Advertisement

ಜಜಾರಿಯಾ, ಸರ್ದಾರ್‌ ಸಿಂಗ್‌ಗೆ ಖೇಲ್‌ರತ್ನ

07:15 AM Aug 04, 2017 | Harsha Rao |

ಪೂಜಾರ, ಕೌರ್‌ ಸಹಿತ 17 ಮಂದಿ “ಅರ್ಜುನ’ಕ್ಕೆ ಶಿಫಾರಸು
ಹೊಸದಿಲ್ಲಿ: ಪ್ಯಾರಾಲಿಂಪಿಯನ್‌ ದೇವೇಂದ್ರ ಜಜಾರಿಯಾ ಮತ್ತು ಯಶಸ್ವಿ ಹಾಕಿ ಆಟಗಾರ ಸರ್ದಾರ್‌ ಸಿಂಗ್‌ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ “ರಾಜೀವ್‌ ಗಾಂಧಿ ಖೇಲ್‌ ರತ್ನ’ಕ್ಕೆ ಶಿಫಾರಸು ಮಾಡಲಾಗಿದೆ. ಜಜಾರಿಯಾ ಈ ಪ್ರಶಸ್ತಿಗೆ ಶಿಫಾರಸು ಮಾಡಲಾದ ಪ್ರಥಮ ಪ್ಯಾರಾಲಿಂಪಿಯನ್‌ ಆ್ಯತ್ಲೀಟ್‌ ಆಗಿದ್ದಾರೆ.

Advertisement

ಪ್ಯಾರಾಲಿಂಪಿಕ್‌ ಕೂಟದಲ್ಲಿ ಎರಡು ಚಿನ್ನ ಗೆದ್ದ ಭಾರತದ ಮೊದಲ ಆ್ಯತ್ಲೀಟ್‌ ಆಗಿರುವ ಜಾವೆಲಿನ್‌ ಎಸೆತಗಾರ ಜಜಾರಿಯಾ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಸಮಿತಿಯ ಮೊದಲ ಆಯ್ಕೆಯಾಗಿದ್ದರು. ನಿವೃತ್ತ ನ್ಯಾಯಮೂರ್ತಿ ಸಿ.ಕೆ. ಥಕ್ಕರ್‌ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿ 31ರ ಹರೆಯದ ಮಿಡ್‌ಫಿàಲ್ಡರ್‌ ಸರ್ದಾರ್‌ ಅವರನ್ನು ಕೂಡ ಆಯ್ಕೆ ಮಾಡಿದೆ ಮತ್ತು ಇವರಿಬ್ಬರನ್ನು ಉನ್ನತ ಗೌರವಕ್ಕೆ ಪರಿಗಣಿಸಬಹುದೆಂದು ಸಲಹೆ ಮಾಡಿದೆ.

ಇದಲ್ಲದೇ ಕ್ರಿಕೆಟಿಗ ಚೇತೇಶ್ವರ ಪೂಜಾರ, ಹರ್ಮನ್‌ಪ್ರೀತ್‌ ಕೌರ್‌ ಸಹಿತ 17 ಮಂದಿಯನ್ನು ಅರ್ಜುನ ಪ್ರಶಸ್ತಿಗೆ ಸಮಿತಿ ಶಿಫಾರಸು ಮಾಡಿದೆ. ಆಯ್ಕೆ ಸಮಿತಿಯ ಶಿಫಾರಸನ್ನು ಮುಂದಿನ ಕೆಲವು ದಿನಗಳಲ್ಲಿ ಕ್ರೀಡಾ ಸಚಿವಾಲಯ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. 

36ರ ಹರೆಯದ ಜಜಾರಿಯಾ 2004ರ ಏಥೆನ್ಸ್‌ ಮತ್ತು ಕಳೆದ ವರ್ಷದ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ  ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಎರಡೂ ಬಾರಿಯೂ ಅವರು ನೂತನ ವಿಶ್ವದಾಖಲೆ ಸ್ಥಾಪಿಸಿ ಚಿನ್ನ ಜಯಿಸಿದ್ದರು. ಅವರು 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಪಡೆದಿದ್ದರು. 

12 ವರ್ಷಗಳ ಹಿಂದೆ ಏಥೆನ್ಸ್‌ನಲ್ಲಿ ವಿಶ್ವದಾಖಲೆಗೈದು ಚಿನ್ನ ಗೆದ್ದಾಗಲೇ ನನಗೆ ಈ ಪ್ರಶಸ್ತಿ ಲಭಿಸಬೇಕಿತ್ತು. ಆವಾಗ ಯಾಕೆ ನನ್ನನ್ನು  ಈ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲವೆಂಬುದು ತಿಳಿದಿಲ್ಲ. ಆದರೆ ಈಗಲಾದರೂ ನನ್ನ ಕಠಿನ ಪರಿಶ್ರಮಕ್ಕೆ ಬೆಲೆ ಕೊಟ್ಟಿರುವುದಕ್ಕೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಜಾರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇದೊಂದು ದೀರ್ಘ‌ ಅವಧಿಯ ಪಯಣ. ನಾವು ಪ್ರಶಸ್ತಿ ಗೆದ್ದಾಗ ಸರಕಾರ ನಮ್ಮ ಕಠಿನ ಪ್ರಯತ್ನ ಮತ್ತು ಸಾಧನೆಯನ್ನು ಗುರುತಿಸಿದೆ ಎಂದು ಹೇಳಬಹುದು. ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಮತ್ತು ನನ್ನ ಮೇಲೆ ಇನ್ನಷ್ಟು ಜವಾಬ್ದಾರಿ ತಂದಿದೆ ಎಂದು ಜಜಾರಿಯಾ ತಿಳಿಸಿದರು.

