Advertisement

ಸಿಂದಗಿ ಉಪ ಕದನಕ್ಕೆ ಜೆಡಿಎಸ್‌ ಸ್ಪರ್ಧೆ ಅನುಮಾನ

05:42 PM Feb 11, 2021 | Team Udayavani |

ವಿಜಯಪುರ: ಆಡಳಿತ ಪಕ್ಷದೊಂದಿಗೆ ಸ್ಪರ್ಧಿಸಿ ಗೆಲ್ಲುವಷ್ಟು ಆರ್ಥಿಕ ಶಕ್ತಿ ನಮ್ಮ ಪಕ್ಷಕ್ಕಿಲ್ಲ. ರಾಜ್ಯದ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಹೇಳಿಕೆ ಉಪ ಚುನಾವಣೆ ಎದುರಾಗಿರುವ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರಲ್ಲಿ ದುಗುಡ ಹಾಗೂ ಸಂಚಲನ ಸೃಷ್ಟಿಸಿದೆ.

Advertisement

ಮಾಜಿ ಸಚಿವರಾಗಿದ್ದ ಸಿಂದಗಿ ವಿಧಾನಸಭೆ ಕ್ಷೇತ್ರ ಪ್ರತಿನಿ ಧಿಸುತ್ತಿದ್ದ ಎಂ.ಸಿ. ಮನಗೂಳಿ ಜ.28 ರಂದು ನಿಧನರಾದ ಬಳಿಕ ಸದರಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಇದಲ್ಲದೇ ಜೆಡಿಎಸ್‌ ಪಕ್ಷದ ಬಲಿಷ್ಠ ಶಕ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಉಪ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಹಾಕಲು ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ.

ಇದರ ಹೊರತಾಗಿಯೂ ಪಕ್ಷದ ವರಿಷ್ಠರ ಹೇಳಿಕೆಗಳು ಗೊಂದಲ ಸೃಷ್ಟಿಸುತ್ತಿವೆ. ಬೆಳಗಾವಿ ಲೋಕಸಭೆ, ರಾಜ್ಯದ ವಿಧಾನಸಭೆಯ ಬೀದರ ಜಿಲ್ಲೆಯ ಬಸವಕಲ್ಯಾಣ, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಆದರೆ ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಿ ಗೆಲ್ಲುವಷ್ಟು ಆರ್ಥಿಕ ಶಕ್ತಿ ನಮ್ಮ ಪಕ್ಷಕ್ಕಿಲ್ಲ. ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಹಣ ಸುರಿದು ಚುನಾವಣೆ ಎದುರಿಸುವ ಶಕ್ತಿ ಇಲ್ಲದ ಕಾರಣಕ್ಕೆ ಜೆಡಿಎಸ್‌ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದೇ ವಿಷಯವಾಗಿ ಬುಧವಾರ ರಾಯಚೂರಿನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಉಪ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿಲ್ಲ ಎಂದಿದ್ದಾರೆ. ಅಭ್ಯರ್ಥಿ ಹಾಕುವ ವಿಷಯದಲ್ಲಿ ಸಿಂದಗಿ ಕ್ಷೇತ್ರವನ್ನು ನಿರ್ದಿಷ್ಟವಾಗಿ ಉಲ್ಲೇಖೀಸದಿದ್ದರೂ ಇದು ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ಕುಟುಂಬದಲ್ಲಿ ಒಬ್ಬರಿಗೆ ಟಿಕೆಟ್‌ ನೀಡಲು ಚರ್ಚೆ ನಡೆದಿದೆ. ಪಕ್ಷದ ನಾಯಕರ ಸಭೆ ಬಳಿಕ ನಡೆದ ಬೆಳಗಾವಿ ವಿಭಾಗದ ಮುಖಂಡರ ಪ್ರತ್ಯೇಕ ಸಭೆಯಲ್ಲಿ ಸಿಂದಗಿ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಹಾಕುವ ಕುರಿತು ಚರ್ಚೆ ಆಗಿದೆ. ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ಕುಟುಂಬ ಸದಸ್ಯರು ಒಮ್ಮತದಿಂದ ಸೂಚಿಸುವ ಅವರದೇ ಕುಟುಂಬದ ಒಬ್ಬರಿಗೆ ಟಿಕೆಟ್‌ ನೀಡಲು ಚರ್ಚೆ ಆಗಿದೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ.

