ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರು ಕೋವಿಡ್ 19 ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಬದಲು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ತಮ್ಮ ಹಿಂಬಾಲಕರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಮತ್ತು ಪಕ್ಷದ ಮುಖಂಡರು, ಕೋವಿಡ್ 19 ನಿಯಂತ್ರಣ ಕ್ರಮಗಳು ಆರಂಭವಾದರೂ ಶಾಸಕ ಪ್ರೀತಂ ಜೆ.ಗೌಡ ಅವರು ಕ್ಷೇತ್ರದತ್ತ ಬಾರದೇ ಮೂರು ವಾರ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಅವರ ಹಿಂಬಾಲಕ ಕ್ವಾಲಿಟಿ ಬಾರ್ ಮಾಲೀಕ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಪ್ರಕರಣ ಬಯಲಾಗುತ್ತಿದ್ದಂತೆ ಅವರ ರಕ್ಷಣೆಗಾಗಿ ಧಾವಿಸಿದ್ದಾರೆ. ಶಾಸಕರ ಆಪ್ತರು ಈಗಲೂ ತೋಟಗಳಲ್ಲಿ ಅಕ್ರಮವಾಗಿ ನಕಲಿ ಮದ್ಯವನ್ನು ತಯಾರಿಸಿ ದುಪ್ಪಟ್ಟು, ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಂತಹವರ ರಕ್ಷಣೆಗೆ ಶಾಸಕರು ನಿಂತಿದ್ದಾರೆ ಎಂದು ದೂರಿದರು.
ನೆರವಿನ ನೆಪದಲ್ಲಿ ಪ್ರಚಾರ-ಆರೋಪ: ಕೋವಿಡ್ 19 ನಿಯಂತ್ರಣ, ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪ್ರೀತಂ ಜೆ.ಗೌಡ ಅವರು ತಮ್ಮ ಭಾವಚಿತ್ರವಿರುವ ಬ್ಯಾಗು ಗಳಲ್ಲಿ ಈಗ ದಿನಸಿ ಪದಾರ್ಥಗಳನ್ನು ತುಂಬಿ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಂದರ್ಭದಲ್ಲಿಯೂ ಪ್ರಚಾರ ಪಡೆಯುವಂತಹ ಕೀಳು ಅಭಿರುಚಿಯನ್ನು ಶಾಸಕರು ಪ್ರದರ್ಶಿಸುತ್ತಿ ದ್ದಾರೆ ಎಂದು ಟೀಕಿಸಿದರು. ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಎಲ್ಲ ಜೆಡಿಎಸ್ ಶಾಸಕರು, ಮುಖಂಡರು ಅವರ ವ್ಯಾಪ್ತಿಯಲ್ಲಿ ಅಸಹಾಯಕರಿಗೆ ನೆರವಾಗುತ್ತಿದ್ದರೂ ನೆರವಿನ ನೆಪದಲ್ಲಿ ಪ್ರಚಾರ ಪಡೆಯುತ್ತಿಲ್ಲ ಎಂದರು.
ಎಷ್ಟು ಅನುದಾನ ತಂದಿದ್ದಾರೆ? ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಹಾಸನ ಜಿಲ್ಲೆಗೆ ನಾನೇ ಮುಖ್ಯಮಂತ್ರಿಯಾದಂತೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪ್ರೀತಂ ಜೆ.ಗೌಡರು ರಾಜ್ಯ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಎಷ್ಟು ಅನುದಾನ ಘೋಷಣೆ ಮಾಡಿಸಿದ್ದಾರೆಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಎಚ್.ಡಿ.ರೇವಣ್ಣ ಹಾಸನ ಮೆಡಿಕಲ್ ಕಾಲೇಜಿಗೆ 200 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸಿದ ಪರಿಣಾಮ ನೆರೆಯ ಜಿಲ್ಲೆಯ ಜನರು ಹಾಸನಕ್ಕೆ ಬಂದು ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಪ್ರೀತಂ ಗೌಡರಿಗೆ ರಾಜಕಾರಣ ವ್ಯಾಪಾರವಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಗೂ ಜನರು ಹಿಂದೇಟು ಹಾಕುವಂತೆ ಹಣದ ಥೈಲಿಯ ರಾಜಕಾರಣವನ್ನು ಆರಂಭಿಸಿದ್ದಾರೆ. ಇಂತಹ ರಾಜಕಾರಣಕ್ಕೆ ಜನರೇ ತಕ್ಕ ಉತ್ತವನ್ನು ಮುಂದಿನ ದಿನಗಳಲ್ಲಿ ಕೊಡಲಿದ್ದಾರೆ ಎಂದು ಹೇಳಿದರು.
ಹಾಸನ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಸಿ.ಗಿರೀಶ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಅನಿಲ್‌ಕುಮಾರ್, ಮಾಜಿ ಸದಸ್ಯ ಎಂ.ಕೆ.ಕಮಲ್‌ಕುಮಾರ್, ಜಿಲ್ಲಾ ಜೆಡಿಎಸ್ ವಕ್ತಾರ ಎಚ್.ಎಸ್.ರಘು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.