Advertisement

2023 ಚುನಾವಣೆಯಲ್ಲಿ ಜೆಡಿಎಸ್ ನಿಂದ 30-35 ಮಹಿಳೆಯರಿಗೆ ಟಿಕೆಟ್: ಹೆಚ್ ಡಿ ಕೆ ಘೋಷಣೆ

01:13 PM Sep 29, 2021 | Team Udayavani |

ರಾಮನಗರ: 2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು ಇಡುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು  ಘೋಷಣೆ ಮಾಡಿದರು.

Advertisement

ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ಕೇತಗಾನಹಳ್ಳಿಯ  ತೋಟದಲ್ಲಿ ಹಮ್ಮಿಕೊಳ್ಳಲಾಗಿರುವ 3ನೆ ದಿನದ ಸಂಘಟನಾ ಕಾರ್ಯಗಾರ ಆರಂಭವಾಗುವುದಕ್ಕೆ ಮುನ್ನ ಅವರು  ಮಾಧ್ಯಮಗಳ ಜತೆ ಮಾತನಾಡಿದರು.

ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು  ಮಹಿಳೆಯರಿಗೆ ಕೊಡಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ‌ ಮಾಡುವ ಕೆಲಸ ಮಾಡಲಾಗುವುದು ಎಂದ ಅವರು, ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ ಎಂದರು.

ಮಹಿಳೆಯರಿಗೂ ಟಾಸ್ಕ್:

Advertisement

ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಟಾಸ್ಕ್ ಕೊಡಲಾಗುವುದು. 3ನೇ ದಿನ‌ದ ಇಂದಿನ  ಕಾರ್ಯಾಗಾರದಲ್ಲಿ ಮಹಿಳಾ ಘಟಕದ ಸದಸ್ಯರಿಗೆ ಪಕ್ಷ ಹಾಗೂ ಚುನಾವಣೆಗಾಗಿ ಒಂದು ದಿಕ್ಸೂಚಿ ನಿಗದಿ ಮಾಡಲಾಗುವುದು.30 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ; ದೀಪಕ್ ರಾವ್ ಕೊಲೆ ಆರೋಪಿಯ ಬಂಧನ

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಇಂದು ಚರ್ಚೆ ಮಾಡುವುದರ ಜತೆಗೆ, ಎಲ್ಲ ಮಹಿಳಾ ನಾಯಕಿಯರಿಗೆ ಸೂಕ್ತ ತರಬೇತಿ ಕೊಡಲಾಗುವುದು. ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನ ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತದೆ.

ಮಹಿಳೆಯರಿಗೆ 33% ಮೀಸಲು ವಿಧೇಯಕ:

ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರು  ಮಹಿಳೆಯರಿಗೆ ಚುನಾವಣೆಯಲ್ಲಿ 33% ಮೀಸಲಾತಿ ಕೊಡಬೇಕು ಅಂತ ಧ್ವನಿ ಎತ್ತಿದ್ದರು. ಆದರೆ ಕಾಂಗ್ರೆಸ್- ಬಿಜೆಪಿ ಸರ್ಕಾರಗಳು ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾದುತ್ತೇವೆ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 33% ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

ಮಹಿಳಾ ಕಾರ್ಯಾಗಾರಕ್ಕೆ ಚಾಲನೆ:

ಇದೇ ವೇಳೆ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಹಾಗೂ ಮಹಿಳಾ ಜೆಡಿಎಸ್ ರಾಜ್ಯಾಧ್ಯಕ್ಷೆಯಾದ ಲೀಲಾದೇವಿ ಆರ್ ಪ್ರಸಾದ್ ಅವರು ಕಾರ್ಯಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು. ಈ ಕ್ಷಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸಾಕ್ಷಿಯಾದರು.

ಪ್ರಾಸ್ತಾವಿಕವಾಗಿ ಲೀಲಾದೇವಿ ಆರ್ ಪ್ರಸಾದ್ ಅವರು ಮಾತನಾಡಿದರು. ದೇವದುರ್ಗದ ಮುಂದಿನ ಅಭ್ಯರ್ಥಿ ಕರಿಯಮ್ಮ, ಮಹಿಳಾ ಜನತಾದಳದ ಬೆಂಗಳೂರು ಘಟಕದ ಅಧ್ಯಕ್ಷೆ ರುತ್ ಮನೋರಮಾ ವೇದಿಕೆಯ ಮೇಲಿದ್ದರು.

ಪ್ರತಿ ವಿಧಾನಸಭೆ ಕ್ಷೇತ್ರದಿಂದ ತಲಾ ಇಬ್ಬರಂತೆ ಮಹಿಳಾ ಪ್ರತಿನಿಧಿಗಳು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next