Advertisement

Farmers ಬದುಕಿಗೆ ಉಸಿರಾದ ಜಯಪ್ರಕಾಶ್‌ ಹೆಗ್ಡೆ: ಜಿ.ಎಚ್.ಶ್ರೀನಿವಾಸ್‌

07:06 PM Apr 21, 2024 | Team Udayavani |

ತರೀಕೆರೆ: ಸಂಸದರಾಗಿ ಅಲ್ಪ ಅವಧಿಯಲ್ಲಿ ಅಧಿಕಾರದಲ್ಲಿದ್ದರೂ ಜಯಪ್ರಕಾಶ್‌ ಹೆಗ್ಡೆ ಅವರು ತಮ್ಮ ಕ್ಷೇತ್ರದ ಜನರ ಬದುಕಿಗಾಗಿ ಶ್ರಮಿಸಿದ್ದಾರೆ. ಅಡಿಕೆ ಮತ್ತು ಕಾಫಿ ಬೆಳೆಗಾರರ ಬದುಕಿನ ಧ್ವನಿಯಾಗಿದ್ದಾರೆ. ಅವರನ್ನು ಸಂಸತ್ತಿಗೆ ಆಯ್ಕೆ ಮಾಡುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಅದೃಷ್ಟ. ಆದ್ದರಿಂದ ನಾವೆಲ್ಲರೂ ಜಯಪ್ರಕಾಶ್‌ ಹೆಗ್ಡೆ ಅವರ ಜಯಕ್ಕಾಗಿ ಪಣ ತೊಟ್ಟಿದ್ದೇವೆ ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್‌ ಹೇಳಿದರು.

Advertisement

ಅವರು ತರೀಕೆರೆ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಮತಪ್ರಚಾರದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. “ಸುಳ್ಳು ಭರವಸೆಗಳನ್ನು ನೀಡಿ ನಮ್ಮಿಂದ ಓಟು ಪಡೆದು ಜಯ ಗಳಿಸಿದ ಬಿಜೆಪಿಯ ಸಂಸದರು ಒಮ್ಮೆಯೂ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ, ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಮಾತನಾಡುವುದೇ ಬೇಡ. ಕ್ಷೇತ್ರಕ್ಕೆ ಬಂದರೆ ತಾನೇ ಜನರ ಕಷ್ಟ ಅರ್ಥವಾಗುವುದು? ಅವರು ಪಲಾಯನ ಗೈದಿದ್ದಾರೆ. ಅವರ ಪಕ್ಷದವರೇ “ಗೋ ಬ್ಯಾಕ್‌” ಎಂದು ಅಭಿಯಾನ ಆರಂಭಿಸಿದ ಕಾರಣ ಇಂದು ಇನ್ನಾವುದೋ ಕ್ಷೇತ್ರವನ್ನು ಪ್ರತಿನಿಧಿಸಬೇಕಾದ ಪರಿಸ್ಥಿತಿ ಎದುರಾಯಿತು. ಜಯಪ್ರಕಾಶ್‌ ಹೆಗ್ಡೆ ಹಾಗಲ್ಲ, ಅಧಿಕಾರ ಇರಲಿ ಇಲ್ಲದಿರಲಿ ನಮ್ಮಲ್ಲಿಯ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ” ಎಂದರು.

ಅಡಿಕೆಗೆ ಇಂದು ಉತ್ತಮ ಬೆಲೆ ಸಿಗುತ್ತಿದ್ದರೆ ಅದಕ್ಕೆ ಮೂಲ ಕಾರಣ ಜಯಪ್ರಕಾಶ ಹೆಗ್ಡೆ. ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ” ಎಂದರು.

