Advertisement

40 ಅಲ್ಲ 65 ಪರ್ಸೆಂಟ್‌ ಸರ್ಕಾರ: ಎಚ್‌.ಡಿ. ಕುಮಾರಸ್ವಾಮಿ 

02:42 PM May 01, 2022 | Team Udayavani |

ಕುಣಿಗಲ್‌: ರಾಜ್ಯದಲ್ಲಿ ಇರುವುದು 40 ಪರ್ಸೆಂಟ್‌ ಸರ್ಕಾರವಲ್ಲ. 65 ಪರ್ಸೆಂಟ್‌ ಸರ್ಕಾರವಾಗಿದೆ. ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ವಿಧಾನಸೌಧದಿಂದ ಕೆಳ ಹಂತದವರೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.  ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಕುಣಿಗಲ್‌ ಪಟ್ಟಣದ ಜಿಕೆಬಿಎಂಎಸ್‌ ಶಾಲಾ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ 70 ವರ್ಷ ಆಳಿದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಅನುಭವದ ಮಾರ್ಗದರ್ಶನದಲ್ಲಿ ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ರೈತರ ಬದುಕನ್ನು ಹಸನು ಮಾಡಬೇಕೆಂದು ಪಣತೊಟ್ಟಿದ್ದೇನೆ ಎಂದು ತಿಳಿಸಿದರು.

ದೇವೇಗೌಡರದ್ದು ಬದ್ಧತೆಯ ಹೋರಾಟ: 1962ದಿಂದ 2022ರ ವರೆಗೂ ದೇವೇಗೌಡರು ನಿರಂತರವಾಗಿ ನೀರಾವರಿ ಯೋಜನೆಗಳಿಗಾಗಿಯೇ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈಗಲೂ 90ನೇ ಇಳಿ ವಯಸ್ಸಿನಲ್ಲಿಯೂ ಆದೇ ಬದ್ಧತೆಯನ್ನು ಇಟ್ಟುಕೊಂಡು ಹೋರಾಟ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳು ಏನಾದರೂ ಜಾರಿಯಾಗಿವೆ ಅಂದರೆ ಅದು ದೇವೇಗೌಡ ಅವರ ಕೊಡುಗೆಯಾಗಿವೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಗೂ ಹೇಮಾವತಿ ನೀರು ಹರಿದು ಬರಲು ದೇವೇಗೌಡರೇ ಕಾರಣ. ಅವರು ಹೋರಾಟ ಮಾಡದಿದ್ದರೇ ಹೇಮಾವತಿ ಜಲಾಶಯ ನಿರ್ಮಾಣವೇ ಆಗುತ್ತಿರಲಿಲ್ಲ ಎಂದರು.

Advertisement

ದಾಖಲೆ ಇದ್ದರೇ ಆರೋಪ ಮಾಡಬೇಕು: ಕಾಂಗ್ರೆಸ್‌ ಮುಖಂಡ ದಿನೇಶ್‌ ಗುಂಡೂರಾವ್‌ ಅವರು ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಗೃಹ ಸಚಿವರ ಪಾತ್ರ ಇದೆ ಎಂದು ಆರೋಪ ಮಾಡಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಆರೋಪ ಮಾಡಬೇಕು. ಇಲ್ಲಿ ಭ್ರಷ್ಟಚಾರ ನಡೆದಿರುವುದು ಸತ್ಯ. ಅಧಿಕಾರಿಗಳಿಂದ ಮೇಲಿನವರೆಗ ಹಣ ಸಂದಾಯವಾಗಿದೆಯಾ, ಹಗರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ಯಿಂದ ಬಯಲಾಗಬೇಕಾಗಿದೆ ಎಂದರು.

ಅದ್ದೂರಿ ಸ್ವಾಗತ: ಜನತಾ ಜಲಧಾರೆ ರಥಯಾತ್ರೆಗೆ ತಾಲೂಕಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಮಹಿಳೆಯುರು ತಾಲೂಕಿನ ವಿವಿಧ ಕೆರೆ ಹಾಗೂ ಜಲಾಶಯಗಳಿಂದ ಕಳಶದಲ್ಲಿ ನೀರು ತುಂಬಿಸಿಕೊಂಡು ಪೂರ್ಣಕುಂಭದ ಮೂಲಕ ರಥಕ್ಕೆ ಸ್ವಾಗತ ನೀಡಿದರು.

