Advertisement

ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ: ಜಯಪ್ರಕಾಶ್‌ ಹೆಗ್ಡೆ

09:07 PM Dec 05, 2020 | mahesh |

ಕುಂದಾಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕುಂದಾಪುರ ತಾಲೂಕಿನಲ್ಲಿರುವ ಎಲ್ಲ ವಿದ್ಯಾರ್ಥಿ ನಿಲಯಗಳಿಗೆ ಶೀಘ್ರ ಭೇಟಿ ನೀಡಿ ಪ್ರಸ್ತುತ ಸ್ಥಿತಿಗತಿಗಳ ಕುರಿತಂತೆ ಪರಿಶೀಲನೆ ನಡೆಸಲಾಗುವುದು. ಅಲ್ಲಿನ ಕುಂದುಕೊರತೆಗಳ ನಿವಾರಣೆಗೆ ಆಯೋಗದಿಂದ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಅವರು ಶನಿವಾರ ಕುಂದಾಪುರದ ತಾ.ಪಂ. ಸಭಾಂಗಣದಲ್ಲಿ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆಯ ವಿವಿಧ ಕಾರ್ಯ ಕ್ರಮಗಳ ಕುರಿತಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈಗ ರಜೆಯಿದ್ದರೂ ಪದವಿ ಕಾಲೇಜು ಗಳು ಆರಂಭಗೊಂಡಿದ್ದು, ಈಗಾಗಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲ ಹಾಸ್ಟೆಲ್‌ಗ‌ಳನ್ನು ತೆರೆಯಲಾಗಿದೆ. ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಮೊದಲೇ ವಸತಿ ನಿಲಯಗಳನ್ನು ಸುಸಜ್ಜಿತ ವಾಗಿಡುವಂತೆ, ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವ ಕುರಿತಂತೆ ಆಯೋಗದಿಂದ ಗಮನಹರಿಸಲಾಗುವುದು ಎಂದರು.

ಹುದ್ದೆ ಭರ್ತಿಗೆ ಕ್ರಮ
ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಮೇಲ್ವಿಚಾರಕರಿಗೆ ಅನೇಕ ತಿಂಗಳಿಂದ ವೇತನ ಸಿಗದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾವವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಯಪ್ರಕಾಶ್‌ ಹೆಗ್ಡೆ ಅವರು ಈ ಬಗ್ಗೆ ನಮಗೆ ಪ್ರಸ್ತಾವ ಸಲ್ಲಿಸಿ, ಅದನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಕುಂದಾಪುರ ತಾಲೂಕಿನಲ್ಲಿ ಒಟ್ಟು 85 ವಸತಿ ನಿಲಯಗಳಿದ್ದು, ಅವುಗಳಲ್ಲಿ 50 ಕಡೆಗಳಲ್ಲಿ ಹುದ್ದೆ ಭರ್ತಿಯಾಗಿದ್ದು, 35 ಕಡೆಗಳಲ್ಲಿ ಮೇಲ್ವಿಚಾರಕರ ಹುದ್ದೆ ಖಾಲಿಯಿದೆ. ಅದರಲ್ಲೂ 8 ವಿದ್ಯಾರ್ಥಿನಿ ನಿಲಯಗಳಲ್ಲಿ ಹೆಚ್ಚಿನ ಹುದ್ದೆ ಖಾಲಿಯಿದ್ದು, ಅವುಗಳ ಭರ್ತಿಗೆ ಸಂಬಂಧಿಸಿದ ಸಚಿವರು, ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

