Advertisement

ಅಖಾಡಕ್ಕಿಳಿದ “ದಳಪತಿ’ಗಳು

06:00 AM Feb 18, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರಮೋದಿಯವರು ಪಾಲ್ಗೊಂಡಿದ್ದ ಬಿಜೆಪಿ ಪರಿವರ್ತನಾ ರ್ಯಾಲಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಭಾಗವಹಿಸಿದ್ದ‌ ಜನಾಶೀರ್ವಾದ ಯಾತ್ರೆಯ ಬೆನ್ನಲ್ಲೇ ಜೆಡಿಎಸ್‌ ವಿಕಾಸ ಪರ್ವ ಸಮಾವೇಶದ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ.

Advertisement

ನಗರದ ಹೊರವಲಯದ ಯಲಹಂಕ ಸಮೀಪ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಬೃಹತ್‌ 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಮುಂಚೆಯೇ “ದಳಪತಿ’ಗಳನ್ನು ಅಖಾಡಕ್ಕೆ ಇಳಿಸಿದೆ.

ಸಮಾವೇಶದಲ್ಲಿ ಬೃಹತ್‌ ಜನಸ್ತೋಮ ಕಂಡು ಸಂತಸಗೊಂಡ ಮಾಜಿ ಪ್ರಧಾನಿ  ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ, ಚುನಾವಣೆ ಮುಗಿಯುವವರೆಗೂ ಯಾರೂ ವಿಶ್ರಮಿಸಬೇಡಿ. ಇಲ್ಲಿಗೆ ಬಂದಿರುವ ಒಬ್ಬೊಬ್ಬರೂ ಕುಮಾರಸ್ವಾಮಿಯಾಗಿ ಕೆಲಸ ಮಾಡಿ ಎಂದು ಹುಮ್ಮಸ್ಸು ತುಂಬಿದರು.

ಸಮಾವೇಶ‌ಲ್ಲಿ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಪಾಲ್ಗೊಂಡಿದ್ದು ವಿಶೇಷ. ರಾಜ್ಯದಲ್ಲಿ ಜೆಡಿಎಸ್‌-ಬಿಎಸ್‌ಪಿ ಜತೆಗೂಡಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದರು.

ಕಾಲ ಬಂದಿದೆ
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ,  ಈ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಎಂದು ಜನರೇ ತೀರ್ಮಾನ ಮಾಡುವ ಕಾಲ ಬಂದಿದ್ದು, ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ತೀರುತ್ತದೆ ಎಂದು ಹೇಳಿದರು.

Advertisement

ನಾನು ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ತರುವವರೆಗೂ ವಿಶ್ರಾಂತಿ ಪಡೆಯುವ ಮಾತೇ ಇಲ್ಲ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

ಜೆಡಿಎಸ್‌ ಸತ್ತೇ ಹೋಯಿತು ಎಂದು ಹೇಳಿದ ಸಿದ್ದರಾಮಯ್ಯನವರೇ ಇಲ್ಲಿ ಬಂದು ನೋಡಿ ಜೆಡಿಎಸ್‌ ಶಕ್ತಿ ಗೊತ್ತಾಗುತ್ತದೆ ಎಂದು ಗುಡುಗಿದರು.

ಲೋಕಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾತ್ರಕ್ಕೆ ಜೆಡಿಎಸ್‌ ಕಥೆ ಮುಗಿಯಿತು ಎಂದು ಹೇಳಿದರು. ಪಕ್ಷದ ಕಚೇರಿ ಕಿತ್ತಿಕೊಂಡು ಇನ್ನೆಲ್ಲಿ ನೆಲೆ ಎಂದು ಕುಹಕವಾಡಿದರು. ಆದರೆ, ಇಂದು ಕಾಂಗ್ರೆಸ್‌ನವರ ಕಣ್ಣು ಕುಕ್ಕುವಂತೆ ಜೆಡಿಎಸ್‌ ಕಟ್ಟಡ ಎದ್ದು ನಿಂತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಜೆಡಿಎಸ್‌ಅನ್ನು ಸರ್ವನಾಶ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿ ನೆರೆದಿರುವ ಲಕ್ಷಾಂತರ ಸಮೂಹ ಸಾಕ್ಷಿ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಯಾರ ಹಂಗೂ ಇಲ್ಲದೆ ಸ್ವಂತ ಶಕ್ತಿ ಮೇಲೆ ಮತ್ತೂಮ್ಮೆ  ಈ ನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ. ನಾನು ಪುತ್ರ ವ್ಯಾಮೋಹ ಅಥವಾ ಅತಿಶಯೋಕ್ತಿಯಿಂದ ಹೇಳುತ್ತಿಲ್ಲ. ರಾಜ್ಯದ ಜನರ ನಾಡಿ ಮಿಡಿತ ನನಗೆ ಗೊತ್ತಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಏನೋ ಕೊಟ್ಟು ಬಿಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದ ರೈತರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಬಜೆಟ್‌ಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 1.50 ಲಕ್ಷ ಹೆಕ್ಟೇರ್‌ ಮುಸುಕಿನ ಜೋಳ ಹಾಳಾಗಿದೆ. ಫೋಟೋ ಸಹಿತ ಪ್ರಧಾನಿ ನರೇಂದ್ರಮೋದಿ, ಕೇಂದ್ರದ ಕೃಷಿ ಸಚಿವರಿಗೆ ತೋರಿಸಿದರೂ ಕರುಣೆ ಬರಲಿಲ್ಲ ಎಂದು ನೋವು ವ್ಯಕ್ತಪಡಿಸಿದರು.

ರಾಜಾಜಿಸಬೇಕು
ಜೆಡಿಎಸ್‌ ಮುಂದಿನ ವಿಧಾನಸಭೆ ಚುನಾವಣೆಗೆ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿದೆ. ದಲಿತ ವರ್ಗಕ್ಕೆ ನ್ಯಾಯ ಕಲ್ಪಿಸುವ ಆಶಯದೊಂದಿಗೆ ಕಾನ್ಶಿàರಾಂ ಸ್ಥಾಪಿಸಿದ ಬಹುಜನ ಸಮಾಜ ಪಕ್ಷದ ನೇತೃತ್ವ ವಹಿಸಿರುವ ಮಾಯಾವತಿ ಅವರು ಅಂಬೇಡ್ಕರ್‌ ಸಿದ್ಧಾಂತ ಪಾಲಿಸುತ್ತಿರುವ ಹೆಣ್ಣುಮಗಳು. ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್‌ ಕಾರ್ಯಕರ್ತರು ಎಚ್‌.ಡಿ.ಕುಮಾರಸ್ವಾಮಿ ಜತೆ ಮಾಯಾವತಿ ಫೋಟೋ ಹಾಕಬೇಕು ಎಂದು ಕರೆ ನೀಡಿದರು.

ಬಿಎಸ್‌ಪಿ ಶಕ್ತಿ ಎಷ್ಟೇ ಇರಲಿ ನಾವು ಬಳಕೆ ಮಾಡಿಕೊಳ್ಳೋಣ. ಅವರಿಗೆ ಬಿಟ್ಟುಕೊಟ್ಟಿರುವ 20 ಕ್ಷೇತ್ರಗಳಲ್ಲಿ ನಮ್ಮ ಶಕ್ತಿ ಧಾರೆ ಎರೆಯೋಣ. ಇದರಲ್ಲಿ ಕಿಂಚಿತ್ತು ವ್ಯತ್ಯಾಸವಾದರೂ ನನಗೆ ನೋವಾಗುತ್ತದೆ ಎಂದು ಹೇಳಿದರು.