ನಿಖಿಲ್‌ ಕುಮಾರಸ್ವಾಮಿ ಅವರನ್ನು ಅದ್ದೂರಿ ಮರೆವಣಿ ಮೂಲಕ ವೇದಿಕೆಗೆ ಕರೆತರಲಾಯಿತು. ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕರಾದ ಸುಧಾಕರ್‌ ಲಾಲ್‌, ಎಂ.ಟಿ.ಕೃಷ್ಣಪ್ಪ, ಜಿಲ್ಲಾ ಜೆಡಿಎಸ್‌ ಜಿಲ್ಲಾಧ್ಯಕ್ಷ ಆಂಜನಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ ಡಿ.ನಾಗರಾಜಯ್ಯ, ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಎನ್‌.ಜಗದೀಶ್‌, ಮಾಜಿ ಅಧ್ಯಕ್ಷ ಕೆ. ಎಲ್‌.ಹರೀಶ್‌, ಮುಖಂಡರಾದ ಬಾಂಬೆ ಶಿವಣ್ಣ, ತಮ್ಮಣ್ಣ, ವರದರಾಜು, ಹರೀಶ್‌ ನಾಯ್ಕ, ತರೀಕೆರೆ ಪ್ರಕಾಶ್‌ ಮುಂತಾದವರು ಹಾಜರಿದ್ದರು.

ತಂದೆಯನ್ನು ಗೆಲ್ಲಿಸಿಕೊಂಡು ಬನ್ನಿ : ಡಿ.ನಾಗರಾಜಯ್ಯ ಅವರ ಕೊನೆಯ ಚುನಾವಣೆ ಇದಾಗಿದೆ. ತಾಲೂಕಿನಲ್ಲಿ ಜೆಡಿಎಸ್‌ ಅಧ್ಯಕ್ಷ ಜಗದೀಶ್‌ ಡಿ. ನಾಗರಾಜಯ್ಯ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ ಡಿ.ನಾಗರಾಜಯ್ಯ ಇಬ್ಬರು ಲವಕುಶ ರಂತೆ ಜನರ ಪ್ರೀತಿ ವಿಶ್ವಾಸಗಳಿಸಿ ತಂದೆ ಡಿ. ನಾಗರಾಜಯ್ಯ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಅವರನ್ನು ಮಂತ್ರಿ ಮಾಡುತ್ತೇನೆ. ನೀವಿಬ್ಬರು ಇಲ್ಲಿ ನಾನು ನಾನು ಎಂದು ಪೈಪೋಟಿಗೆ ಇಳಿಯಬೇಡಿ ಎಂದು ಡಿ.ನಾಗರಾಜಯ್ಯ ಅವರ ಇಬ್ಬರು ಪುತ್ರರಿಗೆ ಕುಮಾರಸ್ವಾಮಿ ಸಲಹೆ ನೀಡಿದರು.

ಕುಮಾರಸ್ವಾಮಿ ಧ್ವನಿ : ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಹಾಗೂ ಚಿತ್ರನಟ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ತನ್ನ ರಾಜಕೀಯ ಲಾಭಕ್ಕಾಗಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಮತ ಬ್ಯಾಂಕ್‌ಗಾಗಿ ಹಿಜಾಬ್‌ ಬಗ್ಗೆ ಕಾಂಗ್ರೆಸ್‌ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಮಾಜಿ ಮುಖ್ಯ ಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತ್ರ ವಾಸ್ತವಾಂಶದ ಬಗ್ಗೆ ಎಲ್ಲಾ ವಿಚಾರದಲ್ಲಿ ಯೂ ಧ್ವನಿ ಎತ್ತಿ ಮಾತನಾಡುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕುಮಾರಣ್ಣ ಅವರ ಕೈಬಲಪಡಿಸಿ ಎಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಚುನಾವಣೆ ಘೋಷಣೆಯಾದ ಮೇಲೆ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ. ಎರಡು ವಾರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. -ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next