Advertisement

“ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ಖಚಿತ’

03:53 PM Nov 27, 2017 | |

ಕೋಲಾರ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡೆಸುತ್ತಿರುವ “ಕುಮಾರ ಪರ್ವ’
ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಪಕ್ಷದ ನೂತನ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕಾಂಗ್ರೆಸ್‌ ದುರಾಡಳಿತದಿಂದ ಬೇಸತ್ತಿರುವ ಜನತೆ ಈ ಸರ್ಕಾರವನ್ನು ಕಿತ್ತೂಗೆಯುವ ಸಂಕಲ್ಪ ಮಾಡಿದ್ದಾರೆ. ಜನರ ಆಶಯಗಳಿಗೆ ತಕ್ಕಂತೆ ಜನಪರ ಆಡಳಿತ ನಡೆಸುವ ಶಕ್ತಿ ಜೆಡಿಎಸ್‌ಗೆ ಮಾತ್ರ ಇದೆ ಎಂದರು. ರಾಜ್ಯದ ಸಂಪತ್ತನ್ನು ಕಾಂಗ್ರೆಸ್‌, ಬಿಜೆಪಿ ಲೂಟಿ ಮಾಡಿವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಖಜಾನೆ ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ಗೆ ಅಧಿಕಾರ ಶತಸಿದ್ಧ: ರಾಜ್ಯದ ಜನತೆ ಕಾಂಗ್ರೆಸ್‌, ಬಿಜೆಪಿ ದುರಾಡಳಿತ ನೋಡಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಜೆಡಿಎಸ್‌ಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಆದ್ದರಿಂದ ಈ ಬಾರಿ ನಾವು ಅಧಿಕಾರಕ್ಕೆ ಬರುವುದು ಶತಸಿದ್ಧ. ಗ್ರಾಮ ವಾಸ್ತವ್ಯದ ಮೂಲಕ ಜನರ ಕಷ್ಟ ತಿಳಿಯುವ ಶಕ್ತಿ ಕುಮಾರಸ್ವಾಮಿ ಅವರಿಗೆ ಮಾತ್ರವಿದೆ. ಯಡಿಯೂರಪ್ಪ, ರಾಹುಲ್‌ ಗಾಂಧಿ ಗ್ರಾಮ ವಾಸ್ತವ್ಯ ಮಾಡಿದರೆ ಜನ ಲೇವಡಿ ಮಾಡುತ್ತಾರೆ ಎಂದು ಟೀಕಿಸಿದರು.

ಬದಲಾವಣೆಯ ಗಾಳಿ: ಜೆಡಿಎಸ್‌ ಜನರ ಕಷ್ಟಗಳನ್ನು ದೂರ ಮಾಡಲು ಪ್ರಣಾಳಿಕೆ ತಯಾರು ಮಾಡಿದೆ. ನಮ್ಮದು ರೈತಪರ ಆಡಳಿತ ಎಂಬುದನ್ನು ಈ ಹಿಂದೆ 20 ತಿಂಗಳ ಆಡಳಿತದಲ್ಲಿ ದೃಢಪಡಿಸಿದ್ದೇವೆ. ಜನತೆ ಕುಮಾರಸ್ವಾಮಿ ಅವರನ್ನು ನಂಬಿದ್ದಾರೆ. ಬದಲಾವಣೆಯ ಗಾಳಿ ಬೀಸಿ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಕುಮಾರಸ್ವಾಮಿ ಸಿಎಂ ಆದರೆ ಮಾತ್ರ ರಾಜ್ಯದಲ್ಲಿ ಉತ್ತಮ ರೈತಪರ ವಾತಾವರಣ ಸೃಷ್ಟಿಯಾಗಿ ಬೃಹತ್‌ ನೀರಾವರಿ ಯೋಜನೆಗಳ ಜಾರಿ
ಸಾಧ್ಯ ಎಂದರು.

ತಳಮಟ್ಟದಿಂದ ಪಕ್ಷ ಕಟ್ಟಬೇಕು: ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಆದರೆ, ನಮ್ಮವರೇ ಕೆಲವರು ಹಣದಾಸೆಗೆ ಬೇರೆ ಬೇರೆ ಚಿಂತನೆ ಮಾಡುತ್ತಿದ್ದಾರೆ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದು ಇಂದಿನ ಅಗತ್ಯವಾಗಿದೆ. ತಳಮಟ್ಟದಿಂದ ಪಕ್ಷ ಕಟ್ಟಬೇಕು. ಯುವಕರು,
ಮಹಿಳೆಯರಿಗೆ ಆದ್ಯತೆ ನೀಡಬೇಕೆಂದರು.

