ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕ್ಷೇತ್ರ ಬಿಡುವ ಪ್ರಶ್ನೆ ಇಲ್ಲ. ಕ್ಷೇತ್ರದಲ್ಲಿಯೇ ಮನೆ ಮಾಡಿ ಪಕ್ಷ ಸಂಘಟನೆಯ ಕೆಲಸ ಮಾಡುವುದಾಗಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್.ರಾಧಕೃಷ್ಣ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊನೇಯ ಕ್ಷಣದಲ್ಲಿ ನಾನು ಉಪ ಚುನಾವಣೆ ಅಭ್ಯರ್ಥಿ ಆದೆ. ಆದ್ದರಿಂದ ಪಕ್ಷದ ಕಾರ್ಯಕರ್ತರನ್ನು ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಸೋಲಾಯಿತು. ಆದರೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿಯೇ ಮನೆ ಮಾಡಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಮಂತ್ರಿಯಾಗುತ್ತಿರುವ ಸುಧಾಕರ್ ಜೊತೆ ಪಕ್ಷಾತೀತವಾಗಿ ಕೈ ಜೋಡಿಸುತ್ತೇವೆ. ಜನ ವಿರೋಧಿ ಧೋರಣೆ ಅನುಸರಿಸಿದರೆ ಹೋರಾಟ ನಡೆಸುತ್ತೇವೆಂದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಚುನಾವಣೆಯಲ್ಲಿ ಸಾಕಷ್ಟು ಅಕ್ರಮ, ಆನ್ಯಾಯಗಳು ಅಗಿರುವುದರಿಂದ ನಮಗೆ ಸೋಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತ ಏಕಪಕ್ಷೀಯವಾಗಿ ಕೆಲಸ ಮಾಡಿದೆ. ಸಹಜವಾಗಿ ಉಪ ಚುನಾವಣೆಯಲ್ಲಿ ಆಡಳಿತರೂಢ ಪಕ್ಷಗಳು ಗೆಲುವು ಸಾಧಿಸುವುದು ಸಹಜ. ಆದರೆ ನಾವು ಸೋತ ಮಾತ್ರಕ್ಕೆ ಪಲಾಯನ ಮಾಡದೇ ಕ್ಷೇತ್ರದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲಾಗುವುದೆಂದರು.
ಸುದ್ದಿಗೋಷ್ಟಿಯಲ್ಲಿ ಜಿಪಂ ಸದಸ್ಯರಾದ ಮುನೇಗೌಡ, ರಜಾಕಾಂತ್, ಮುಖಡರಾದ ಬಾಸ್ಕರ್, ಅವುಲುಕೊಂಡ ರಾಯಪ್ಪ, ಮಟಮಪ್ಪ, ರಾಜಕುಮಾರ್, ಬಾಲಕುಂಟಹಳ್ಳಿ ಮುನಿಯಪ್ಪ, ಶಿವ ಕುಮಾರ್, ಅಪ್ಪಿ, ಸಾಧಿಕ್ ಮತ್ತಿತರರು ಪಾಲ್ಗೊಂಡಿದ್ದರು.