ಬೆಳಗಾವಿ: “ಸರಕಾರದ ಸಾಧನಾ ಸಮಾವೇಶಗಳಲ್ಲಿ ಮಾತು ಮಾತಿಗೂ ಕುಮಾರಸ್ವಾಮಿ ಅವರ ಅಪ್ಪನಾಣೆಗೆ ಮುಖ್ಯಮಂತ್ರಿ ಆಗುವುದಿಲ್ಲ. ಜೆಡಿಎಸ್ ಸರಕಾರ ರಚನೆ ಮಾಡುವುದಿಲ್ಲ. ಯಡಿಯೂರಪ್ಪ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವದಿಲ್ಲ ಎಂದು ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಾರೆ. ನಮ್ಮಪ್ಪ ಇವರಿಗೆ ಬಿಟ್ಟಿ ಸಿಕ್ಕಿದ್ದಾರೆಯೇ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಬೇಕಿದ್ದರೆ ಅವರಪ್ಪನ ಮೇಲೆ ಆಣೆ ಮಾಡಲಿ. ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ. ಒಬ್ಬ ಮುಖ್ಯಮಂತ್ರಿ ಮಾತನಾಡುವ ಮಾತು ಇದಲ್ಲ. ಮುಖ್ಯಮಂತ್ರಿ ಆದವರಿಗೆ ಘನತೆ ಹಾಗೂ ಗೌರವ ಇರಬೇಕು. ಮಾತನಾಡುವಾಗ ಆ ಹುದ್ದೆಯ ಮಾನ ಕಾಪಾಡಬೇಕು ಎಂದು ಚಾಟಿ ಬೀಸಿದರು.
ಜೆಎಡಿಎಸ್ ಹಾಗೂ ದೇವೇಗೌಡರ ಬಗ್ಗೆ ಯಾರೂ ಟೀಕೆ ಮಾಡಬೇಡಿ ಎಂದು ಬಿಜೆಪಿಯವರಿಗೆ ಅಮಿತ್ ಶಾ ಹೇಳಿದ್ದಾರೆ. ಅದೇ ರೀತಿ, ಪ್ರಧಾನಮಂತ್ರಿ ಕುರಿತು ಯಾರೂ ಹಗುರವಾಗಿ ಮಾತನಾಡಬಾರದು ಎಂದು ಜೆಡಿಎಸ್ ನಾಯಕರಿಗೆ ದೇವೇಗೌಡ ಹೇಳಿದ್ದಾರೆ ಎಂದು ಸಿದ್ದರಾಮಯ್ಯಗೆ ಯಾರೋ ಕಿವಿ ಚುಚ್ಚಿದ್ದಾರೆ. ಅದನ್ನೇ ನಂಬಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾತು ಮಾತಿಗೂ ಆಣೆಯ ಪ್ರಸ್ತಾಪ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಮಿಮಿಕ್ರಿ ಮಾಡುತ್ತಿದ್ದ ಸಿ.ಎಂ.ಇಬ್ರಾಹಿಂ ಸ್ಥಾನವನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಬಿದ್ದಾರೆ ಎಂದು ಕಿಡಿ ಕಾರಿದರು.
ಜೆಡಿಎಸ್‌ಗೆ ಯಾವ ಪಕ್ಷದ ಹಂಗಿಲ್ಲ: ನಮಗೆ ಯಾವ ಪಕ್ಷದ ಹಂಗೂ ಇಲ್ಲ. ಸ್ವತಂತ್ರವಾಗಿ ಸರಕಾರ ರಚನೆ ಮಾಡುತ್ತೇವೆ. 113 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ರಾಜ್ಯದ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕೆಲವು ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಇನ್ನೊಬ್ಬರ ಜೊತೆ ಕೈಜೋಡಿಸಿ ಅವುಗಳನ್ನು ಹಾಳುಮಾಡಿಕೊಳ್ಳಲು ನಾನು ತಯಾರಿಲ್ಲ ಎಂದರು.