ಖಾನಾಪುರ ರಸ್ತೆಯಲ್ಲಿನ “ಜಂಗಲ್ ಲಾಡ್ಜ್’ (ಭೀಮ್‌ಗಡ್)ನಲ್ಲಿ ಬುಧವಾರ ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಆದರೆ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ತಡವಾಗಿ ಆರಂಭವಾಗಿದ್ದರಿಂದ ತಡರಾತ್ರಿವರೆಗೂ ಸಭೆ ಆರಂಭವಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿ ಹಲವು ಶಾಸಕರು ಒಂದಿಷ್ಟು ಹೊತ್ತು ಕಾದು ಬಳಿಕ ಊಟ ಮುಗಿಸಿ ನಿರ್ಗಮಿಸಿದ್ದರು. ಆ ಬಳಿಕ ಸಭೆಗೆ ಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಳಿದವರೊಂದಿಗೆ ಸಮಾಲೋಚನೆ ನಡೆಸಿದರು ಎಂದು ಹೇಳಲಾಗಿದೆ.