ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಟುಂಬದಿಂದ ಉತ್ತರ ಕರ್ನಾಟಕ ಬಾಗಕ್ಕೆ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯೊಳಗೆ ಉತ್ತರ ನೀಡಲು ಜೆಡಿಎಸ್ ಸಿದ್ಧವಾಗುತ್ತಿದೆ. ಉ.ಕ.ಭಾಗಕ್ಕೆ ಜೆಡಿಎಸ್ ಹಾಗೂ ಎಚ್.ಡಿ. ದೇವೇಗೌಡರ ಕುಟುಂಬದ ಕೊಡುಗೆಯೇನು ಎಂಬುದನ್ನು ಆ ಭಾಗಜನರಿಗೆ ತಿಳಿಸುವ ಉದ್ದೇಶದಿಂದ ಕಿರುಹೊತ್ತಿಗೆ ಸಿದ್ಧಪಡಿಸಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಮನೆ ಮನೆಗೆ ಹಂಚಲು ಭಾನುವಾರ ನಡೆದ ಜೆಡಿಎಸ್ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆ ಕಿರುಹೊತ್ತಿಗೆಗೆ
ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ.ದತ್ತ ಹೊರತಂದಿದ್ದ “ಉತ್ತರ ಪತ್ರ’ ಪುಸ್ತಕ, ಎಚ್.ಡಿ. ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಯಾದಾಗ 20 ತಿಂಗಳ ಅವಧಿಯಲ್ಲಿ ಆ ಭಾಗಕ್ಕೆ ನೀಡಿದ ಕಾರ್ಯಕ್ರಮಗಳು, ಈಗ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರದ ಬಜೆಟ್ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಘೋಷಿಸಿದ ಕಾರ್ಯಕ್ರಮಗಳಿಗೆ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ನೀಡಿದ ಅನುದಾನ ಮುಂತಾದ ಅಂಶಗಳೊಂದಿಗೆ ಕಿರುಹೊತ್ತಿಗೆ ಸಿದ್ಧಪಡಿಸಲಾಗುತ್ತಿದೆ.
ಸಭೆಯಲ್ಲಿ ಚರ್ಚೆ: ಸೋಮವಾರ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಚ್.ವಿಶ್ವನಾಥ್ ಅವರು ಈಗಾಗಲೇ ಕಿರುಹೊತ್ತಿಗೆ ಸಿದಟಛಿಪಡಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ. ಕಿರುಹೊತ್ತಿಗೆಯಲ್ಲಿ ಯಾವೆಲ್ಲ ಅಂಶಗಳಿರಬೇಕು? ಅದನ್ನು ಜನರಿಗೆ ಮನವರಿಕೆಯಾಗುವಂತೆ ಹೇಗೆ ವಿವರಿಸಬೇಕು ಎಂಬಿತ್ಯಾದಿ ಸೂಚನೆಗಳನ್ನು ಮುಖಂಡರಿಗೆ ನೀಡಿದ್ದಾರೆ. ಈಗಾಗಲೇ ಪುಸ್ತಕಕ್ಕೆ ಬೇಕಾದ ಮಾಹಿತಿಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭವಾಗಿದ್ದು, ಶುಕ್ರವಾರದೊಳಗೆ ಸಿದಟಛಿತಾ ಕಾರ್ಯ ಪೂರ್ಣಗೊಳಿಸಲಾಗುವುದು. ದೇವೇಗೌಡರ ಸೂಚನೆಯಂತೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ಕಿರುಹೊತ್ತಿಗೆಗಳನ್ನು ಮುದ್ರಿಸಿ ಮನೆ ಮನೆಗಳಿಗೆ ಹಂಚಿಕೆ ಮಾಡಲಾಗುವುದೆಂದು ಮೂಲಗಳು ಹೇಳಿವೆ.