Advertisement
ದಿನ ಬಳಕೆ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡಿಗೆ ಎಣ್ಣೆ, ಆಹಾರ ಪದಾರ್ಥ, ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ರಸಗೊಬ್ಬರ ಬೆಲೆ ಏರಿಕೆ ಹಾಗೂ ಹಿಜಾಬ್, ಹಲಾಲ್, ಜಟ್ಕಾಕಟ್ ಹಂತಹ ವಿವಾದವನ್ನು ಕೋಮುಶಕ್ತಿಗಳು ಹುಟ್ಟು ಹಾಕುತ್ತಿರುವುದನ್ನು ಖಂಡಿಸಿ ಪಟ್ಟಣದ ಜೆಡಿಎಸ್ ಕಚೇರಿಯಿಂದ ತಾಲೂಕು ಕಚೇರಿವರೆಗೆ ಮಾಜಿ ಸಚಿವ ಡಿ.ನಾಗರಾಜಯ್ಯ, ಜೆಡಿಎಸ್ ತಾಲೂಕು ಆಧ್ಯಕ್ಷ ಬಿ.ಎನ್.ಜಗದೀಶ್ ಅವರ ನೇತೃತ್ವದಲ್ಲಿ ಬೃಹತ್ ಎತ್ತಿನಗಾಡಿ ಜಾಥಾ ನಡೆಸಿ, ತಾಲೂಕು ಕಚೇರಿ ಅವರಣದಲ್ಲಿ ಮಹಿಳೆಯರು ಗ್ಯಾಸ್ ಸಿಲಿಂಡರ್, ಸೌದೆ ಓಲೆಯನ್ನು ಇಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.
Related Articles
Advertisement
ಸಂತೋಷ್ ಸಾವಿಗೆ ಬಿಜೆಪಿ ಕಾರಣ : ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಸಾವಿಗೆ ಬಿಜೆಪಿಯೇ ನೇರ ಕಾರಣವೆಂದು ಗಂಭೀರ ಆರೋಪ ಮಾಡಿದ ಮಾಜಿ ಸಚಿವರು, ಸಂತೋಷ್ ಅವರು ಸಚಿವ ಈಶ್ವರಪ್ಪ ಅವರ ಅನುಮತಿ ಪಡೆದು ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಕೋಟಿ ರೂ ಖರ್ಚು ಮಾಡಿ 108 ರಸ್ತೆ ಕಾಮಗಾರಿ ಮಾಡಿದ್ದಾರೆ, ಕಾಮಗಾರಿ ಆದೇಶ ಹಾಗೂ ಬಿಲ್ ಮಾಡಲು ಶೇ 40 ರಷ್ಟು ಕಮಿಷನ್ ಕೊಡುವಂತೆ ಆತನ ಮೇಲೆ ಒತ್ತಡ ಏರಿದ್ದಾರೆ, ಈ ಸಂಬಂಧ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಆಮಿತ್ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದರು ಕ್ರಮಕೈಗೊಳ್ಳಲಿಲ್ಲ ಇದರಿಂದ ಸಾಲ ಮಾಡಿ ಹಾಗೂ ಹೆಂಡತಿಯ ವಡವೆಯನ್ನು ಅಡ ಇಟ್ಟಿ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಬಿಜೆಪಿ ನಾಯಕರೇ ಕಾರಣ ಎಂದು ದೂರಿದರು.
ಶಾಸಕರಿಂದ ಶೇ 30 ರಷ್ಟು ಕಮಿಷನ್ : ತಾಲೂಕಿನಲ್ಲಿ ಸರ್ಕಾರದಿಂದ ನಡೆಯುವ ಯಾವುದೇ ಕಾಮಗಾರಿಗೆ ಗುತ್ತಿಗೆದಾರರು ಶೇ 30 ರಷ್ಟು ಕಮಿಷನ್ ಶಾಸಕ ಡಾ.ರಂಗನಾಥ್ ಅವರಿಗೆ ಕೊಡಬೇಕಾಗಿದೆ ಎಂದು ದೂರು ಕೇಳಿ ಬರುತ್ತಿದೆ, ಇದು ಹೀಗೆ ಮುಂದುವರೆದರೆ ತಾಲೂಕಿನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಸಂಶಯವಿಲ್ಲ ಎಂದು ನಾಗರಾಜಯ್ಯ ಹೇಳಿದರು, ಶಾಸಕರು ಸರ್ಕಾರದಿಂದ ಹೊಸದಾಗಿ ಯಾವುದೇ ಅನುದಾನ ಮಂಜೂರು ಮಾಡಿಸಿಲ್ಲ, ನನ್ನ ಅಧಿಕಾರ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿ ಶಾಸಕರು ಗುದ್ದಲಿಪೂಜೆ ಮಾಡುತ್ತಿದ್ದಾರೆ, ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದಿಂದ ಒಂದು ನಾಯಾ ಪೈಸೆ ತಾಲೂಕಿನ ಅಭಿವೃದ್ದಿಗೆ ವಿನಿಯೋಗಿಸಿಲ್ಲ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ ಮಾತನಾಡಿ ಬಿಜೆಪಿ ಸರ್ಕಾರ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ, ಕೋಮು ಗಲಬೆಯನ್ನು ಹತ್ತಿಕ್ಕುವಲ್ಲಿ ವಿಫಲಗೊಂಡಿದೆ, ಬಡವರಿಗೆ ರಕ್ಷಣೆ ಇಲ್ಲದಂತ್ತಾಗಿದೆ, ಕೋಮು ಸೌಹಾರ್ಧ ಹಾಗೂ ಜಾತಿಗೆ ಬಣ್ಣ ಕಟ್ಟುವ ಕೆಲಸವಾಗುತ್ತಿದೆ, ಕೆಲ ಸಂಘಟನೆಗಳು ಧರ್ಮ, ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ, ಜಾತಿಯ ವಿಷ ಬೀಜ ಭಿತ್ತಿ ಕೋಮುಗಲಬೆಗೆ ಪ್ರಚೋದನೆ ನೀಡುತ್ತಿದೆ, ಇದು ಹೀಗೆ ಮುಂದುವರೆದರೆ ದೇಶ ಎರಡನೇ ತಾಲಿಬಾನ್ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಮೃತ ಸಂತೋಷ್ ಕೆ.ಪಾಟೀಲ್ ಅವರಿಗೆ ಸಂತಾಪ ಸೂಚಿಸಲಾಯಿತು, ತಹಶೀಲ್ದಾರ್ ಮಹಬಲೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಹರೀಶ್‌ನಾಯ್ಕ್, ಗ್ರಾ.ಪಂ ಸದಸ್ಯರಾದ ತರಿಕೆರೆ ಪ್ರಕಾಶ್, ಎಡಿಯೂರು ದೀಪು, ಪುರಸಭಾ ಮಾಜಿ ಅಧ್ಯಕ್ಷರಾದ ಕೆ.ಎಸ್.ಹರೀಶ್, ಆಯಿಷಾ ಬಿ, ಸದಸ್ಯ ಅನ್ಸಾರ್‌ಪಾಷ, ಮುಖಂಡರಾದ ತಮ್ಮಣ್ಣ, ನಯಾಜ್ ಅಹಮದ್, ಬೆನವಾರ ಶೇಷಾದ್ರಿ, ವೈ.ಹೆಚ್.ರಂಗಸ್ವಾಮಿ ಮತ್ತಿತರರು ಭಾಗವಹಿಸಿದರು.