Advertisement

ಫೆ. 10 ಕ್ಕೆ ಬೆಂಗಳೂರಲ್ಲಿ ಜೆಡಿಎಸ್‌ ಬೃಹತ್‌ ಸಮಾವೇಶ

03:45 AM Feb 06, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ರಾಜ್ಯಪ್ರವಾಸ ಕುರಿತು ರೂಪುಧಿರೇಷೆ ತಯಾರಿಸಲು ಫೆಬ್ರವರಿ 10 ರಂದು ಜೆಡಿಎಸ್‌ ಸಮಾವೇಶ ಹಮ್ಮಿಕೊಂಡಿದೆ.

Advertisement

ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಪಕ್ಷದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಹಾಲಿ ಮತ್ತು ಮಾಜಿ ಸದಸ್ಯರು, ಶಾಸಕರು, ಸಂಸದರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರಿಗೆ ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ,  ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದು, ರಾಜ್ಯ ಪ್ರವಾಸಕ್ಕೆ ಸಮಿತಿ ರಚಿಸುವುದು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಈ ತಿಂಗಳ 10 ರಂದು ಅರಮನೆ ಮೈದಾನದಲ್ಲಿ  ಬೃಹತ್‌ ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಈ  ಸಮಾವೇಶದಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ,ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯ ಹಾಲಿ ಮತ್ತು ಮಾಜಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು  ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಎಲ್ಲ ರೀತಿಯಲ್ಲೂ ಲೆಕ್ಕಾಚಾರ ಮಾಡಿ ಅಳೆದೂ ತೂಗಿ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿಳಂಬ ಮಾಡುವುದಿಲ್ಲ. ಒಮ್ಮೆ ಅಭ್ಯರ್ಥಿಗಳನ್ನು ಘೋಷಿಸಿದರೆ ಮತ್ತೆ ಬದಲಾಯಿಸುವ ಮಾತೇ ಇಲ್ಲ ಎಂದು ಹೇಳಿದರು.ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ಪೈಕಿ ಗೋಪಾಲಯ್ಯ ಹೊರತುಪಡಿಸಿ ಉಳಿದವರಿಗೆ ಪಕ್ಷದ ಬಾಗಿಲು ಮುಚ್ಚಿದಂತೆಯೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಒತ್ತಾಯ
ನೈಸ್‌ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಪೈಕಿ ಉಪಯೋಗ ಮಾಡದ ಜಮೀನು ತಕ್ಷಣ ವಾಪಸ್‌ ಪಡೆದು ರೈತರಿಗೆ ನೀಡಬೇಕು. ಯಾವುದೇ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಇಂತಿಷ್ಟು ಅವಧಿಯಲ್ಲಿ ಉದ್ಧೇಶಿತ ಕಾರ್ಯಕ್ಕೆ ಬಳಸದಿದ್ದರೆ ಭೂಮಿ ವಾಪಸ್‌ ಪಡೆದು ಮೂಲ ರೈತರಿಗೆ ಹಂಚಿಕೆ ಮಾಡುವ ಬಗ್ಗೆ ನ್ಯಾಯಾಲಯವೇ ತಿಳಿಸಿದೆ. ಆದರೆ, ನೈಸ್‌ ವಿಷಯದಲ್ಲಿ ಆ ಕೆಲಸ  ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೈಸ್‌ ಯೋಜನೆಗೆ ರೈತರಿಂದ ಅಗತ್ಯಕ್ಕಿಂತ ಹೆಚ್ಚು ಜಮೀನು ಸ್ವಾಧೀನಪಡಿಸಿಕೊಂಡು ರಸ್ತೆ ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಸಲಾಗುತ್ತಿದೆ. ಆ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರವೂ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾರಿಕೆಗಳ ಸ್ಥಾಪನೆಗೆ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರ ಅದಕ್ಕೆ ತಕ್ಕಂತೆ ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ.ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದುವರೆಗೂ 25ಲಕ್ಷ ಹೆಕ್ಟೇರ್‌ ಜಮೀನು  ಸ್ವಾಧೀನಪಡಿಸಿಕೊಂಡಿದ್ದು,ಸೂಕ್ತ ಪರಿಹಾರ ನೀಡಿಲ್ಲ. ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

*ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರವರು ಅನುಭವಿಸಿರುವ ನೋವು ಅವರಿಗೆ ಗೊತ್ತಿರುತ್ತದೆ. ಆ ನೋವು ಏನೂ ಅಂತ ಅವರೂ ಹೇಳಿಲ್ಲ. ಹೀಗಾಗಿ, ರಾಜ್ಯದಲ್ಲಿ ಅಧಿಕಾರದಲ್ಲಿರುವವರು ಆ ಬಗ್ಗೆ ಹೇಳಬೇಕಷ್ಟೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next