94 ಸಿ: ಮಾಹಿತಿ ಕೊಡಿ
ಇದೇ ವೇಳೆ 94 ಸಿಯಡಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಅನೇಕರಿಗೆ ಇನ್ನೂ ಕೂಡ ನಿವೇಶನದ ಹಕ್ಕುಪತ್ರ ಸಿಗಲು ಅಡ್ಡಿಯಾಗಿದ್ದು, ಇದಕ್ಕೆ ಮೀಸಲು ಅರಣ್ಯ ಪ್ರದೇಶ ಕಾನೂನು ತೊಡಕಾಗಿದೆ. ಈ ವೇಳೆ ಕಂದಾಯ, ಅರಣ್ಯ ಇಲಾಖೆಯವರು ಸಮ ನ್ವಯ ಸಾಧಿಸಿಕೊಂಡು ಪರಿಹರಿಸುವಂತೆ ಸಲಹೆ ನೀಡಿದ ಹೆಗ್ಡೆಯವರು, ಈ ಕುರಿತಂತೆ ಯಾಕೆ ಬಾಕಿ ಆಗಿದೆ. ಏನು ಕಾರಣ ಎನ್ನುವ ಬಗ್ಗೆ ಮಾಹಿತಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಹಾಸ್ಟೆಲ್‌ಗ‌ಳಿಗೆ ಸ್ವಂತ ಕಟ್ಟಡ ಇಲ್ಲದಿರುವ ಬಗ್ಗೆ, ನಿವೇಶನ ಸಿಗಬೇಕಿರುವ ಕುರಿತಂತೆ, ಸಮುದಾಯ ಭವನಗಳ ಕುರಿತಂತೆ ಸಭೆಯಲ್ಲಿ ಪ್ರಸ್ತಾವವಾಯಿತು.  ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಪುರಸಭೆ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್‌, ಕುಂದಾಪುರ‌ ವಲಯ ಅರಣ್ಯಾಧಿಕಾರಿ ಪ್ರಭಾಕರ್‌ ಕುಲಾಲ್‌, ಯುವಜನ ಸೇವಾ ಇಲಾಖೆಯ ಕುಸುಮಾಕರ್‌ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖಾಧಿಕಾರಿಗಳು ಪಾಲ್ಗೊಂಡಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಕುಡುಬಿ: ಎಸ್ಟಿಗೆ ಸೇರ್ಪಡೆಗೆ ಪ್ರಯತ್ನ
ಈ ಹಿಂದೆಯೂ ಕೂಡ ನಾನು ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನಿಸಿದ್ದೆ. ಆದರೆ ಆಗ ಎಸ್ಟಿ ಬೇಡ, ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಸ್ತಾವ ಬಂದಿತ್ತು. ಆದರೆ ಈಗ ಯಾವುದಕ್ಕೂ ಸೇರದೆ ಹಿಂದುಳಿದ ಜನಾಂಗವಾಗಿಯೇ ಉಳಿದಿದ್ದು, ಇದು ನಮ್ಮ ಆಯೋಗದ ವ್ಯಾಪ್ತಿಯೊಳಗೆ ಬಾರದಿದ್ದರೂ ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಂತೆ ಆಯೋಗದಿಂದ ಸಮಾಜ ಕಲ್ಯಾಣ ಇಲಾಖೆಗೆ ವರದಿ ಕೊಡಲಾಗುವುದು. ಇದಲ್ಲದೆ ಬೋವಿ, ನಾಯರಿ ಸೇರಿದಂತೆ ಇನ್ನೂ ಹಲವಾರು ಜಾತಿಗಳ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೆಗ್ಡೆ ಅವರು ಭರವಸೆ ನೀಡಿದರು.

ಕುಂದಗನ್ನಡ ಅಧ್ಯಯನ ಪೀಠಕ್ಕೆ ಮನವಿ
ಕುಂದಾಪುರ ಜಿಲ್ಲೆ ಬೇಡಿಕೆ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದ ಹೆಗ್ಡೆ ಅವರು, ಹೊಸ ಜಿಲ್ಲೆ ರಚನೆ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳುತ್ತದೆ. ನಾನು ಈ ಹಿಂದೆ ಕುಂದಗನ್ನಡ ಅಧ್ಯಯನ ಪೀಠ ರಚನೆ ಮಾಡುವ ಬಗ್ಗೆ ವಿ.ವಿ. ಉಪ ಕುಲಪತಿಗಳಿಗೆ ಪತ್ರ ಬರೆದಿದ್ದೆ. ಅದಕ್ಕೆ ಉತ್ತರ ಬಂದಿದ್ದು, ಕುಂದಗನ್ನಡ ಅಧ್ಯಯನ ಪೀಠ ತೆರೆಯುವ ಸಂಬಂಧ ಮಾಹಿತಿ ಕೇಳಿದ್ದಾರೆ. ಈ ಪೀಠ ರಚನೆಯಾದರೆ ತುಳುವಿನಂತೆ ಕುಂದಾಪುರ ಕನ್ನಡದ ಅಧ್ಯಯನಕ್ಕೂ ಅನುಕೂಲವಾಗಲಿದೆ ಎಂದು ಹೆಗ್ಡೆಯವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next