Advertisement

ನರೇಗಾಕ್ಕೆ ಜೆಸಿಬಿ-ಆಕ್ರೋಶ

11:35 AM Dec 24, 2019 | Suhan S |

ಜಗಳೂರು: ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡದೇ ಜೆಸಿಬಿಯಿಂದ ಕೆಲಸ ಮಾಡಿಸಿ ಅನ್ಯಾಯ ಮಾಡುವುದರ ಜೊತೆಗೆ ಸರಕಾರದ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದೀರೆಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ವೇತಾ ವಿರುದ್ಧ ತಾಲೂಕು ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಇಂದಿಲ್ಲಿ ಜರುಗಿತು.

Advertisement

ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ವೇತಾ ವರದಿ ಮಂಡಿಸಲು ಮುಂದಾದಾಗ, ಸದಸ್ಯ ಬಸವರಾಜ್‌ ಮಾತನಾಡಿ, ನರೇಗಾ ಯೋಜನೆಯಡಿ ನೀರು ಮತ್ತು ಮಣ್ಣು ಸಂರಕ್ಷಣೆ ಮತ್ತು ನೆಡುತೋಪು ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಸ್ವಂತ ಜೆಸಿಬಿಯಿಂದ ಕೆಲಸಮಾಡುತ್ತಿದ್ದೀರಲ್ಲ. ಬಡಕೂಲಿ ಕಾರ್ಮಿಕರ ಸ್ಥಿತಿ ಏನು ಎಂದು ಪ್ರಶ್ನಿಸಿದರು. ನಾನು ಸ್ವಂತ

ಖರ್ಚು ಮಾಡಿ ಜೆಸಿಬಿ ಕೆಲಸ ಮಾಡಿಸುತ್ತಿದ್ದೇನೆ ಎಂದು ಶ್ವೇತಾ ಮರುತ್ತರ ನೀಡಿದಾಗ ಸದಸ್ಯ ತಿಮ್ಮೇಶ್‌ ಮಧ್ಯೆ ಪ್ರವೇಶಿಸಿ, ಮುಸ್ಟೂರು ಗ್ರಾಮದಲ್ಲಿ ನೆಡುತೋಪು ಮಾಡಲು ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆಯದೇ ಕೇವಲ ಇಬ್ಬರು ಸದಸ್ಯರ ಸಹಿ ಮಾಡಿಸಿಕೊಂಡು ಉಳಿದ ಸದಸ್ಯರ ಸಹಿ ನಕಲು ಮಾಡಿರುವುದನ್ನು ದಾಖಲೆ ಸಹಿತ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಉತ್ತರ ನೀಡಿದ ಅಧಿಕಾರಿ ಸಭಾಂಗಣದ ವೇದಿಕೆಯಿಂದ ಕೆಳಗಿಳಿದು ಬಂದರು. ಇದರಿಂದ ಅಸಮಾಧಾನಗೊಂಡ ಸದಸ್ಯರು ತಮಗೆ ಅಗೌರವ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ತಾಪಂ ಇಓ ಮಲ್ಲಾನಾಯ್ಕ ಸಮರ್ಪಕವಾದ ಮಾಹಿತಿ ನೀಡಲು ಅಧಿಕಾರಿಗೆ ಸೂಚನೆ ನೀಡಿದರು. ಆದರೆ ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿ ನೀಡದೇ ತಡಬಡಾಯಿಸಿದರು. ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಸದಸ್ಯರು ಮಾಹಿತಿ ಕೇಳಿದರೆ ಪಿಡಿಒಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ತಿಮ್ಮೇಶ್‌ ಸಭೆಯ ಗಮನಕ್ಕೆ ತಂದಾಗ, ಅಂತಹ ಪಿಡಿಒಗಳ ಮಾಹಿತಿ ನೀಡಲು ಕೋರಿದರು.

ಬೆಳೆ ಹಾನಿ ಸಮೀಕ್ಷೆ ಶೇ. 99 ಪೂರ್ಣ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್‌ ವರದಿ ಮಂಡಿಸಿ, ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಶೇ. 33ರಷ್ಟು ಅಧಿಕ ಮಳೆಯಾಗಿದೆ. ಆದರೆ ಜೂನ್‌-ಜುಲೈ ತಿಂಗಳಲ್ಲಿ ಮಳೆ ಕಡಿಮೆಯಾಗಿ ಬೆಳೆ ಕೈಗೆ ಹತ್ತಿಲ್ಲ. ಹೀಗಾಗಿ ಸರಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೊಷಣೆ ಮಾಡಿದೆ. ಬೆಳೆ ಹಾನಿ ಸಮೀಕ್ಷೆ ಕಾರ್ಯ ಶೇ. 99 ರಷ್ಟು ಮುಗಿದಿದೆ ಎಂದು ಹೇಳಿದರು.

Advertisement

ಬಾಕಿ ಕಾಮಗಾರಿ ಮುಗಿಸಿ: ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿ ಕಾರಿಗಳು ಎಲ್ಲಾ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಇಒ ಸೂಚನೆ ನೀಡಿದರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್‌ ವರದಿ ಮಂಡಿಸಿ, ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು

ಅವಕಾಶವಿದೆ ಎಂದು ಸಭೆಯ ಗಮನಕ್ಕೆ ತಂದರು. ಗುರುಸಿದ್ದಪುರ ಗ್ರಾಮದಲ್ಲಿನ ಶಾಲೆಯಲ್ಲಿ ಡಾ| ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಎಸಗಿದ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯ ಬಸವರಾಜ್‌ ಪ್ರಶ್ನೆಗೆ, ಈ ವಿಷಯ ಬಿಓಗೆ ಸಂಬಂಧಪಟ್ಟಿದ್ದು ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದೇಶ್‌, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next