Advertisement
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯಾದ ಮಂಡ್ಯ, ಹಾಸನ ಸೇರಿ ಹಳೆ ಮೈಸೂರು ಭಾಗದಲ್ಲಿ ಸಹಜವಾಗಿ ಮುನ್ನಡೆ ಕಾಯ್ದುಕೊಂಡಿದೆ. ಇದೇ ವೇಳೆ ಉತ್ತರ ಕರ್ನಾಟಕ ಭಾಗದಲ್ಲಿ ಗಣನೀಯ ಸಾಧನೆ ಮಾಡಿದೆ. ಜೆಡಿಎಸ್ ಗೆದ್ದಿರುವ 375 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಉತ್ತರ ಕರ್ನಾಟಕದಲ್ಲಿ ಗೆದ್ದಿದೆ. ಜೆಡಿಎಸ್ ಪಡೆದಿರುವ ಒಟ್ಟು 5.04 ಲಕ್ಷ ಮತಗಳಲ್ಲಿ ಉತ್ತರ ಕರ್ನಾಟಕದಲ್ಲಿ 1.44 ಲಕ್ಷ ಮತಗಳನ್ನು ಗಳಿಸಿದೆ.
Related Articles
ಒಟ್ಟು 48.43 ಲಕ್ಷ ಮತದಾರರ ಪೈಕಿ 30.50 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ. 63.80ರಷ್ಟು ಮತದಾನವಾಗಿದೆ. ಚಲಾವಣೆಯಾದ ಒಟ್ಟು ಮತಗಳಲ್ಲಿ 10.23 ಲಕ್ಷ ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೆ, ಬಿಜೆಪಿ 9.48 ಲಕ್ಷ ಮತ್ತು ಜೆಡಿಎಸ್ 5.04 ಲಕ್ಷ ಮತಗಳನ್ನು ಪಡೆದುಕೊಂಡಿವೆ. ಶೇ.15.09ರಂತೆ ಪಕ್ಷೇತರರು 4.60ಲಕ್ಷ ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಎಸ್‌ಡಿಪಿಐ 29 ಸಾವಿರ, ಬಿಎಸ್‌ಪಿ 26 ಸಾವಿರ, ಕೆಪಿಜೆಪಿ 16 ಸಾವಿರ, ಸಮಾಜವಾದಿ ಪಕ್ಷ 5,276, ಎಡಪಕ್ಷಗಳು ನಾಲ್ಕು ಸಾವಿರ ಮತಗಳನ್ನು ಗಳಿಸಿವೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ 1.38 ಲಕ್ಷ ಮತಗಳನ್ನು ಪಡೆದಿದೆ. ಮಹಾನಗರ ಪಾಲಿಕೆ ಸೇರಿ ಚುನಾವಣೆ ನಡೆದ 4 ಸ್ಥಳೀಯ ಸಂಸ್ಥೆಗಳ 134 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. 27 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 1.08 ಲಕ್ಷ ಮತಗಳನ್ನು ಗಳಿಸಿದೆ. 43 ಸ್ಥಾನಗಳನ್ನು ಪಡೆದಿರುವ ಜೆಡಿಎಸ್ 1.03 ಲಕ್ಷ ಮತಗಳನ್ನು ಗಳಿಸಿದೆ.
26 ಸಾವಿರ “ನೋಟಾ’ಚುನಾವಣೆ ನಡೆದ 22 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳ 2,662 ವಾರ್ಡ್‌ಗಳಲ್ಲಿ ಒಟ್ಟು 26,896 ಮಂದಿ “ನೋಟಾ’ ಚಲಾಯಿಸಿದ್ದಾರೆ. ಇದು ಒಟ್ಟು ಮತದಾನದ ಶೇ.0.88ರಷ್ಟಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು 5,242 ಮಂದಿ ನೋಟಾ ಚಲಾಯಿಸಿದ್ದು, ಮೈಸೂರಿನಲ್ಲಿ 3,155, ಬೆಳಗಾವಿಯಲ್ಲಿ 2,453 ನೋಟಾ ಚಲಾವಣೆಯಾಗಿದೆ. ಈ ಜಿಲ್ಲೆಗಳಲ್ಲಿ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ವಾರ್ಡ್‌ಗಳಲ್ಲಿ ಚುನಾವಣೆ ನಡೆದಿತ್ತು. ಹಾಗಾಗಿ ಸಹಜವಾಗಿ ನೋಟಾ ಸಹ ಹೆಚ್ಚಾಗಿದೆ.