ನಾಲತವಾಡ:‘ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ ಎಂದು ಜೆಡಿಎಸ್ ನೂತನ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ನುಡಿದರು.
ಇತ್ತೀಚೆಗೆ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಜಿ ಸಚಿವ ಪಟ್ಟಣದ ವಿಮಲಾಬಾಯಿ ದೇಶಮುಖರ ಹಾಗೂ ಜೆ.ಎಸ್.ದೇಶಮುಖರ ಮೂರ್ತಿಗೆ ಮಾಲಾರ್ಪಣಿ ಮಾಡಿ ಮಾತನಾಡಿದ ಅವರು,2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ.
ಚುನಾವಣೆ ಎಂದರೆ ಸೋಲು-ಗೆಲುವು ಸಹಜ. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು,ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸೋಲುಗಳಿಗೆ ಜೆಡಿಎಸ್ ಎಂದೂ ಧೃತಿಗೆಡುವುದಿಲ್ಲ.
ಜನರೇ ನೇರವಾಗಿ ಹಕ್ಕು ಚಲಾಯಿಸುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಪುಟಿದೆದ್ದು ಬರಲಿದೆ. ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು.ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ತಿಳಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯರಾದ ತಿರುಪತಿ ಕ್ಷತ್ರಿ,ಅಮರಪ್ಪ ಶೀರಿ,ಬಸವರಾಜ ಗಂಗನಗೌಡರ ಗಡ್ಡಿ,ರಮೇಶ ಆಲಕೊಪ್ಪರ ಇವರನ್ನು ಸನ್ಮಾನಿಸಲಾಯಿತು.ಗುರು ದೇಶಮುಖ,ಶಂಕರಾವ್ ದೇಶಮುಖ,ಆಬಾಸಾಹೇಬ ದೇಶಮುಖ,ಎ.ಜಿ.ಗಂಗನಗೌಡ್ರ,ಸಂಗಣ್ಣ ಡಂಬಳ,ಪ್ರಭು ಪಾಟೀಲ ಇದ್ದರು.