Advertisement

JDS ಜನತಾ ಪ್ರಣಾಳಿಕೆ: ವರ್ಷಕ್ಕೆ 5 ಸಿಲಿಂಡರ್‌ ಉಚಿತ, ಸ್ತ್ರೀಶಕ್ತಿ ಸಾಲ ಮನ್ನಾ

10:37 PM Apr 27, 2023 | Team Udayavani |

ಬೆಂಗಳೂರು: ವರ್ಷಕ್ಕೆ ಐದು ಅಡುಗೆ ಅನಿಲ ಸಿಲಿಂಡರ್‌ ಉಚಿತ, ಗರ್ಭಿಣಿಯರಿಗೆ ಆರು ತಿಂಗಳು ಮಾಸಿಕ ಆರು ಸಾವಿರ ರೂ. ಭತ್ತೆ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ, ವಿಧವಾ ವೇತನ 2,500 ರೂ.ಗೆ ಏರಿಕೆ ಹಾಗೂ ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ…-ಇವು ಜೆಡಿಎಸ್‌ನ ಜನತಾ ಪ್ರಣಾಳಿಕೆಯ ಅಂಶಗಳು.

Advertisement

ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಇದನ್ನು ಬಿಡುಗಡೆ ಮಾಡಿದ್ದಾರೆ. ಮಾತೃಶ್ರೀ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆ ಖಾಯಂಗೊಳಿಸಿ ಮಾಸಿಕ 5 ಸಾವಿರ ರೂ. ಹೆಚ್ಚುವರಿ ವೇತನ, 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪಿಂಚಣಿ ಯೋಜನೆಯ ಭರವಸೆ ನೀಡಲಾಗಿದೆ.

ರೈತ ಬಂಧು ಯೋಜನೆಯಡಿ ಕೃಷಿ ಕಾರ್ಮಿಕರ ಕುಟುಂಬಕ್ಕೆ ಮಾಸಿಕ 2 ಸಾವಿರ ರೂ. ಸಹಾಯಧನ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಪ್ರತೀ ಎಕರೆಗೆ ವಾರ್ಷಿಕ 10 ಸಾವಿರ ರೂ., ಆಟೋ ಚಾಲಕರು, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಮಾಸಿಕ 2 ಸಾವಿರ ರೂ., ಬಿಪಿಎಲ್‌ ಕುಟುಂಬದ ಹಿರಿಯ ನಾಗರಿಕರ ಮಾಸಾಶನ 5 ಸಾವಿರ ರೂ.ಗೆ ಹೆಚ್ಚಳ, ವಿಶೇಷ ಚೇತನರ ಪಿಂಚಣಿ 2,500 ರೂ.ಗೆ ಏರಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ವಕೀಲರ ಮಾಸಿಕ ಭತ್ತೆ 3 ಸಾವಿರಕ್ಕೆ ಏರಿಕೆ, ಧಾರ್ಮಿಕ ಅಲ್ಪಸಂಖ್ಯಾಕರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಪ್ರತೀ ವರ್ಷ ಶೇ. 5ರಷ್ಟು ಅನುದಾನ, ಮದ್ರಸಾಗಳಲ್ಲಿ ಆಧುನಿಕ ಶಿಕ್ಷಣ ನೀಡುವುದಾಗಿ ಘೋಷಿಸಲಾಗಿದೆ.

ನ್ಯಾ| ಸದಾಶಿವ ವರದಿ ಜಾರಿ
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಗೊಂದಲ ನಿವಾರಿಸಿ ನ್ಯಾ| ಸದಾಶಿವ ಆಯೋಗದ ವರದಿ ಯಥಾವತ್‌ ಜಾರಿ, ವಸತಿ ಯೋಜನೆಗಳಲ್ಲಿ ಪ. ಜಾತಿ ಮತ್ತು ಪಂಗಡದವರಿಗೆ ಶೇ. 50 ರಿಯಾಯಿತಿ, ಎಸ್‌ಸಿ-ಎಸ್‌ಟಿ ಉದ್ಯಮಿಗಳಿಗೆ ಶೇ.2 ಬಡ್ಡಿ ದರದಲ್ಲಿ 5 ಕೋಟಿ ರೂ.ವರೆಗೆ ಸಾಲ ನೀಡಲಾಗುವುದು ಎಂದು ಘೋಷಿಸಲಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ ಪರಾಮರ್ಶೆ ನಡೆಸಿ ಸೂಕ್ತ ಬದಲಾವಣೆಗಳೊಂದಿಗೆ ಹೊಸ ಪಿಂಚಣಿ ಯೋಜನೆ ತರಲಾಗುವುದು. ಗೊಲ್ಲರ ಹಟ್ಟಿ ಮತ್ತು ಗ್ರಾಮಗಳಲ್ಲಿ ಸ್ವರ್ಣ ಕುಟೀರ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.

Advertisement

ಪಂಚರತ್ನ ಕಾರ್ಯಕ್ರಮ
ಪಂಚರತ್ನ ಕಾರ್ಯಕ್ರಮದಡಿ ರಾಜ್ಯದ 6,006 ಗ್ರಾ.ಪಂ.ಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಪಂಚಾಯಿತ್‌ಗೆ ಒಂದರಂತೆ ಹೈಟೆಕ್‌ ಸರಕಾರಿ ಶಾಲೆ, 30 ಹಾಸಿಗೆಗಳ ಹೈಟೆಕ್‌ ಆಸ್ಪತ್ರೆ, ಕೃಷಿ ಪಂಪ್‌ಸೆಟ್‌ಗಳಿಗೆ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್‌, 172 ತಾಲೂಕುಗಳಲ್ಲಿ ಪ್ರತೀ ಗ್ರಾ.ಪಂ. ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪನೆ, ವಸತಿ ಯೋಜನೆಗಳಡಿ ಬಡ ಕುಟುಂಬಗಳಿಗೆ ನೀಡುವ ಸಹಾಯಧನ ಐದು ಲಕ್ಷ ರೂ.ಗೆ ಏರಿಕೆ ಮತ್ತಿತರ ಭರವಸೆಗಳನ್ನು ಘೋಷಿಸಲಾಗಿದೆ.

ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್‌, ಕಾರ್ಯಾಧ್ಯಕ್ಷ ಅಲ್ಕೋಡ್‌ ಹನುಮಂತಪ್ಪ, ನಗರ ಅಧ್ಯಕ್ಷ ರಮೇಶ್‌ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next