ಪ್ರಶಸ್ತಿಗೆ ಆಯ್ಕೆಯಾದ ಸುದ್ದಿಯನ್ನು ನನ್ನ ಕುಟುಂಬದ ಜತೆ ಆಚರಿಸುತ್ತಿರುವುದು ಇದೇ ಮೊದಲ ಸಲವಾಗಿದೆ. ಇದೊಂದು ನನ್ನ ಪಾಲಿಗೆ ಬಲುದೊಡ್ಡ ಗೌರವವಾಗಿದೆ. ವಿವಿಧ ಕೂಟಗಳಲ್ಲಿ ಪಾಲ್ಗೊಳ್ಳುವಾಗ ನಾನು ಕುಟುಂಬದಿಂದ ದೂರ ಇರುತ್ತಿದ್ದೆ. ಆದರೆ ನಾನೀಗ ಮನೆಯಲ್ಲಿರುವಾಗ ಈ ದೊಡ್ಡ ಸುದ್ದಿ ಬಂದಿದೆ ಎಂದರು.

ಮಾಜಿ ನಾಯಕ  ಸರ್ದಾರ್‌ ಸಿಂಗ್‌ ಭಾರತೀಯ ಹಾಕಿ ವಿಶ್ವ ಮಟ್ಟದಲ್ಲಿ ಶ್ರೇಷ್ಠ ನಿರ್ವಹಣೆ ನೀಡಲು ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವದ ಶ್ರೇಷ್ಠ ಮಿಡ್‌ಫಿàಲ್ಡರ್‌ಗಳಲ್ಲಿ ಒಬ್ಬರಾಗಿರುವ 31ರ ಹರೆಯದ ಸರ್ದಾರ್‌ ಅತೀ ಕಿರಿಯ ಆಟಗಾರರಾಗಿ ಭಾರತೀಯ ಹಾಕಿ ತಂಡದ ನಾಯಕತ್ವ ವಹಿಸಿದ್ದರು. 2008ರಲ್ಲಿ ನಡೆದ ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ ಕೂಟದ ವೇಳೆ ಸರ್ದಾರ್‌ ತಂಡವನ್ನು ಮುನ್ನಡೆಸಿದ್ದರು.

2015ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಸರ್ದಾರ್‌ ಏಶ್ಯನ್‌ ಗೇಮ್ಸ್‌ನಲ್ಲಿ ಎರಡು ಪದಕ ಜಯಿಸಿದ್ದಾರೆ. 2014ರ ಇಂಚಿಯಾನ್‌ನಲ್ಲಿ ಚಿನ್ನ ಮತ್ತು 2010ರ ಗ್ವಾಂಗ್‌ಝೂನಲ್ಲಿ ಭಾರತೀಯ ಹಾಕಿ ತಂಡ ಕಂಚು ಜಯಿಸಿತ್ತು. ಇದಲ್ಲದೇ ಸರ್ದಾರ್‌ ಎರಡು ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ಪಡೆದಿದ್ದಾರಲ್ಲದೇ 2010 ಮತ್ತು 2011ರಲ್ಲಿ ಇಂಟರ್‌ನ್ಯಾಶನಲ್‌ ಹಾಕಿ ಫೆಡರೇಶನ್‌ನ ಆಲ್‌ಸ್ಟಾರ್‌ ತಂಡದಲ್ಲಿ ಸ್ಥಾನ ಪಡೆದಿದ್ದರು.

17 ಮಂದಿಗೆ ಅರ್ಜುನ: ಕ್ರಿಕೆಟಿಗ ಚೇತೇಶ್ವರ ಪೂಜಾರ, ವನಿತಾ ವಿಶ್ವಕಪ್‌ನ ತಾರೆ ಹರ್ಮನ್‌ಪ್ರೀತ್‌ ಕೌರ್‌, ಕರ್ನಾಟಕದ ಶೂಟರ್‌ ಪ್ರಕಾಶ್‌ ನಂಚಪ್ಪ ಪ್ಯಾರಾಲಿಂಪಿಕ್‌ ಪದಕ ವಿಜೇತರಾದ ಮರಿಯಪ್ಪನ್‌ ತಂಗವೇಲು ಮತ್ತು ವರುಣ್‌ ಭಾಟಿ, ಗಾಲ#ರ್‌ ಎಸ್‌ಎಸ್‌ಪಿ ಚೌರಾಸಿಯಾ, ಟೆನಿಸ್‌ ಆಟಗಾರ ಸಾಕೇತ್‌ ಮೈನೇನಿ ಮತ್ತು ಹಾಕಿ ಆಟಗಾರ ಎಸ್‌ವಿ ಸುನೀಲ್‌ ಸಹಿತ 17 ಮಂದಿಯನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next