ಬೆಂಗಳೂರು: ಬಿಜೆಪಿ ಸಂಪರ್ಕದಲ್ಲಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಜೆಡಿಎಸ್‌ನಲ್ಲಿ ಚಿಂತನೆ ನಡೆದಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಪಕ್ಷದ ಆದೇಶ ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವರಿಗೆ ಮತ ಹಾಕಿ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಲ್ಲದೆ, ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕರನ್ನೂ ಭೇಟಿ ಮಾಡಿರುವುದು ಪಕ್ಷದ ನಾಯಕರ ಗಮನಕ್ಕೆ ಬಂದಿದೆ.
ಹೀಗಾಗಿ ಜಿ.ಟಿ.ದೇವೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಬಗ್ಗೆಯೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಆದರೆ ಜಿ.ಟಿ.ದೇವೇಗೌಡರು ನಾನು ಎಲ್ಲೂ ಜೆಡಿಎಸ್ ಬಿಡುತ್ತೇನೆ ಎಂದು ಹೇಳಿಲ್ಲ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಅಥವಾ ಸಚಿವರನ್ನು ಸಂಪರ್ಕಿಸುವುದು ತಪ್ಪಾ? ನಾನು ಜೆಡಿಎಸ್‌ನಲ್ಲೇ ಇದ್ದೇನೆ.
ಪರಿಷತ್ ಚುನಾವಣೆಯಲ್ಲಿ ನನಗೆ ಯಾವುದೇ ಆದೇಶ ಕೊಟ್ಟಿರಲಿಲ್ಲ, ನಮ್ಮ ಅಭ್ಯರ್ಥಿಯೂ ಕಣದಲ್ಲಿ ಇರಲಿಲ್ಲ. ಹೀಗಾಗಿ ಆತ್ಮಸಾಕ್ಷಿಗೆ ಆನುಗುಣವಾಗಿ ಲಕ್ಷ್ಮಣ ಸವದಿಗೆ ಮತ ಹಾಕಿದ್ದೇನೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಮಧ್ಯೆ ಉಪ ಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ಬಿಜೆಪಿ ಸೇರುವ ಬಗ್ಗೆ ತೀರ್ಮಾನ ಕೈಗೊಳ್ಳಲು ಜಿ.ಟಿ.ದೇವೇಗೌಡರು ಸಮರ್ಥರಿದ್ದಾರೆ. ಜೆಡಿಎಸ್‌ನವರಷ್ಟೇ ಅಲ್ಲ ಕಾಂಗ್ರೆಸ್‌ನವರು ಬಿಜೆಪಿ ಸೇರಬಹುದು. ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗಲಿದೆ ಎಂದು ಹೇಳಿದ್ದಾರೆ.