ಬ್ಯಾಡಗಿ: ಸ್ಥಳೀಯ ಪುರಸಭೆಯ 2 ಸ್ಥಾನಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಇಬ್ಬರು ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದ್ದು ಇದರಿಂದ ಮೇ 14 ಮಂಗಳವಾರದ ವರೆಗೆ ಕೇವಲ 2 ನಾಮಪತ್ರ ಮಾತ್ರ ಸಲ್ಲಿಕೆಯಾಗಿವೆ.
ಪಟ್ಟಣದ 11ನೇ ವಾರ್ಡನಿಂದ ಆಯ್ಕೆ ಬಯಸಿ ಮಾಲತೇಶ ಶಿವಪ್ಪ ಹಾವೇರಿ ಹಾಗೂ 12ನೇ ವಾರ್ಡ್‌ನಿಂದ ಶಹಜಾನ ದಸ್ತಗೀರಸಾಬ್ ಕಾಲೇಬಾವಿ ಜೆಡಿಎಸ್‌ನ ಹುರಿಯಾಳುಗಳಾಗಿ ಚುನಾವಣಾಧಿಕಾರಿ ಎಂ.ಎಫ್. ಬಾರ್ಕಿ ಅವರಿಗೆ ನಾಮಪತ್ರ ಸಲ್ಲಿಸಿದರು. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಮಗಿಯದ ಕಸರತ್ತು: ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಗಿಯದ ಕಾರಣ ಅಧಿಕೃತ ಅಭ್ಯರ್ಥಿಗಳು ಘೋಷಣೆಯಾಗಿಲ್ಲ. ಅಲ್ಲದೇ ಪಕ್ಷೇತರ ಅಭ್ಯರ್ಥಿಗಳು ಕೂಡಾ ಯಾವುದೇ ನಾಮಪತ್ರ ಈ ವರೆಗೂ ಸಲ್ಲಿಸಿಲ್ಲ. ಇನ್ನೆರಡು ದಿನಗಳಲ್ಲಿ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಆಕಾಂಕ್ಷಿಗಳ ಪೆರೇಡ್: ಬಿಜೆಪಿಯಲ್ಲಿ ಟಿಕೆಟ್ ಫೈಟ್ ಮಂಗಳವಾರವೂ ಮುಂದುವರೆದಿದ್ದು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಂತೆ ಕಂಡು ಬರಲಿಲ್ಲ. ಮೋಟೆಬೆನ್ನೂರಿನಲ್ಲಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ನಿವಾಸ ರಾಜಕೀಯ ಚಟು ವಟಿಕೆಗಳ ಕೇಂದ್ರವಾಗಿ ಪರಿವರ್ತನೆಗೊಂಡು. ಬೆಳಗ್ಗೆಯಿಂದಲೇ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸುವ ಮೂಲಕ ಶಾಸಕರ ನಿವಾಸದೆದುರು ಪೆರೇಡ್ ನಡೆಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಕಾದು ನೋಡುವ ತಂತ್ರ: ಕಾದು ನೋಡುವ ತಂತ್ರಕ್ಕೆ ಒಗ್ಗಿದಂತಿರುವ ಕಾಂಗ್ರೆಸ್‌ನಲ್ಲಿ ಮಾತ್ರ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದು, ಕೆಲ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರೆಬೆಲ್ ಆಗುವ ಅಭ್ಯರ್ಥಿಗಳಿಗೆ ಮಣೆಹಾಕುವ ಸಾಧ್ಯತೆಗಳಿವೆ. ಹೀಗಾಗಿ ಕೆಲ ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಸೂಚನೆ ನೀಡದಿರುವುದು ಇದಕ್ಕೆ ಕಾರಣವೆನ್ನಲಾಗುತ್ತಿದೆ.