Advertisement

ಕ್ಷೇತ್ರದಲ್ಲಿ ಜೆಡಿಎಸ್‌ ಪರ ಒಲವು: ಬಚ್ಚೇಗೌಡ

04:10 PM Apr 10, 2023 | Team Udayavani |

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಭಯದ ವಾತಾವರಣ ಹಾಗೂ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಜೆಡಿಎಸ್‌ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ಬಳಿಕ ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದು, ಜೆಡಿಎಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.

Advertisement

ನಗರದ ಹೊರ ವಲಯದ ಮಂಚನಬಲೆಯಲ್ಲಿ ತಮ್ಮ ನೇತೃತ್ವದಲ್ಲಿ ಕ್ಷೇತ್ರಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ 63ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನ ಬೇಸತ್ತಿದ್ದು, ಜೆಡಿಎಸ್‌ ಪರವಾದ ಅಲೆ ಇದೆ ಎಂದರು.

ಜೆಡಿಎಸ್‌ ಪರ ಅಲೆ: ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಕೂಡ ಜೆಡಿಎಸ್‌ ಪರವಾದ ಅಲೆಯಿದ್ದು, ಕಾಂಗ್ರೆಸ್‌, ಬಿಜೆಪಿಯನ್ನು ಸೋಲಿಸುವ ಮೂಲಕ ಕ್ಷೇತ್ರದ ಜನತೆ ನನಗೆ ಅಶೀರ್ವಾದ ಮಾಡಲಿದ್ದಾರೆಂದರು.

ಸುಧಾಕರ್‌ಗೆ ತಕ್ಕ ಪಾಠ: ಎಚ್‌.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ, ಸಮ್ಮಿಶ್ರ ಸರ್ಕಾರದಲ್ಲಿ ರೈತಪರವಾದ ಆಡಳಿತ ನೀಡಿ 24 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಕ್ಷೇತ್ರದಲ್ಲಿ ಜನರ ಸ್ಪಂದನೆ ಉತ್ತಮವಾಗಿದ್ದು, ದೌರ್ಜನ್ಯ, ದಬ್ಟಾಳಿಕೆಗೆ ರೋಸಿ ಹೋಗಿರುವ ಜನತೆ ಸಚಿವ ಸುಧಾಕರ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ನಿವೇಶನ ನೀಡಿಲ್ಲ: ಸತತ 10 ವರ್ಷಗಳಿಂದ ಜನರಿಗೆ ಒಂದು ಸೈಟ್‌ ನೀಡದ ಸುಧಾಕರ್‌ ಚುನಾವಣೆ ಸಮೀಸುತ್ತಿದ್ದಂತೆ ಕುಕ್ಕರ್‌, ಸ್ಟೌವ್‌, ಸೀರೆ, ಪಂಚೆ ಹಂಚಿ ಜನರನ್ನು ಮರಳು ಮಾಡಲು ಹೊರಟಿದ್ದು, ಕ್ಷೇತ್ರದ ಜನತೆ ಪ್ರಜ್ಞಾವಂತರಾಗಿದ್ದು, ಈ ಬಾರಿ ಎಚ್ಚರ ತಪ್ಪುವುದಿಲ್ಲ ಎಂದರು.

Advertisement

ನಿವೇಶನಗಳನ್ನು ವಿಂಗಡಿಸದೆ, ಬಡಾವಣೆ ನಿರ್ಮಿಸದೇ ನಿವೇಶನ ಹಂಚಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಭಯದ ವಾತಾವರಣ ಇದ್ದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕಾಂಗ್ರೆಸ್‌ ಕೂಡ ಇದುವರೆಗೂ ತನ್ನ ಅಭ್ಯರ್ಥಿ ಪ್ರಕಟಿಸಿಲ್ಲ. ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಜೆಡಿಎಸ್‌ ಬೆಂಬಲಿಸುವ ವಿಶ್ವಾಸ ಇದೆ. ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ. ಮುನೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್‌.ರೆಡ್ಡಿ, ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್‌, ಯುವ ಮುಖಂಡರಾದ ಅಂಗರೇಖನಹಳ್ಳಿ ರವಿಕುಮಾರ್‌, ಮಂಚನಬಲೆ ಮಧು, ಶಿಲ್ಪಗೌಡ, ಕವಿತಾರೆಡ್ಡಿ, ವೆಂಕಟೇಶ್‌, ಸ್ವರೂಪ್‌ , ಬಾಲಣ್ಣ ಸೇರಿದಂತೆ ಮತ್ತಿತರರು ಇದ್ದರು.

ಕೆಳಹಂತದಿಂದ ಸಕ್ರಿಯ ರಾಜಕಾರಣಕ್ಕೆ : ನನ್ನದು ಮೃದು ವ್ಯಕ್ತಿತ್ವ, ಅದೇ ದೌರ್ಬಲ್ಯವಲ್ಲ. ನಾನು ಹಾಯ್‌ ಬೈ ಹೇಳುವ ರಾಜಕಾರಣಿ ಅಲ್ಲ. ಕ್ಷೇತ್ರದಲ್ಲಿ ಸಾಮಾನ್ಯ ಜನರೊಂದಿಗೆ ಹಾಗೂ ಎಲ್ಲ ವರ್ಗದವರೊಂದಿಗೆ ಬೆರೆಯುವ ರಾಜಕಾರಣಿ ಆಗಿದ್ದೇನೆ. ಆದರೆ ಸುಧಾಕರ್‌ ಮಾರಾಟವಾಗಿ ಮಂತ್ರಿ ಆಗಿದ್ದಾರೆ. ನಾನು ಕೆಳಹಂತದಿಂದ ಸಕ್ರಿಯ ರಾಜಕಾರಣಕ್ಕೆ ಬಂದವನು. ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಸುಧಾಕರ್‌ ಅಭಿವೃದ್ಧಿ ಆಗಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಆದರೆ ನನಗೆ ಅಭಿವೃದ್ಧಿಯೇ ಮುಖ್ಯ ಎಂದ ಮಾಜಿ ಶಾಸಕರು ಆಗಿರುವ ಜೆಡಿಎಸ್‌ ಅಭ್ಯರ್ಥಿ ಬಚ್ಚೇಗೌಡ, ನಾನು ಹುಟ್ಟುತ್ತಾ ರಾಜಕಾರಣಿ, ಸುಧಾಕರ್‌ ರೀತಿ ವ್ಯಾಪಾರಿ ಅಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next