Advertisement

“ಜಯಸೂರ್ಯ’ಗಾಗಿ ಮುಖ್ಯಮಂತ್ರಿಯಾದ ಲಕ್ಷ್ಮೀ ಹೆಬ್ಟಾಳ್ಕರ್‌

08:00 PM Nov 09, 2017 | |

ಇತ್ತೀಚೆಗಷ್ಟೇ ಪ್ರಥಮ್‌ ಅಭಿನಯದ “ಎಂ.ಎಲ್‌.ಎ’ ಚಿತ್ರದಲ್ಲಿ ಹಿರಿಯ ಸಚಿವರಾದ ಎಚ್‌.ಎಂ. ರೇವಣ್ಣ ಅವರು ಮುಖ್ಯಮಂತ್ರಿಯಾಗಿ ನಟಿಸಿದ್ದರು. ಈಗ ಮತ್ತೂಬ್ಬ ರಾಜಕಾರಣಿ ಬಣ್ಣ ಹಚ್ಚಿರುವುದಷ್ಟೇ ಅಲ್ಲ, ನೇರವಾಗಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಚಿತ್ರವೊಂದರಲ್ಲಿ ಮುಖ್ಯಮಂತ್ರಿಯಾಗಿರುವುದು ರಾಜ್ಯ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌. ನಾಳೆ ಬಿಡುಗಡೆಯಾಗುತ್ತಿರುವ “ಜಯಸೂರ್ಯ’ ಚಿತ್ರದಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್‌, ಈ ರಾಜ್ಯದ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ಉತ್ತರ ಕರ್ನಾಟಕದ ಮಂದಿ ಸೇರಿ ಸಿನಿಮಾ ಮಾಡುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಆದರೆ, ಬಹುತೇಕ ಉತ್ತರ ಕರ್ನಾಟಕದ ಮಾಧ್ಯಮ ಮಿತ್ರರು ಸೇರಿ ಒಂದು ಸಿನಿಮಾ ಮಾಡಿ, ಈಗ ತೆರೆಗೆ ತರುತ್ತಿರುವುದು ಹೊಸ ವಿಷಯ. ಹೌದು, “ಜಯಸೂರ್ಯ’ ಸಿನಿಮಾ ಮೂಲಕ ಸಂತೋಷ್‌ ಶ್ರೀರಾಮುಡು ನಾಯಕ, ನಿರ್ದೇಶಕರಾಗುತ್ತಿದ್ದಾರೆ. ಬೆಳಗಾವಿಯಲ್ಲಿ ವಾಹಿನಿಯೊಂದರ ಪತ್ರಕರ್ತರಾಗಿರುವ ಸಂತೋಷ್‌ಗೆ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಇವರೇ ಬರೆದಿದ್ದಾರೆ. ಅಷ್ಟೇ ಅಲ್ಲ, ಅವರೇ ಈ ಚಿತ್ರದ ನಿರ್ಮಾಪಕರು.

ಇದೊಂದು ಯೋಧನೊಬ್ಬನ ಕುರಿತಾದ ಚಿತ್ರ. ನಾಯಕನ ಹೆಸರು ಇಲ್ಲಿ ಸೂರ್ಯ. ಎಲ್ಲವನ್ನೂ ಜಯಿಸುವುದರಿಂದಲೇ ಅವನನ್ನು “ಜಯಸೂರ್ಯ’ ಅಂತ ಕರೆಯುತ್ತಾರೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಜಾತಿಗಿಂತ ಪ್ರೀತಿ ದೊಡ್ಡದು, ಪ್ರೀತಿಗಿಂತ ದೇಶ ದೊಡ್ಡದು ಎಂಬ ಸಂದೇಶವಿದೆ. ಇಲ್ಲಿ ಮನಮಿಡಿಯುವ ಸನ್ನಿವೇಶಗಳಿವೆ. ಬಹುತೇಕ ಇಲ್ಲಿ ಉತ್ತರ ಕರ್ನಾಟಕ ಭಾಷೆಯೇ ಇದೆ. ಸುಮಾರು 40 ದಿನಗಳ ಕಾಲ ಬೆಳಗಾವಿ, ಗೋಕಾಕ್‌, ದಾಸನಹಟ್ಟಿ, ಗೋಕಾಕ್‌ ಫಾಲ್ಸ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಈ ಚಿತ್ರದಲ್ಲಿ ಪತ್ರಕರ್ತರಾದ ಬಯಿಬುವಾ ಕಾಂಬ್ಳೆ, ಚಂದ್ರು, ಶವಾನಂದ್‌, ಜಿತೇಂದ್ರ, ಶಂಕರ್‌ ಸೇರಿದಂತೆ ಸ್ಥಳೀಯ ಕಲಾವಿದರು ನಟಿಸಿದ್ದಾರೆ. ಇನ್ನು, ಬೆಳಗಾವಿಯ ಅಂಜಲಿ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿದ್ದು ಹಾಗು ಡಾ. ವೆಂಕಟೇಶ್‌ ಅವರು ಛಾಯಾಗ್ರಹಣ ಮಾಡಿದರೆ,  ಮುನ್ನ ಚಿತ್ರದುರ್ಗ ಅವರು ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next