“ಕಾಂಗ್ರೆಸ್‌ ಸರಕಾರ ನೀಡಿರುವ ಐದು ಗ್ಯಾರೆಂಟಿ ಯೋಜನೆಗಳಿಂದ ಬಡವರು ನೆಮ್ಮದಿಯ ದಿನಗಳನ್ನು ಕಳೆಯುವಂತಾಗಿದೆ, ಕೇಂದ್ರದಲ್ಲಿ ಕಾಂಗ್ರೆಸ್‌ ಮೈತ್ರಿ “ಇಂಡಿಯಾ” ಸರಕಾರ ಆಡಳಿತಕ್ಕೆ ಬಂದರೆ ಬಡವರಿಗೆ ಇನ್ನಷ್ಟು ಗ್ಯಾರೆಂಟಿ ಯೋಜನೆಗಳು ಸಿಗಲಿವೆ. ಸಂಸತ್‌ನಲ್ಲಿ ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಒಬ್ಬ ಸಮರ್ಥ ಪ್ರತಿನಿಧಿ ಬೇಕಾಗಿದೆ, ಆ ಸಮರ್ಥ ನಾಯಕ ಜಯಪ್ರಕಾಶ್‌ ಹೆಗ್ಡೆಯೇ ಆಗಿರುತ್ತಾರೆ. ಸುಳ್ಳು ಭರವಸೆಗಳನ್ನು ನೀಡಿ, ಕೈಯಲ್ಲಿ ʼಚೊಂಬುʼ ನೀಡಿರುವ ಕೇಂದ್ರ ಸರಕಾರದ ಬಗ್ಗೆ ಜನರಿಗೆ ಜಿಗುಪ್ಸೆ ಉಂಟಾಗಿದೆ. ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದಿರುವ ಕಾರಣ ಮತ್ತೊಮ್ಮೆ ಮುಖ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ಪ್ರಜ್ಞಾವಂತರಾದ ಕ್ಷೇತ್ರದ ಜನ ಜಯಪ್ರಕಾಶ್‌ ಹೆಗ್ಡೆ ಅವರನ್ನು ಆಯ್ಕೆ ಮಾಡುವುದು ಜವಾಬ್ದಾರಿಯಾಗಿದೆ” ಎಂದರು.

ಜಯಪ್ರಕಾಶ್‌ ಹೆಗ್ಡೆ ಅವರು ಮಾತನಾಡಿ, “ಕ್ಷೇತ್ರದ ಜನಪ್ರತಿಯೊಬ್ಬರು ಸಂಸದರಾಗಿ, ಕೇಂದ್ರದಲ್ಲಿ ಕೃಷಿ ಸಚಿವರಾಗಿ ತಮ್ಮ ಕ್ಷೇತ್ರದ ಕೃಷಿಕರ, ಬಡವರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಬೇಸರದ ಸಂಗತಿ. ಉತ್ತಮ ಯೋಜನೆ ಮತ್ತು ಯೋಜನೆಗಳೊಂದಿಗೆ ಸ್ಪರ್ಧಿಸಿದರೆ ಜಯದ ನಂತರ ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಜನರ ಪ್ರತಿನಿಧಿ ಜನರ ನಡುವೆಯೇ ಇದ್ದು ಅವರ ಸಂಕಷ್ಟಗಳನ್ನು ಆಲಿಸಬೇಕು. ತಾವು ಆಯ್ಕೆ ಮಾಡಿದ ಅಭ್ಯರ್ಥಿಗಳು ಕೆಲಸ ಮಾಡದಿದ್ದಾಗ ಆ ಜನಪ್ರತಿನಿಧಿಯನ್ನು ಪ್ರಶ್ನಿಸುವಂತಾಬೇಕು. ಜನಪ್ರತಿನಿಧಿ ತನ್ನ ಕ್ಷೇತ್ರಕ್ಕೆ ಮರಳಿ ಬಾರದಿದ್ದಾಗ ಪ್ರಶ್ನಿಸುವುದಾದರೂ ಯಾರನ್ನು? ಆದ್ದರಿಂದ ಪ್ರಗತಿಯನ್ನೇ ಉಸಿರಾಗಿಸಿಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ” ಎಂದು ಮನವಿ ಮಾಡಿದರು.

Advertisement

“ಯುವಕರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದವರು ಮೌನಕ್ಕೆ ಶರಣಾಗಿದ್ದಾರೆ. ದೇಶದ ಶಕ್ತಿಯಾಗಿರುವ ಯುವಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡುವಲ್ಲಿ ಪೂರಕವಾದ ಉದ್ಯಮಗಳನ್ನು ಸ್ಥಾಪಿಸಬೇಕು. ಲಾಭದಲ್ಲಿರುವ ನಮ್ಮ ಬ್ಯಾಂಕ್‌ಗಳನ್ನು ನಷ್ಟದಲ್ಲಿರುವ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡಿರುವುದು ಅರ್ಥ ಹೀನ. ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ವೈದ್ಯಕೀಯ ಕಾಲೇಜು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ನಮ್ಮ ಕನಸುಗಳನ್ನು ನನಸಾಗಿಸಲು ಕಾಂಗ್ರೆಸ್‌ಗೆ ಮತ ನೀಡಿ. ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕಾಗಿರುವುದು ಇಂದಿನ ತುರ್ತು ಆಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next