Advertisement

ಎನ್‌ಡಿಆರ್‌ಎಫ್ ಪರಿಹಾರ ಪರಿಷ್ಕರಿಸಲು ಕೇಂದ್ರಕ್ಕೆ ಆಗ್ರಹಿಸಿ: ಕುಮಾರಸ್ವಾಮಿ

10:25 PM Sep 14, 2022 | Team Udayavani |

ಬೆಂಗಳೂರು: ನಿರಂತರ ಪ್ರವಾಹಕ್ಕೆ ಸಿಲುಕುತ್ತಿರುವ ರಾಜ್ಯಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಹಾಗೂ ಎನ್‌ಡಿಆರ್‌ಎಫ್ ಪರಿಹಾರ ಪರಿಷ್ಕರಣೆ ಮಾಡಲು ಕೇಂದ್ರಕ್ಕೆ ಆಗ್ರಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

ರಾಜ್ಯದಲ್ಲಿ ಉಂಟಾದ ಪ್ರವಾಹದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆರೆ ವೀಕ್ಷಿಸಲು ಬಂದ ಕೇಂದ್ರ ತಂಡ ಏನು ಕೆಲಸ ಮಾಡಿದೆ ಎಂಬುದು ಗೊತ್ತಿಲ್ಲ. ಆ ತಂಡದ ಮುಂದೆ ಹಾವೇರಿಯ ಜನರು ಪರಿಹಾರ ಕೊಡಿಸಿ, ಇಲ್ಲದಿದ್ದರೆ ವಿಷ ಸೇವಿಸಬೇಕಾದೀತು ಎಂದು ಅಳಲು ತೋಡಿಕೊಂಡಿದ್ದಾರೆ ಎಂದರು.

ಶಿಗ್ಗಾವಿಯಲ್ಲೂ ಕೇಂದ್ರ ತಂಡದ ವಿರುದ್ಧ ರೈತರು ಅಸಮಾಧಾನಗೊಂಡಿದ್ದರು. ರಸ್ತೆಯಲ್ಲೇ ನಿಂತು ಬೆಳೆ ನಷ್ಟವನ್ನು ಅಂದಾಜಿಸಿದ್ದಾರೆ. ಹೀಗಾದರೆ ಎಷ್ಟರ ಮಟ್ಟಿಗೆ ಕೇಂದ್ರ ಸರಕಾರಕ್ಕೆ ವರದಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಕೃಷಿ ವಿವಿ ಬಗ್ಗೆ ಅಸಮಾಧಾನ
ಐದು ವರ್ಷಗಳಲ್ಲಿ ಯಾವ ರೀತಿಯಲ್ಲಿ ಸರಾಸರಿ ಮಳೆ ಹಾಗೂ ಅದರ ಪರಿಣಾಮದ ಬಗ್ಗೆ ವರದಿ ತೆಗೆದುಕೊಳ್ಳಬೇಕಿದೆ. ಸ್ಪರ್ಧೆಯಲ್ಲಿ ಕೃಷಿ ವಿವಿ ಮಾಡಿಕೊಂಡಿದ್ದೇವೆ. ಆದರೆ, ಅವರು ಏನು ಮಾಡುತ್ತಿದ್ದಾರೆ? ಐದು ವರ್ಷಗಳಲ್ಲಿ ಏನು ಕೆಲಸ ಮಾಡಿದ್ದಾರೆ? ಮಳೆ ಅನಾಹುತದ ಬಗ್ಗೆ ವೈಜ್ಞಾನಿಕವಾಗಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಮನೆಗಳ ಕುಸಿತಕ್ಕೆ 5 ಲಕ್ಷ ರೂ. ಪರಿಹಾರ ಕೊಡಲಾಗಿತ್ತು. ಇದು ಉತ್ತಮ ತೀರ್ಮಾನ. ಬೆಳೆ ಹಾನಿ ಬಗ್ಗೆಯೂ ಎನ್‌ಡಿಆರ್‌ಎಫ್ ನಿಯಮಾವಳಿ ಮೀರಿ ಪರಿಹಾರ ಕೊಡಲಾಗಿದೆ. ಬೆಂಗಳೂರು ಮಳೆ ಹಾನಿಗೆ ಪರಸ್ಪರ ಟೀಕೆ ಸರಿಯಲ್ಲ. ಇದರಿಂದ ಜನಸಾಮಾನ್ಯರ ನೋವಿಗೆ ಉತ್ತರ ಸಿಗಲ್ಲ ಎಂದರು ಅವರು.

Advertisement

ಸಿದ್ದರಾಮಯ್ಯ ಮಾತಿಗೆ ಸಹಮತ
ಪ್ರವಾಹ ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರದ್ದೂ ಜವಾಬ್ದಾರಿಯಿದೆ. ಕೇಂದ್ರವು ನಮ್ಮ ರಾಜ್ಯವನ್ನು ಕಡೆಗಣಿಸಬಾರದು ಎಂದು ಹೇಳಿದ ಎಚ್‌.ಡಿ. ಕುಮಾರಸ್ವಾಮಿ, ಬೆಳೆ ಪರಿಹಾರ ದರ ನಿಗದಿ ಸಂಬಂಧದ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪರಿಷ್ಕರಣೆ ಮಾಡಲು ನಿರ್ಣಯ ಕೈಗೊಳ್ಳಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ನನ್ನದೂ ಸಹಮತ ಇದೆ ಎಂದರು.

ವರ್ಷಗಳ ಕಾಲ ಶೆಡ್‌ನ‌ಲ್ಲಿ ಬದುಕುವುದು ಹೇಗೆ?
ಮುಖ್ಯಮಂತ್ರಿಯವರ ಜಿಲ್ಲೆಯ ಹಾವೇರಿಯಲ್ಲಿ 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಗಳು ಇಂದಿಗೂ ಶೆಡ್‌ನ‌ಲ್ಲಿ ವಾಸಿಸುತ್ತಿರುವ ಕುರಿತ ವರದಿ ಪ್ರಸ್ತಾಪಿಸಿದ ಕುಮಾರಸ್ವಾಮಿ, ಪ್ರವಾಹಕ್ಕೆ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ನೀಡಿದ್ದೇವೆ ಎಂದು ಹೇಳುತ್ತೀರಿ. ಶೇ.90 ಪ್ರಕರಣಗಳಲ್ಲಿ ಪ್ರಾರಂಭಿಕ ಮೊತ್ತ 50 ಸಾವಿರ ಅಥವಾ 1 ಲಕ್ಷ ರೂ. ಬಿಟ್ಟರೆ ಉಳಿದ ಹಣ ಕೊಟ್ಟಿಲ್ಲ. ತಾಂತ್ರಿಕ ಕಾರಣ, ಜಿಪಿಎಸ್‌ ಆಗಿಲ್ಲ ಎಂಬ ಸಬೂಬು ಹೇಳಿಕೊಂಡು ಮುಂದುವರಿಯಲಾಗುತ್ತಿದೆ. ಆದರೆ, ವರ್ಷಗಳ ಕಾಲ ಶೆಡ್‌ನ‌ಲ್ಲಿ ಕುಟುಂಬಗಳು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next