ಹಗರಿಬೊಮ್ಮನಹಳ್ಳಿ: ಜನಪರವಾಗಿ ಇರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯನ್ನು ಅನುಸರಿಸುತ್ತಾ ಸಾಮಾನ್ಯ ಜನರ ಬದುಕನ್ನು ಕಸಿದುಕೊಂಡಿವೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ| ತಿಪ್ಪೇಸ್ವಾಮಿ ವೆಂಕಟೇಶ್ ಆಡಳಿತ ಸರ್ಕಾರಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಜೆಡಿಎಸ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ತೈಲ ಬೆಲೆ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತ ವಿರೋಧಿಯಾಗಿದೆ. ಪ್ರಚಾರಕ್ಕೆ ಮಾತ್ರ ಬೆಂಬಲ ಬೆಲೆ ಘೋಷಿಸಿಕೊಂಡು ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ರೈತರ ಮುನಿಸಿಗೆ ಕಾರಣವಾಗಿವೆ. ಮಾಜಿ ಸಿಎಂ ಕುಮಾರ ಸ್ವಾಮಿಯವರಿಗೆ ಮಾತ್ರ ರೈತಪರವಾದ ಕಾಳಜಿ ಇತ್ತು. ರಾಜ್ಯದಲ್ಲಿ ಆಳ್ವಿಕೆ ಮಾಡಿದ ಯಾವೊಬ್ಬ ಮುಖ್ಯಮಂತ್ರಿಗಳು ರೈತಪರವಾಗಿ ನಿಂತಿರುವ ಉದಾಹರಣೆಗಳಿಲ್ಲ. ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್‌ಗಳ ಬೆಲೆಗಳನ್ನು ಹೆಚ್ಚಿಸಿರುವುದರಿಂದ ಜನಜೀವನ ಕಷ್ಟಕರವಾಗಿದೆ. ನಿತ್ಯ ಜೀವನದ ಅಗತ್ಯವಸ್ತುಗಳ ಬೆಲೆಯೂ ಹೆಚ್ಚಿಸಿರುವುದರಿಂದ ಬದುಕು ದುಸ್ತರವಾಗಿದೆ. ಸರಕಾರಗಳು ಕೂಡಲೇ ತೈಲ ಬೆಲೆ ಮತ್ತು ಸಿಲಿಂಡರ್ ಬೆಲೆಗಳನ್ನು ಇಳಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ ಮಾತನಾಡಿ, ದೇಶದ ಜನರನ್ನು ಕಾಡುತ್ತಿರುವ ಕೊರೊನಾ ಹಾವಳಿ ಒಂದುಕಡೆಯಾದರೆ, ಬೆಲೆಗಳ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನತೆ ಕಂಗಲಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ಏರಿಸಿ ಜನಸಾಮಾನ್ಯರಿಗೆ ಬರೆ ಹಾಕಿದಂತಾಗಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ದೂರಿದರು.
ಇದಕ್ಕೂ ಮುನ್ನ ಪಟ್ಟಣದ ಬಸವೇಶ್ವರ ಪುತ್ಥಳಿ ಬಳಿ ಪಕ್ಷದ ಪದಾಧಿ ಕಾರಿಗಳು ಪ್ರತಿಭಟಿಸಿದರು. ನಂತರ ತಹಸೀಲ್ದಾರ್ ಶರಣಮ್ಮರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕೊಟ್ಟೂರು ತಾಲೂಕು ಅಧ್ಯಕ್ಷ ಪಿ.ಎಚ್.ಎಸ್.ಪರಮೇಶ, ಯುವ ಘಟಕದ ಅಧ್ಯಕ್ಷ ಕೆ.ವೈ. ಶಿವಕುಮಾರ್,ಸುಭಾನ್‌ಸಾಬ್, ಇಕ್ಬಾಲ್, ಪಾಂಡುನಾಯ್ಕ, ಕೊಟ್ರೇಶ್ ಉಪ್ಪಾರ್, ಹೊಸಕೆರೆ ಸಿದ್ದೇಶ, ಕುಮಾರ್, ರಾಮಸ್ವಾಮಿ, ಫೋಟೋ ರಾಮಣ್ಣ, ಮಹಾಬಲೇಶಪ್ಪ ಇತರರಿದ್ದರು.