ಕಾಂಗ್ರೆಸ್ ಜತೆ ಮೈತ್ರಿಗೆ ಒಪ್ಪಿ ಹನ್ನೆರಡು ಕ್ಷೇತ್ರಗಳಿಗೆ ಬೇಡಿಕೆಯಿಟ್ಟು ಅಂತಿಮವಾಗಿ ಎಂಟು ಕ್ಷೇತ್ರಗಳಿಗೆ ತೃಪ್ತಿ ಹೊಂದಿರುವ ಜೆಡಿಎಸ್, ಉತ್ತರ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿ ಕೊರತೆ ಇರುವುದರಿಂದ ಉಳಿದ ಆರು ಕ್ಷೇತ್ರಗಳಲ್ಲಿ ಗೆಲ್ಲುವ “ಟಾರ್ಗೆಟ್’ ಹೊಂದಿದೆ.
ಮಂಡ್ಯ, ಹಾಸನ, ಶಿವಮೊಗ್ಗ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯೂ ಪಕ್ಕಾ ಆಗಿದ್ದು ತುಮಕೂರು ಕ್ಷೇತ್ರಕ್ಕೆ ಬಹುತೇಕ ಎಚ್.ಡಿ.ದೇವೇಗೌಡರೇ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ವಿಜಯಪುರ ಕ್ಷೇತ್ರ
ದಲ್ಲಿ ಮಾಜಿ ಶಾಸಕ ಎಸ್.ಕೆ.ರಾಥೋಡ್ ಪುತ್ರ ಅರ್ಜುನ್ ರಾಥೋಡ್ ಅಥವಾ ಶಾಸಕ ದೇವಾನಂದ ಚೌವ್ಹಾಣ್ ಪತ್ನಿ, ಉತ್ತರ ಕನ್ನಡ ಕ್ಷೇತ್ರದಲ್ಲಿ ಆನಂದ್ ಅಸ್ನೋಟಿಕರ್ ಅಥವಾ ಆರ್.ವಿ. ದೇಶಪಾಂಡೆ ಪುತ್ರನೇ ಜೆಡಿಎಸ್ ಅಭ್ಯರ್ಥಿ ಯಾಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ.
Advertisement
ಎಚ್.ಡಿ.ದೇವೇಗೌಡ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ತುಮಕೂರು ಕ್ಷೇತ್ರದಿಂದ ರಮೇಶ್‌ಬಾಬು ಅಥವಾ ಸುರೇಶ್‌ಬಾಬು ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ದೇವೇಗೌಡರು ಉತ್ತರದಿಂದ ಸ್ಪರ್ಧೆ ಮಾಡಿದರೆ, ಬೆಂಗಳೂರು ಉತ್ತರ ಮತ್ತು ತುಮಕೂರು ಎರಡೂ ಕಡೆ ಗೆಲ್ಲಬಹುದು ಎಂಬ ಲೆಕ್ಕಾಚಾರವೂ ಇದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ತುಮಕೂರಿನ ಮುದ್ದಹನುಮೇಗೌಡರನ್ನು ಜೆಡಿಎಸ್ ಅಭ್ಯರ್ಥಿ ಮಾಡಿ ಎಂಬ ಒತ್ತಡವೂ ಇದೆ.