Advertisement

ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಾಬಲ್ಯ

02:10 PM May 16, 2018 | |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 3, ಬಿಜೆಪಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್‌ ಐದು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ವಿರುದ್ಧ 36042 ಮತಗಳ ಭಾರೀ ಅಂತರದಿಂದ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ.

Advertisement

ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸುತ್ತಲೇ ಬಂದ ಜಿ.ಟಿ.ದೇವೇಗೌಡ ಅಂತಿಮವಾಗಿ 1,21,325 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ 85,283 ಮತಗಳನ್ನು ಗಳಿಸಿ ಸೋಲುಂಡರು.

ತಿ.ನರಸೀಪುರ ಕ್ಷೇತ್ರದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ(55,451 ಮತ) ವಿರುದ್ಧ 83,929 ಮತ ಪಡೆದಿರುವ ಜೆಡಿಎಸ್‌ ಅಭ್ಯರ್ಥಿ ಎಂ.ಅಶ್ವಿ‌ನ್‌ ಕುಮಾರ್‌  28,478 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ 96,435 ಮತಗಳನ್ನು ಪಡೆದು ಮೊದಲ ಪ್ರಯತ್ನದಲ್ಲೇ ನಿರಾಯಾಸವಾಗಿ ವಿಧಾನಸಭೆ ಪ್ರವೇಶಿಸಿದ್ದರೆ, ಸಾಕಷ್ಟು ಗೊಂದಲಗಳ ನಡುವೆ ಅಂತಿಮವಾಗಿ ಟಿಕೆಟ್‌ ಗಿಟ್ಟಿಸಿದ್ದ ಬಿಜೆಪಿಯ ತೋಟದಪ್ಪ ಬಸವರಾಜು 37,819 ಮತಗಳನ್ನಷ್ಟೇ ಗಳಿಸಿದ್ದು,

ಇದರಿಂದಾಗಿ ಡಾ.ಯತೀಂದ್ರ ಅವರಿಗೆ 58,616 ಮತಗಳ ಭಾರೀ ಅಂತರದ ಗೆಲುವು ಸಿಕ್ಕಿದೆ. ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ (83,092 ಮತ)ವಿರುದ್ಧ ಜೆಡಿಎಸ್‌ನ ಅಡಗೂರು ಎಚ್‌.ವಿಶ್ವನಾಥ್‌ 91,667 ಮತಗಳನ್ನು ಪಡೆದು 8,575 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Advertisement

ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ವೆಂಕಟೇಶ್‌ (70,270 ಮತ) ವಿರುದ್ಧ ಜೆಡಿಎಸ್‌ನ ಕೆ.ಮಹದೇವ್‌ 77,770 ಮತಗಳನ್ನು ಪಡೆದು 7,493 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಳಲೆ ಎನ್‌.ಕೇಶವಮೂರ್ತಿ (65,551 ಮತ) ವಿರುದ್ಧ ಬಿಜೆಪಿಯ ಬಿ.ಹರ್ಷವರ್ಧನ್‌ 78,030 ಮತಗಳನ್ನು ಪಡೆದು 12,479 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನಿಲ್‌ ಚಿಕ್ಕಮಾದು 76652 ಮತಗಳನ್ನು ಪಡೆದು, ಜೆಡಿಎಸ್‌ ಅಭ್ಯರ್ಥಿ ಬೀಚನಹಳ್ಳಿ ಚಿಕ್ಕಣ್ಣ (54,559 ಮತ) ವಿರುದ್ಧ 22,093 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ಎ.ರಾಮದಾಸ್‌ (78,573 ಮತ), 52,226 ಮತಗಳನ್ನು ಪಡೆದ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್‌ ವಿರುದ್ಧ 26,347 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ನರಸಿಂಹರಾಜ ಕ್ಷೇತ್ರದಲ್ಲಿ ಸಚಿವ ತನ್ವೀರ್‌ 62268 ಮತಗಳನ್ನು ಪಡೆದು, ಬಿಜೆಪಿಯ ಸಂದೇಶ್‌ ಸ್ವಾಮಿ (44,141 ಮತ) ವಿರುದ್ಧ 18,127 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ನ ಬಂಡಾಯದ ಲಾಭ ಪಡೆದ ಬಿಜೆಪಿಯ ಎಲ್‌.ನಾಗೇಂದ್ರ 51,683 ಮತಗಳಿಸಿ 14,936 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನ ವಾಸು 36,747 ಮತಗಳಿಸಿ ಸೋಲನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next