ಸುಳ್ಯ: ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದಿರುವುದು ಹಾಗೂ ಕಾಂಗ್ರೆಸ್ ಮುಖಂಡರನ್ನು ಟೀಕಿಸುತ್ತಿರುವುದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಪುನರಾಯ್ಕೆಯಾಗಬೇಕು ಎನ್ನುವ ಪೂಜಾರಿ, ಮತ್ತೂಂದೆಡೆ ದ.ಕ. ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೇಟ್ ಆಕಾಂಕ್ಷಿ ಅನ್ನುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದ ನಾಯಕರನ್ನು ಟೀಕಿಸುತ್ತಾರೆ. ಕೆಲವರಿಗೆ ಟಿಕೆಟ್ ಕೊಡಬೇಡಿ ಅನ್ನುತ್ತಾರೆ. ಚುನಾವಣೆ ಹೊಸ್ತಿಲಿನಲ್ಲಿ ಇಂತಹ ಹೇಳಿಕೆ ನೀಡಲು ಇವರು ಯಾರು ಎಂದು ಮಹಮ್ಮದ್ ಕುಂಞಿ ಪ್ರಶ್ನಿಸಿದರು.
ಮೂರು ನಾಲ್ಕು ಚುನಾವಣೆಗಳಲ್ಲಿ ಪೂಜಾರಿ ಸೋತಿದ್ದಾರೆ. ಅವರದ್ದೇ ಸಮಾಜ ಹಾಗೂ ಅಲ್ಪಸಂಖ್ಯಾಕ ಸಮುದಾಯವು ಅವರನ್ನು ತಿರಸ್ಕರಿಸಿದೆ. ಹಾಗಾಗಿ ಅವರ ವ್ಯಕ್ತಿಯ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿರಬಾರದು. ಜೆಡಿಎಸ್ ಕಾಂಗ್ರೆಸ್‌ನ ಮೈತ್ರಿ ಪಕ್ಷವಾಗಿರುವ ಕಾರಣ ಅದರ ರಾಜ್ಯ ನಾಯಕರಿಗೆ ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ತಾಲೂಕು ಘಟಕದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಉಪಸ್ಥಿತರಿದ್ದರು.
ಟಿಕೆಟ್ ಕೊಟ್ಟರೆ ಬೆಂಬಲ
ಪೂಜಾರಿ ಅವರಿಗೆ ಟಿಕೆಟ್ ಕೊಟ್ಟರೆ ಜೆಡಿಎಸ್ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ವಿರುದ್ಧವೇ ಮಾತನಾಡು ತ್ತಿರುವ, ಮೋದಿ ಪ್ರಧಾನಿ ಆಗಬೇಕು ಎನ್ನುವ ಪೂಜಾರಿ ಅವರಿಗೆ ಟಿಕೆಟ್ ಸಿಗಲು ಸಾಧ್ಯವೆ ಎಂದರು. ಒಂದು ವೇಳೆ ಕಾಂಗ್ರೆಸ್ ಪಕ್ಷ ಪೂಜಾರಿ ಅವರಿಗೆ ಟಿಕೆಟ್ ಕೊಟ್ಟರೆ ಆಕ್ಷೇಪ ಮಾಡುವುದಿಲ್ಲ. ಬೆಂಬಲ ನೀಡುತ್ತೇವೆ. ಇದು ಮೈತ್ರಿ ಪಕ್ಷದ ಧರ್ಮ ಎಂದರು.