ಇಡೀ ಭಾಷಣದಲ್ಲಿ ಮಾಯಾವತಿ ಅವರನ್ನು ಹೊಗಳಿದ ದೇವೇಗೌಡರು, ಬಿಎಸ್‌ಪಿ ಜತೆಗಿನ ಮೈತ್ರಿಯಿಂದಾಗಿ ನಮಗೆ ಆನೆ ಬಲ ಬಂದಿದೆ ಎಂದು ಹೇಳಿದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್‌ ಏನು ಮಾಡಿದೆ, ಏನು ಮಾಡಿಲ್ಲ ಎಂಬುದನ್ನು ನಾನು ಟೀಕಿಸಲು ಹೋಗುವುದಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ 18 ತಿಂಗಳು ಮಾಡಿರುವ ಕೆಲಸ ಇಂದಿಗೂ ನೆನೆಯುತ್ತಾರೆ. ಅದೇ ಅವರಿಗೆ ಶ್ರೀರಕ್ಷೆ ಎಂದು ತಿಳಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್‌. ದಲಿತ ವರ್ಗವನ್ನು ಮತಬ್ಯಾಂಕ್‌ ಮಾಡಿಕೊಂಡು ಇಷ್ಟು ವರ್ಷ ಆಳಿದರೂ ಆ ವರ್ಗಕ್ಕೆ ಏನೂ ಮಾಡಲಿಲ್ಲ ಎಂದು ದೂರಿದರು.

ಪಕ್ಷದ ರಾಷ್ಟೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಫ‌ರೂಕ್‌,  ಮಾಜಿ ಸಚಿವರಾದ ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ, ಎಚ್‌.ಡಿ.ರೇವಣ್ಣ, ಬಿ.ಬಿ.ನಿಂಗಯ್ಯ, ಬಂಡೆಪ್ಪ ಕಾಶಂಪುರ್‌, ಶಾಸಕ ಮಧು ಬಂಗಾರಪ್ಪ, ಬಿಎಸ್‌ಪಿ ಮುಖಂಡರಾದ ಸತೀಶ್‌ ಮಿಶ್ರಾ, ಅಶೋಕ್‌ ಸಿದ್ದಾರ್ಥ, ಮಹೇಶ್‌, ಮಾರಸಂದ್ರ ಮುನಿಯಪ್ಪಉಪಸ್ಥಿತರಿದ್ದರು.

ಬಾಯ್ತಪ್ಪಿ ಜಯಲಲಿತ ಹೆಸರು ಪ್ರಸ್ತಾಪ
ಎಚ್‌.ಡಿ.ದೇವೇಗೌಡರು ಭಾಷಣದಲ್ಲಿ ಕಾನ್ಶಿàರಾಂ ಬೆಳೆಸಿದ ಮಾಯಾವತಿ ಎನ್ನುವ ಬದಲು ಜಯಲಲಿತ ಎಂದು ಹೇಳಿ ಅರ್ಧದಲ್ಲೇ ತಡೆದು ಮಾಯಾವತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಯಾವತಿ ಆವರಿಗೆ ಆನೆಯ ಕಲಾಕೃತಿ ಸ್ಮರಣಿಕೆಯಾಗಿ ನೀಡಲಾಯಿತು.

ಕಾವೇರಿ ಈಗ ಮಾತನಾಡಲ್ಲ
ಕಾವೇರಿ ಕುರಿತು ಇಲ್ಲಿ ಮಾತನಾಡುವುದಿಲ್ಲ ಎಂದು ಹೇಳುತ್ತಲೇ “ಸುಪ್ರೀಂಕೋರ್ಟ್‌ ತೀರ್ಪು’ ಸಂತಸ ತಂದಿದೆ ಎಂದು ಒಂದು ವರ್ಗ ಹೇಳುತ್ತಿದೆ. ಅದರ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ಕರೆದು ಹೇಳುತ್ತೇನೆ. ಇಂದು ರಾಜ್ಯದ ಪರ ಸ್ವಲ್ಪವಾದರೂ ಸಮಾಧಾನದ ತೀರ್ಪು ಬಂದಿದ್ದರೆ ಅದಕ್ಕೆ 2007 ರಲ್ಲಿ ಕಾವೇರಿ ಐ ತೀರ್ಪು ಬಂದಾಗ ಎಚ್‌.ಡಿ.ಕುಮಾರಸ್ವಾಮಿಯವರು ವಿಶೇಷ ಅರ್ಜಿ ಹಾಕಿದ್ದು ಕಾರಣ.  ಆದರೆ, ಕೆಲವರ ಪ್ರತಿಕ್ರಿಯೆಗಳು ಐವರು ಕುರುಡರು ಆನೆ ತೋರಿಸಿ ಬಗೆ ಬಗೆಯಾಗಿ ವರ್ಣಿಸಿದಂತಾಗಿದೆ  ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next