Advertisement

ಟಿಕೆಟ್‌ಗಾಗಿ ಮಕ್ಕಳ ಕಿತ್ತಾಟ: ಜೆಡಿಎಸ್‌ ಪಕ್ಷವನ್ನು ಪ್ರತಿನಿಧಿಸಿದ್ದ ದಿವಂಗತ ಶಾಸಕ ಎಂ.ಸಿ.ಮನಗೂಳಿ ಅವರ ಕುಟುಂಬದಲ್ಲೇ ಒಬ್ಬರನ್ನು ಕಣಕ್ಕೆ ಇಳಿಸಲಾಗುತ್ತದೆ. ಅನುಕಂಪದ ಅಲೆಯ ಲಾಭ ಪಡೆಯಲು ಸುಲಭ ಅವಕಾಶವಿದ್ದರೂ ಮನಗೂಳಿ ಅವರ ಮಕ್ಕಳಲ್ಲೇ ಟಿಕೆಟ್‌ ಗೆ ಪೈಪೋಟಿ ಇರುವುದು ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಎಂ.ಸಿ.ಮನಗೂಳಿ ಅವರ ನಾಲ್ವರು ಪುತ್ರರಲ್ಲಿ ಸಕ್ರಿಯ ರಾಜಕೀಯದಲ್ಲಿರುವ ಅಶೋಕ ಹಾಗೂ ಸಿಂದಗಿ ಪುರಸಭೆ ಹಾಲಿ ಅಧ್ಯಕ್ಷರಾಗಿರುವ ಶಾಂತವೀರ ಮಧ್ಯೆ ಟಿಕೆಟ್‌ಗೆ ಪೈಪೋಟಿ ಇದೆ. ಹೀಗಾಗಿ ಮನಗೂಳಿ ಅವರ ಕುಟುಂಬದ ಎಲ್ಲ ಸದಸ್ಯರ ಒಮ್ಮತದ ನಿರ್ಧಾರದಂತೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಲು ಪಕ್ಷದಲ್ಲಿ ಚರ್ಚೆ ನಡೆದಿದೆ.

ಪಕ್ಷದ ಸಭೆಯಲ್ಲಿ ಅಭ್ಯರ್ಥಿ ಹಾಕುವ ಕುರಿತು ಚರ್ಚೆ ನಡೆಸಿದ್ದರೂ ಪಕ್ಷದ ವರಿಷ್ಠ ದೇವೇಗೌಡರೇ ಬಹಿರಂಗಾಗಿ ಮಾಧ್ಯಮಗಳಲ್ಲಿ ರಾಜ್ಯದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದಿರುವುದು ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ದುಗುಡ ತಂದಿಟ್ಟಿದೆ.

ಸಿಂದಗಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಿಷ್ಠವಾಗಿದ್ದು, ಉಪ ಚುನಾವಣೆಯಲ್ಲಿ ಎಂ.ಸಿ.ಮನಗೂಳಿ ಕುಟುಂಬದಲ್ಲೇ ಒಬ್ಬರಿಗೆ ಟಿಕೆಟ್‌ ನೀಡುವ ಕುರಿತು ಪಕ್ಷದ ಸಭೆಯಲ್ಲಿ ಚರ್ಚೆ ಆಗಿದೆ. ಇದರ ಹೊರತಾಗಿಯೂ ಪಕ್ಷದ ವರಿಷ್ಠರು ಆರ್ಥಿಕ ಶಕ್ತಿ ಇಲ್ಲದ ಕಾರಣಕ್ಕೆ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದಿದ್ದಾರೆ. ಆದರೆ, ಅದು ಜಿಲ್ಲೆಗೆ ಅನ್ವಯಿಸುವುದಿಲ್ಲ. ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್‌ ಸಂಘಟನಾ ಶಕ್ತಿ ಬಲಿಷ್ಠವಾಗಿದ್ದು, ಪಕ್ಷದ ಸ್ಪರ್ಧೆ ಖಚಿತ.
ಮಲ್ಲಿಕಾರ್ಜುನ ಯಂಡಿಗೇರಿ, ಜಿಲ್ಲಾಧ್ಯಕ್ಷ,
ಜೆಡಿಎಸ್‌, ವಿಜಯಪುರ

*ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next