Advertisement

ಕಾಂಗ್ರೆಸ್‌, ಬಿಜೆಪಿಯಿಂದ ಜಿಲ್ಲೆಗೆ ಅನ್ಯಾಯ: ಜೆಡಿಎಸ್‌ನ ಅನ್ವರ್‌ ಪಾಷ ಮಾತನಾಡಿ, ಜಿಲ್ಲೆಯಲ್ಲಿ ಶ್ರೀನಿವಾಸಗೌಡರಿಗೆ ಯಾರು ಆಡ್ಡಿಯಿಲ್ಲ. ಹೀಗಾಗಿ, ಹೊರಗೆ ಬಂದು ಪಕ್ಷದ ಪರವಾಗಿ ಪ್ರಚಾರ ನಡೆಸುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಭಾವವಿದೆ. ಬರದ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಯಾವುದೇ ಸರಕಾರಗಳು ಪರಿಗಣಿಸಿಲ್ಲ. ಆದರೆ, ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಿಎಂ ಆದಾಗ ಶ್ರೀನಿವಾಸಗೌಡರು ಸಚಿವರಾಗುವ ಮೂಲಕ ಯರಗೋಳ್‌ ಯೋಜನೆಗೆ ಶುಂಕುಸ್ಥಾಪನೆ ನೆರವೇರಿಸಿ 2006 ರಲ್ಲಿ ಯೋಜನೆಗೆ 280 ಕೋಟಿ ರೂ. ಮಂಜೂರು ಮಾಡಿಸಿದ್ದರು. ನಂತರ ಕಾಂಗ್ರೆಸ್‌ ಮತ್ತು ಬಿಜೆಪಿ ಸರಕಾರಗಳು ಜಿಲ್ಲೆಗೆ ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡಿದವು ಎಂದು ದೂರಿದರು.

ಸಂಘಟನೆಗೆ ಒತ್ತು ನೀಡಿ: ಜೆಡಿಎಸ್‌ ಮಾಲೂರು ತಾಲೂಕು ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಮಾಜಿ ಸಚಿವ ಬೈರೇಗೌಡರ ನಂತರ ಸ್ಥಾನವನ್ನು ಕೇವಲ ಶ್ರೀನಿವಾಸಗೌಡರು ಮಾತ್ರ ತುಂಬಲು ಸಾಧ್ಯ. ಹೀಗಾಗಿ, ಜಿಲ್ಲಾ ಕೇಂದ್ರದಲ್ಲಿ ಜೆಡಿಎಸ್‌ ಪಕ್ಷ ಬಲಿಷ್ಠಗೊಂಡರೆ ಮಾತ್ರ ತಾಲೂಕು ಕೇಂದ್ರಗಳಲ್ಲಿ ಪಕ್ಷವನ್ನು ಕಾರ್ಯಕರ್ತರು ಸಂಘಟನೆ ಮಾಡಲು ಸಾಧ್ಯವಾಗುತ್ತದೆ. ಹೊರಗಿನ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್‌ ನೀಡದೇ, ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಂಡು ಸಂಘಟನೆಗೆ ಒತ್ತು ನೀಡಬೇಕೆಂದರು.

ಜೆಡಿಎಸ್‌ ಜಿಲ್ಲಾ ಉಸ್ತುವಾರಿ ಕೆ.ಬಿ.ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್‌, ಕೋಚಿಮುಲ್‌ ನಿರ್ದೇಶಕ ಆರ್‌.ರಾಮಕೃಷ್ಣೇಗೌಡ, ಜಿಪಂ ಉಪಾಧ್ಯಕ್ಷೆ ಯಶೋಧಾ, ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಈ.ಗೋಪಾಲಪ್ಪ, ತಾಲೂಕು ಅಧ್ಯಕ್ಷ ಕೆ.ಎಂ.ಜೆ.ಮೌನಿ ಬಾಬು, ಹಿಂದುಳಿದ ವರ್ಗಗಳ ಘಟಕಾಧ್ಯಕ್ಷ ಜೇಟ್‌ ಅಶೋಕ್‌, ಮಹಿಳಾ ಘಟಕಾಧ್ಯಕ್ಷೆ ರಾಜೇಶ್ವರಿ ಮುಂತದವರು ಹಾಜರಿದ್ದರು.

ಹಿಂದೆ ಅವಿಭಜಿತ ಕೋಲಾರ ಜಿಲ್ಲೆಯ 12 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ 11 ಸ್ಥಾನ ಗೆದ್ದಿದ್ದ ಇತಿಹಾಸವಿದೆ. ಅದನ್ನು ಮರುಕಳಿಸುವಂತೆ ಮಾಡಬೇಕು. ಈಗಲೂ ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಗೆ ಮುಂದಾದರೆ
ನಾವು ಜಿಲ್ಲೆಯ ಎಲ್ಲಾ ಆರೂ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ.
●ಕೆ.ಶ್ರೀನಿವಾಸಗೌಡ, ಮಾಜಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next