ವಿಜಯಪುರ: ವಿಜಯಪುರ ಜಿಲ್ಲೆಯ ರಾಜಕೀಯದ ಮಟ್ಟಿಗೆ ಮುತ್ಯಾ ಎಂದೇ ಚಿರಪರಿಚಿರಾಗಿದ್ದ ಸಿಂದಗಿ ಶಾಸಕ, ಮಾಜಿ ಸಚಿವ ಎಂ.ಸಿ.ಮನಗೂಳಿ ರಾಜಕೀಯ ಬದ್ದತೆಗೆ ಹೆಸರಾಗಿದ್ದರು.
ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಕ್ಕೂ ಮುನ್ನ ಎಂ.ಸಿ. ಮನಗೂಳಿ ಗ್ರಾಮ ಸೇವಕರಾಗಿದ್ದರು. ಜನತಾದಳ ಇಬ್ಭಾಗವಾದಾಗ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೊಂದಿಗೆ ಗುರುತಿಸಿಕೊಂಡು, ಜೆಡಿಎಸ್ ಸೇರಿದ್ದರು. ಪಕ್ಷ ದುಸ್ಥಿತಿಯಲ್ಲಿ ಇದ್ದಾಗ ಅನ್ಯ ಪಕ್ಷ ಸೇರುವಂತೆ ಆಹ್ವಾನ ಬಂದರೂ ದೊಡ್ಡಗೌಡರ ಮೇಲಿನ ನಿಷ್ಠೆ ಬಿಡದೆ ಜೆಡಿಎಸ್ ಪಕ್ಷದಲ್ಲೇ ಉಳಿದಿದ್ದರು.
1994 ರಲ್ಲಿ ಮೊದಲ ಬಾರಿ ಶಾಸಕರಾದಾಗ ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಸಚಿವರಾಗಿದ್ದ ಮನಗೂಳಿ ಮುತ್ಯಾ, 2018 ರಲ್ಲಿ ಎರಡನೇ ಬಾರಿ ಗೆದ್ದಾಗಲೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ, ತೋಟಗಾರಿಕೆ ಖಾತೆ ನಿಭಾಯಿಸಿದ್ದರು.
ಇದನ್ನೂ ಓದಿ:ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನ
2018 ರ ವಿಧಾನಸಭೆ ಚುನಾವಣೆಯಲ್ಲಿ ಇದು ನನ್ನ ಕೊನೆ ಚುನಾವಣೆ, ಅಧಿಕಾರದಲ್ಲಿ ಇದ್ದಾಗಲೇ ನನಗೆ ಸಾವು ಬರಲಿ ಎಂದು ಹೇಳುತ್ತಿದ್ದರು. ವಿಧಿಯಾಟ ಕೊನೆಗೂ ಅವರು ಬಯಸಿದಂತೆ ಶಾಸಕರಾಗಿದ್ದಾಗಲೇ ವಿಧಿವಶರಾಗಿದ್ದಾರೆ.
ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ವಿರುದ್ದ 2018 ರ ವಿಧಾನಸಭೆ ಚುನಾವಣೆಯಲ್ಲಿ 9305 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ತೋಟಗಾರಿಕೆ ಸಚಿವರಾಗಿದ್ದಾಗ ವಿಜಯಪುರ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಮಂಜೂರು ಮಾಡಿಸಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯ ಆಲಮೇಲ ಪಟ್ಟಣದಲ್ಲಿ ಇನ್ನಷ್ಟೇ ಕಾಲೇಜು ಅಸ್ತಿತ್ವಕ್ಕೆ ಬರಬೇಕಿದೆ.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದಾಗ ಮುಖ್ಯಮಂತ್ರಿ ದೇವೇಗೌಡ ಅವರ ಮೇಲೆ ಒತ್ತಡ ಹಾಕಿ ಗುತ್ತಿ ಬಸವಣ್ಣ ಏತನೀರಾವರಿ ಯೋಜನೆ ಜಾರಿಗೊಳಿಸಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಹರಿಕಾರ ಎಂದು ಹಿರಿಮೆ ಪಡೆದಿದ್ದರು.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದರೆ ನಮ್ಮೂರಲ್ಲಿ ನಿಮ್ಮ ಪ್ರತಿಮೆ ನಿಲ್ಲಿಸುತ್ತೇನೆ ಎಂದು ದೇವೇಗೌಡ ಅವರಿಗೆ ಮಾತು ಕೊಟ್ಟಿದ್ದರು. ಯೋಜನೆ ಅನುಷ್ಠಾನದ ಬಳಿಕ ತಾವು ಅಧಿಕಾರದಲ್ಲಿ ಇಲ್ಲದಿದ್ದರೂ ಐದು ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ತಾವು ಹಾಗೂ ದೇವೇಗೌಡ ಅವರು ಜೊತೆಯಾಗಿ ನಿಂತಿರುವ ಕಂಚಿನ ಪ್ರತಿಮೆ ಮಾಡಿಸಿ, ಮಾಜಿ ಪ್ರಧಾನಿ ದೇವೇಗೌಡ ಅವರಿಂದಲೇ ಪ್ರತಿಮೆ ಅನಾವರಣಗೊಳಿಸಿ ವಚನ ಪಾಲಿಸಿದ್ದರು.
ಗೋಲಗೇರಿ ಗ್ರಾಮದಲ್ಲಿ ತಮ್ಮ ಹೆಗಲ ಮೇಲೆ ದೇವೇಗೌಡರು ಕೈಹಾಕಿದ ಪ್ರತಿಮೆ ಸ್ಥಾಪಿಸಿದ್ದು ನನ್ನ ಜೀವಿತ ಸಾರ್ಥಕ ಕ್ಷಣ ಎಂದೂ ಬಣ್ಣಿಸಿದ್ದರು. ಈಚೆಗೆ ಸದರಿ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿರೂಪಗೊಳಿಸಿದ ಘಟನೆಯಿಂದ ನೊಂದಿದ್ದರು.
ದೇವೇಗೌಡ ಅವರ ಮೇಲಿನ ಇವರ ಸ್ವಾಮಿ ನಿಷ್ಠೆಯ ಫಲವಾಗಿಯೇ ವಯೋ ಸಹಜವಾಗಿ ಪಕ್ಷ ಸಂಘಟನೆ ಅಸಾಧ್ಯ, ನನ್ನ ಪಕ್ಷದ ಜಿಲ್ಲಾಧ್ಯಕ್ಷ ಜವಾಬ್ದಾರಿಯಿಂದ ಮುಕ್ತಿಗೊಳಿಸಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಆದರೂ ದೇವೇಗೌಡರು ಮನಗೂಳಿ ಇವರಲ್ಲಿನ ಪಕ್ಷ ನಿಷ್ಠೆ ಮೆಚ್ಚಿ, ರಾಜಕೀಯ ಬದ್ಧತೆಯಿಂದಾಗಿ ಅವರನ್ನು ಹಲವು ದಶಕದಿಂದ ಜಿಲ್ಲಾಧ್ಯಕ್ಷರಾಗಿಯೇ ಮುಂದುವರೆಸಿದ್ದರು. ಕೆಲವೇ ತಿಂಗಳ ಹಿಂದೆ ಮನಗೂಳಿ ಅವರು ವಯೋಸಹಜವಾಗಿ ಇನ್ನು ನನ್ನಿಂದ ಪಕ್ಷದ ಜವಾಬ್ದಾರಿ ನಿರ್ವಹಣೆ ಅಸಾಧ್ಯ ಎಂದು ಪಟ್ಟು ಹಿಡಿದಾಗ ಅವರನ್ನು ಸಂಘಟನೆಯಿಂದ ಮುಕ್ತಗೊಳಿಸಲಾಗಿತ್ತು.