Advertisement

Congress ಸೇರಿದ ಜಯಪ್ರಕಾಶ್‌ ಹೆಗ್ಡೆ, ಸುಕುಮಾರ ಶೆಟ್ಟಿ, ಎಂ.ಪಿ.ಕುಮಾರಸ್ವಾಮಿ

10:49 PM Mar 12, 2024 | Team Udayavani |

ಬೆಂಗಳೂರು: ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಮೈತ್ರಿ ಪಕ್ಷಗಳಾದ ಬಿಜೆಪಿಯ ಕೆಲವು ನಾಯಕರು ಮತ್ತು ಅವರ ನೂರಾರು ಬೆಂಬಲಿಗರು ಕಾಂಗ್ರೆಸ್‌ ಸೇರಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಶಾಶ್ವತ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, ಬಿಜೆಪಿಯ ಬೈಂದೂರಿನ ಮಾಜಿ ಶಾಸಕ ಸುಕುಮಾರ್‌ ಶೆಟ್ಟಿ, ಜೆಡಿಎಸ್‌ನ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪಕ್ಷದ ಧ್ವಜ ನೀಡಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಜಯಪ್ರಕಾಶ್‌ ಹೆಗ್ಡೆ ಸೇರ್ಪಡೆಯೊಂದಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಬಹುತೇಕ ಅಂತಿಮಗೊಂಡಂತಾಗಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಂತಾಗಿದೆ. ಜಾತಿ ಜನಗಣತಿ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಹೆಗ್ಡೆ ಅವರ ಕಾಂಗ್ರೆಸ್‌ ಸೇರ್ಪಡೆ ಕುರಿತು ಗಂಭೀರ ಚರ್ಚೆಗಳು ನಡೆದಿದ್ದವು. ಈಚೆಗೆ ಪಕ್ಷದ ರಾಜ್ಯ ಉಸ್ತುವಾರಿ ಸುಜೇìವಾಲಾ ಬೆಂಗಳೂರಿಗೆ ಆಗಮಿಸಿದಾಗಲೂ ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಮೂವರೂ ನಾಯಕರು ಕಾಂಗ್ರೆಸ್‌ಗೆ ಬಂದರು ಅಂತ ಪಕ್ಷದಲ್ಲಿದ್ದವರು ಆತಂಕಪಡುವುದು ಬೇಡ. ಎಲ್ಲರಿಗೂ ಅವಕಾಶ ಸಿಗಲಿದೆ. ಟಿಕೆಟ್‌ ಯಾರಿಗೆ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈಗಾಗಲೇ ಸ್ಕ್ರೀನಿಂಗ್‌ ಕಮಿಟಿ ಸಭೆ ಆಗಿದೆ. ಮೇ 14 ಅಥವಾ 15ರಂದು ನಮ್ಮನ್ನು ದಿಲ್ಲಿಗೆ ಕರೆಯಬಹುದು. ಅನಂತರ ಟಿಕೆಟ್‌ ಘೋಷಣೆ ಆಗಲಿದೆ ಎಂದರು.

ಸಚಿವರಾದ ಡಾ| ಜಿ.ಪರಮೇಶ್ವರ, ಕೆ.ಜೆ. ಜಾರ್ಜ್‌, ಲಕ್ಷ್ಮೀ ಹೆಬ್ಬಾಳ್ಕರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್‌, ಬಿ.ಎನ್‌. ಚಂದ್ರಪ್ಪ, ನಾಯಕ ಬಿ.ಎಲ್‌. ಶಂಕರ್‌, ಚಿಕ್ಕಮಗಳೂರು ಶಾಸಕ ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

ಕಹಿ ನೆನಪುಗಳನ್ನು ಬಿಟ್ಟು ಸಿಹಿ ನೆನಪುಗಳ ಜತೆಗೆ ಹೋಗಬೇಕು ಎಂದು ಬಂದಿದ್ದೇನೆ. ಯಾರಿಗೆ ಟಿಕೆಟ್‌ ಕೊಡುತ್ತೀರೋ ಅವರನ್ನು ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಸರಕಾರದ ಗ್ಯಾರಂಟಿ ಯೋಜನೆ ಮನೆ ಮನೆಗೆ ಹೋಗಿ ತಲುಪಿಸುವ ಕೆಲಸ ಆಗಬೇಕು. ಹಿಂದಿನ ನಮ್ಮ ಕೆಲಸ ಕಾರ್ಯಗಳನ್ನು ಯುವಜನರಿಗೆ ಹೇಳಿದರೆ ಖಂಡಿತ ಮತ್ತೆ ನಾವು ಕರಾವಳಿ ಭಾಗದಲ್ಲಿ ಅಧಿಕಾರ ಹಿಡಿಯಬಹುದು.
-ಜಯಪ್ರಕಾಶ್‌ ಹೆಗ್ಡೆ

ಬೈಂದೂರಿನಲ್ಲಿ ಮನೆ ಮನೆಗೆ ಹೋಗಿ ಬಿ.ವೈ. ರಾಘವೇಂದ್ರ ಅವರಿಗೆ 25 ಸಾವಿರ ಲೀಡ್‌ ಕೊಡುವಂತೆ ಮಾಡಿದೆ. ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಬೇಕಾದರೆ, ಬೈಂದೂರಿನಲ್ಲಿ ಆ ಪಕ್ಷಕ್ಕೆ ಮತ ಬೀಳಬೇಕು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಮ್ಮದು ಪ್ರಾಮಾಣಿಕ ಗರ್ಭಗುಡಿ, ಅವರದ್ದು (ಬಿಜೆಪಿ) ಡೂಪ್ಲಿಕೇಟ್‌ ಗರ್ಭಗುಡಿ.
-ಸುಕುಮಾರ ಶೆಟ್ಟಿ

ಕಾಂಗ್ರೆಸ್‌ಗೆ ಹೋಗಬೇಡಿ, ಸರಕಾರ ಬೀಳುತ್ತದೆ ಎಂದು ಕೆಲವರು ಹೇಳಿದರು. ಆದರೆ ಯಾಕೆ ಬೀಳುತ್ತದೆ ಅಂತ ನಾನು ಇಲ್ಲಿಗೆ ಬಂದಿದ್ದೇನೆ. ಸಂವಿಧಾನ ಉಳಿಸಬೇಕು. ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿಗೆ ಬುದ್ಧಿ ಕಲಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಅದು ಪುನರಾವರ್ತನೆ ಆಗಲಿದೆ.
-ಎಂ.ಪಿ. ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next