Advertisement

12ಕ್ಷೇತ್ರಗಳಿಗೆ ಜೆಡಿಎಸ್‌ ಪಟ್ಟು:ಹತ್ತಕ್ಕೆ ಸೆಟ್ಲ್‌ ಆಗುವ ನಿರೀಕ್ಷೆ

01:41 AM Mar 01, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆ ಕುರಿತು ಸಮನ್ವಯ ಸಮಿತಿ ಸಭೆಯಲ್ಲೂ 12 ಕ್ಷೇತ್ರಗಳಿಗೆ ಪಟ್ಟು ಹಿಡಿಯಲು ಜೆಡಿಎಸ್‌ ನಿರ್ಧರಿಸಿದೆ.

Advertisement

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜೆಡಿಎಸ್‌
ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಸಚಿವ ಎಚ್‌.ಡಿ.ರೇವಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ನಡೆಸಿದ ಮಾತುಕತೆ ವೇಳೆ ಇಟ್ಟಿದ್ದ ಬೇಡಿಕೆಯನ್ನೇ ಸಮನ್ವಯ ಸಮಿತಿ ಸಭೆಯಲ್ಲೂ ಪ್ರಸ್ತಾಪಿಸಲು ಪಕ್ಷ ತೀರ್ಮಾನಿಸಿದೆ. ಸಮನ್ವಯ ಸಮಿತಿಯಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಅವರು 12 ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಕೇಳಲಿದ್ದಾರೆ ಎಂದು ಹೇಳಲಾಗಿದೆ.

ಹನ್ನೆರಡು ಕ್ಷೇತ್ರಕ್ಕೆ ಪಟ್ಟು ಹಿಡಿದರೆ 10 ಕ್ಷೇತ್ರಕ್ಕೆ ಒಪ್ಪಬಹುದು. ಆಗ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ತುಮಕೂರು ಅಥವಾ ಚಿತ್ರದುರ್ಗ, ಮೈಸೂರು, ವಿಜಯಪುರ, ಶಿವಮೊಗ್ಗ, ಬೀದರ್‌, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ ನಾಯಕರದು ಎಂದು ತಿಳಿದು ಬಂದಿದೆ. ಒಂದೊಮ್ಮೆ, ಸಮನ್ವಯ ಸಮಿತಿಯಲ್ಲಿ ಸೀಟು ಹಂಚಿಕೆ ಗೊಂದಲ ಇತ್ಯರ್ಥವಾಗದಿದ್ದರೆ ದೇವೇಗೌಡರು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಬಹುತೇಕ ಮಾರ್ಚ್‌ 4ರ ಸಮನ್ವಯ ಸಮಿತಿ ಸಭೆಯಲ್ಲಿಯೇ ಸೀಟು ಹಂಚಿಕೆ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆಯಿದ್ದು, ಮಾರ್ಚ್‌ 5 ಅಥವಾ 7ರಂದು ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆ ಕುರಿತು ಘೋಷಿಸುವ ನಿರೀಕ್ಷೆಯಿದೆ.

ಈ ಮಧ್ಯೆ, ಎಚ್‌.ಡಿ.ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬುದನ್ನು ಅದಕ್ಕೆ ಮುಂಚೆಯೇ ಪ್ರಕಟಿಸಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಬಿಟ್ಟು ಕೊಟ್ಟರೆ, ಬಹುತೇಕ ಬೆಂಗಳೂರು ಉತ್ತರ ಅಥವಾ ಮೈಸೂರಿನಿಂದ ಅವರು ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ.

Advertisement

ಇದಕ್ಕೆ ಪೂರಕ ಎಂಬಂತೆ ಹಾಸನ ಕ್ಷೇತ್ರದಲ್ಲಿ ಗುರುವಾರ ಹಲವು ಸಭೆಗಳಲ್ಲೂ ಪಾಲ್ಗೊಂಡು, “ನನ್ನ
ಮೇಲೆ ಪ್ರೀತಿ ತೋರಿಸಿದ, ಇಷ್ಟು ವರ್ಷ ರಾಜಕೀಯವಾಗಿ ಬೆಳೆಸಿದ ಎಲ್ಲರಿಗೂ ಕೃತಜ್ಞತೆ. ಎಲ್ಲಾ ಸಮುದಾಯದವರೂ ಪ್ರೀತಿ ತೋರಿಸಿದ್ದೀರಿ. ಇದಕ್ಕೆ ನಾನು ಋಣಿ’ ಎಂದು ಭಾಷಣ ಮಾಡಿದ್ದು, ಪರೋಕ್ಷವಾಗಿ ಹಾಸನ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ.

ಮಾ.8ರಿಂದ ಚುನಾವಣಾ ಸಿದ್ಧತಾ ಸಭೆ: ಈ ಮಧ್ಯೆ,
ಜೆಡಿಎಸ್‌, ಮಾರ್ಚ್‌ 8ರಿಂದ ಲೋಕಸಭಾ ಚುನಾವಣಾ ಸಿದ್ಧತಾ ಸಭೆಗಳನ್ನು ನಿಗದಿಪಡಿಸಿಕೊಂಡಿದೆ. ಮಾರ್ಚ್‌ 8ರಿಂದ 15ರ ವರೆಗೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್‌ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರವಾರು ಶಾಸಕರು, ಮುಖಂಡರ ಜತೆ ಸಮಾಲೋಚನಾ ಸಭೆ ನಿಗದಿಯಾಗಿದೆ.

ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂ.ಉತ್ತರ, ತುಮಕೂರು, ಚಿತ್ರದುರ್ಗ, ಮೈಸೂರು, ವಿಜಯಪುರ, ಶಿವಮೊಗ್ಗ, ಬೀದರ್‌, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಪಡೆಯುವ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next